ಹಗಲು ಕಳೆದು ಕತ್ತಲು ಆವರಿಸುವ ಸಂಜೆಯನ್ನು ನೋಡಿಯೇ ನನಗೆ ಈ ಹೆಸರಿಟ್ಟರು. ನನ್ನ ಮೈಬಣ್ಣ ಕಪ್ಪಾಗಿರುವ ಕಾರಣ ಮನೆಯವರು ನನ್ನನ್ನು ‘ಸಂಧ್ಯಾʼ [ಸಂಜೆ] ಎಂದು ಕರೆದರು.
ನನ್ನ ಕಪ್ಪು ಮೈಬಣ್ಣದಿಂದಾಗಿ ಮನೆಯವರು ನನಗೆ ಹೆಚ್ಚಿನ ಪ್ರೀತಿಯನ್ನು ನೀಡಲಿಲ್ಲ. ಇದು ನನ್ನ ಬಾಲ್ಯದ ಅನುಭವ, ಇದು ಚರ್ಮದ ಬಣ್ಣದ ಆಧಾರದ ಮೇಲೆ ತೋರುವ ತಾರತಮ್ಯದ ಬಗ್ಗೆ ನನ್ನಲ್ಲಿ ಅರಿವನ್ನು ಮೂಡಿಸಿತು, ಆ ಅರಿವು ನನ್ನಲ್ಲಿ ಈಗಲೂ ಇದೆ.
ನಾನು 1996 ರಲ್ಲಿ ಜಾರ್ಖಾಂಡಿನ ಸಂಘಾರಿ ಎಂಬ ಗ್ರಾಮದ ಮುಂಡ ಆದಿವಾಸಿ ಕುಟುಂಬದಲ್ಲಿ ಜನಿಸಿದೆ. ನನ್ನ ತಾಯಿ ನಿರ್ಮಲಾ ಕೆರ್ಕೆಟ್ಟಾ, ತಂದೆ ಸುಮನ್ ಲಕ್ರಾ. ನನ್ನ ಮನೆ ಜಾರ್ಖಾಂಡ್ನ ಚತ್ರಾ ಜಿಲ್ಲೆಯಲ್ಲಿ, ಬಿಹಾರದ ಗಡಿಭಾಗದಲ್ಲಿದೆ. ಮನೆಯ ಸುತ್ತಮುತ್ತ ಕಾಡುಗಳು, ನದಿ-ತೊರೆಗಳಿವೆ.
ನನ್ನ ಅಪ್ಪ ಅಮ್ಮ ಕೃಷಿಕರು. ಸಿಸನ್ಗೆ ಅನುಗುಣವಾಗಿ ನಾವು ನಮ್ಮ ಎರಡು ಎಕರೆ ಭೂಮಿಯಲ್ಲಿ ಓಕ್ರ (ಬೆಂಡೆಕಾಯಿ), ಬೀನ್ಸ್, ಬಟಾಟೆ, ಹೂಕೋಸು ಮತ್ತು ಕ್ಯಾರೆಟ್ ಬೆಳೆಯುತ್ತೇವೆ. ನಾವು ಭತ್ತದ ಕೃಷಿ ಕೂಡ ಮಾಡುತ್ತೇವೆ. ಆದರೆ ವ್ಯವಸಾಯದಿಂದ ನಮಗೆ ಬರುವ ಆದಾಯ ತುಂಬಾ ಕಡಿಮೆ. ನನ್ನ ಅಪ್ಪ ಬೇರೆಯವರ ಹೊಲದಲ್ಲಿ ದಿನಗೂಲಿಗೆ ಕೆಲಸ ಮಾಡುತ್ತಾರೆ, ರಸ್ತೆ ನಿರ್ಮಾಣ ಮತ್ತು ಬಾವಿ ತೋಡುವ ಕೆಲಸಗಳನ್ನೂ ಮಾಡುತ್ತಾರೆ. ಆದರೆ ಕೃಷಿಯಿಂದ ಬರುವ ವರಮಾನ ಮತ್ತು ನನ್ನ ತಂದೆಯ ಕೂಲಿಗೆಲಸದ ಸಂಬಳವೆಲ್ಲವನ್ನೂ ಲೆಕ್ಕ ಹಾಕಿದರೆ ನಮ್ಮ ವರ್ಷದ ಆದಾಯ ಸುಮಾರು 30,000 ಮಾತ್ರ.
ನಮ್ಮ ಅಪ್ಪ-ಅಮ್ಮ ಮಹುವಾದಿಂದ [ಮಧುಕಾ ಲಾಂಜಿಫೋಲಿಯಾ ವರ್. ಲ್ಯಾಟಿಫೋಲಿಯಾ] ಸಾರಾಯಿ ತೆಗೆದು ಮಾರುತ್ತಾರೆ. ಇದರಿಂದ ಬರುವ ಹಣದಿಂದ ನಮ್ಮ ಮನೆಯಲ್ಲಿರುವ ಆರು ಮಂದಿಯ ಹೊಟ್ಟೆ ತುಂಬಿಸುತ್ತಾರೆ. ನನಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನಿದ್ದಾನೆ. ನಮ್ಮ ಅಪ್ಪ-ಅಮ್ಮ ಊರಿನಲ್ಲಿ ಸಿಹಿತಿಂಡಿಗಳನ್ನು ಮಾರುವ ಒಂದು ಸಣ್ಣ ಅಂಗಡಿ ಕೂಡ ಹಾಕಿಕೊಂಡಿದ್ದಾರೆ, ಇದರಿಂದ ಬರುವ ಹಣದಲ್ಲಿ ನಮ್ಮನ್ನು ಓದಿಸುತ್ತಾರೆ.
ಸುಮಾರು 15 ಜನ ಸದಸ್ಯರು ಇರುವ ಮನೆಯಲ್ಲಿ ವಾಸಿಸುವುದೆಂದರೆ ಕೂತುