ಆ ಸಂಜೆ ಕತ್ತಲೆಯಿಂದ ಕೂಡಿದ ವೇದಿಕೆಯಂತಹ ಜಾಗವೊಂದರ ಮೇಲೆ ನಿಂತಿದ್ದ ಗಂಡಸರು ಮತ್ತು ಹೆಂಗಸರ ನೆರಳುರೂಪಗಳು ಪ್ರೇಕ್ಷಕರನ್ನು ಸ್ವಾಗತಿಸಿದವು. "ವರ್ಷದಿಂದ ವರ್ಷಕ್ಕೆ, ನದಿಯು ಎತ್ತರದ ಬೆಟ್ಟಗಳಿಂದ ಕೊಚ್ಚಿಕೊಂಡು ತಂದ ಮಣ್ಣಿನ ರಾಶಿಗಳು ಸಮುದ್ರ ತೀರಕ್ಕೆ ಸಮಾನಾಂತರವಾಗಿ ನೆಲೆಗೊಂಡು, ಹಿನ್ನೀರಿನ ಉದ್ದಕ್ಕೂ ದ್ವೀಪಗಳು ರೂಪುಗೊಂಡವು." ಹೀಗೆ ಹಿನ್ನೆಲೆಯಿಂದ ಕೇಳಿಬಂದ ದನಿಯೊಂದು ಕೇರಳದ ಎರ್ನಾಕುಲಂ ಕರಾವಳಿ ಪ್ರದೇಶದ ಗ್ರಾಮಗಳ ಭೂಮಿ ಮತ್ತು ಇತಿಹಾಸವನ್ನು ಪರಿಚಯಿಸಿತು. ಈ ನೆರಳುರೂಪಗಳ ಹಿಂಬದಿಯ ಪರದೆಯ ಮೇಲೆ ತೋರಿಸಲ್ಪಟ್ಟ ಚಿತ್ರಗಳು ಮುಂದೆ ಕ್ರಿ.ಶ. 1341ರಲ್ಲಿ ಈ ಪ್ರದೇಶವು ಐತಿಹಾಸಿಕ ಬಂದರು ನಗರಿ ಮುಜಿರಿಸ್ನ ಭಾಗವಾಗಿದ್ದ ಕಾಲದಿಂದ ಆರಂಭಿಸಿ ಇಲ್ಲಿನ ಇತಿಹಾಸವನ್ನು ಕಥೆಯ ರೂಪದಲ್ಲಿ ವಿವರಿಸಲಿದ್ದವು.
ವೇದಿಕೆಯ ಮೇಲೆ ಮಂದ ಬೆಳಕು ಚೆಲ್ಲುತ್ತಿದ್ದಂತೆ, ಪ್ರವಾಹದ ನೀರಿನಿಂದ ಆವೃತವಾದ ಬೀದಿಯ ಮನೆಯೊಂದರ ಮುಂಭಾಗದಲ್ಲಿ ಹತ್ತು ಪಾತ್ರಗಳು ಮೊಣಕಾಲುದ್ದ ನೀರಿನಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ. ಹಿನ್ನೆಲೆಯಲ್ಲಿ ಸೈರನ್ ತರಹದ ಸದ್ದು ತೀವ್ರಗೊಳ್ಳುತ್ತಿದ್ದಂತೆ, ಆ ಪಾತ್ರಗಳು ನೀರಿನಲ್ಲಿ ಗುಳುಗುಳು ಶಬ್ದ ಮಾಡುತ್ತಾ, ನಿಧಾನಗತಿಯ ಹಸಿ ಹೆಜ್ಜೆಗಳನ್ನಿಡುತ್ತಾ ಪ್ರೇಕ್ಷಕರತ್ತ ಸಾಗಿಬರುತ್ತವೆ.
ವೇದಿಕೆಯ ಮೇಲಿರುವ ಆ ಹತ್ತು ಕಲಾವಿದರಲ್ಲಿ ಶೈಲಜಾ ಕೆ. ಎಸ್. ಕೂಡ ಒಬ್ಬರು. ಈ ನಾಟಕದ ಹೆಸರು ಚೆವಿತ್ತೋರ್ಮ — ಸಾಯುತ್ತಿರುವ ವ್ಯಕ್ತಿಗೆ ಸಮಾಧಾನ ನೀಡಲು ಆತನ ಕಿವಿಯಲ್ಲಿ ಪ್ರಾರ್ಥನೆಯನ್ನು ಪಿಸುಗುಟ್ಟುವ ಸ್ಥಳೀಯ ಕ್ಯಾಥೊಲಿಕ್ ಆಚರಣೆಯ ಹೆಸರಿದು. ಈ ನಾಟಕದಲ್ಲಿ ಅಭಿನಯಿಸುತ್ತಿರುವ ಇತರರೆಲ್ಲರಂತೆ ಶೈಲಜಾ ಅವರಿಗೂ ನಟನೆಯ ಯಾವುದೇ ಪೂರ್ವಾನುಭವವಿಲ್ಲ. ಹಾಗೆ ನೋಡಿದರೆ, ಈ ಸಮುದಾಯ ರಂಗಭೂಮಿ ಅವರ ಪಾಲಿಗೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಗಡಿಯನ್ನು ಒರೆಸಿ ಹಾಕಿದ ತಾಣ.
"ಬಾಲ್ಯದಲ್ಲಿ ನಾನು ಬಹಳ ತುಂಟಿಯಾಗಿದ್ದೆ ಎಂದು ಅಮ್ಮ ಆಗಾಗ ಹೇಳುತ್ತಿದ್ದರು. ಆದರೆ ನಾನು ಕೇವಲ ತುಂಟಿಯಷ್ಟೇ ಅಲ್ಲ. ಒಂದು ನಡೆದಾಡುವ ಪುಟ್ಟ ತೂಫಾನೇ ಅಗಿದ್ದೆ ಎನ್ನುವುದು ಹೆಚ್ಚು ಸರಿ. ಆ ದಿನಗಳಲ್ಲಿ ಅಮ್ಮ ಕತೆ ಹೇಳುತ್ತಾ ತುತ್ತು ತಿನ್ನಿಸುತ್ತಿದ್ದಳು. ಬೆಚ್ಚಗಿನ ಅಅನ್ನ, ಅದರ ಮೇಲೆ ಹಿತವಾಗಿ ಸುರಿದ ತೆಂಗಿನೆಣ್ಣೆ ಮತ್ತು ಉಪ್ಪನ್ನು ಕಲಸಿದಾಗ ಬರುತ್ತಿದ್ದ ಆ ದೈವಿಕ ಪರಿಮಳ ಮತ್ತು ಬಾಯಲ್ಲಿ ನೀರೂರಿಸುವ ರುಚಿ…! ಒಂದು ಸಲ ಕೈನೋಡುವ ಮಹಿಳೆಯೊಬ್ಬಳು ಮನೆಯ ಬಾಗಿಲಿಗೆ ಬಂದಳು. ಅವಳು, ‘ಈಕೆ ಒಂದು ದಿನ ಈ ಮನೆಯನ್ನೆಲ್ಲಾ ಬರಿದು ಮಾಡುತ್ತಾಳೆ. ಕಡೆಗೆ ಒಂದು ಕಾಳು ಉಪ್ಪನ್ನೂ ಬಿಡದೆ ತೆಗೆದುಕೊಂಡು ಹೋಗುತ್ತಾಳೆ!’ ಎಂದಳು. ಅದು ನನ್ನನ್ನು ಚಿಂತೆಗೀಡುಮಾಡಿತು. ಅಲ್ಲಿದ್ದವರೆಲ್ಲ ಅದನ್ನು ಕೇಳಿ ನಕ್ಕರು. ಆದರೆ ನನಗೆ ಒಂದು ನಾನು ಹೀಗೆ ಮಾಡುಬಹುದೇ ಎನ್ನುವ ಚಿಂತೆ ಕಾಡಿತು.
"ಎಷ್ಟೋ ವರ್ಷದ ನಂತರ, 2018ರಲ್ಲಿ ಅಮ್ಮ ನಾನಿದ್ದಲ್ಲಿಗೆ ಬಂದಿದ್ದರು. ಪಾಪ ಒಂದಷ್ಟು ದಿನ ಜೊತೆಗಿದ್ದು ಹೋಗಲೆಂದು ಬಂದಿದ್ದರು." ಕೈಯಲ್ಲಿ ಉಪ್ಪಿನ ಡಬ್ಬಿ ಹಿಡಿದುಕೊಂಡೇ ಶೈಲಜಾ ನೆರೆಯ ಬೆನ್ನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡ ಕತೆಯನ್ನು ನಾಟಕದಲ್ಲಿ ತಲ್ಲೀನರಾಗಿದ್ದ ಪ್ರೇಕ್ಷಕರಿಗೆ ವಿವರಿಸುತ್ತಿದ್ದರು.
"ರಂಗತಂಡವೆನ್ನುವುದು ನಮ್ಮ ಪಾಲಿಗೆ ಕುಟುಂಬವಿದ್ದಂತೆ. ಇದು ನನ್ನ ಮಾನಸಿಕ ನೆಮ್ಮದಿಯನ್ನು ಮರಳಿ ತಂದುಕೊಟ್ಟಿತು. ನಾನೂ ಏನನ್ನಾದರೂ ಸಾಧಿಸಬಲ್ಲೆ, ಸಮಾಜಕ್ಕೆ ಕೊಡುಗೆ ನೀಡಬಲ್ಲೆ ಎನ್ನುವ ನಂಬಿಕೆಯನ್ನು ಇದು ನನ್ನಲ್ಲಿ ಹುಟ್ಟಿಸಿತು" ಎಂದು 57 ವರ್ಷದ ಸ್ವಾವಲಂಬಿ ಶೈಲಜಾ ಹೆಮ್ಮೆಯಿಂದ ಹೇಳುತ್ತಾರೆ. ತನ್ನನ್ನು ಗೃಹಿಣಿ ಎಂದು ಕರೆದುಕೊಳ್ಳುವ ಅವರು, ಜೀವನೋಪಾಯಕ್ಕಾಗಿ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುವ ಉದ್ಯಮಿ ಕೂಡ ಹೌದು. ಇತ್ತೀಚೆಗಷ್ಟೇ ಅವರು ಆಭರಣ ಮಳಿಗೆಯೊಂದರ ಮಾರಾಟ ವಿಭಾಗದಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದಾರೆ. "2018ರಲ್ಲಿ ನಡೆದ ಕಹಿ ಘಟನೆಯ ನೆನಪಿನಿಂದ ಹೊರಬರಲು, ನನ್ನ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ನಾವು [ನೆರೆಯನ್ನು] ಹೇಗೆ ಎದುರಿಸುತ್ತೇವೆ ಎನ್ನುವುದನ್ನು ಆದರ ಕುರಿತಾದ ಕಲ್ಪನೆಯೂ ಇರದ ಜನರಿಗೆ ವಿವರಿಸಲು ಈ ರಂಗಭೂಮಿ ನನಗೆ ಸಹಾಯ ಮಾಡಿತು."


















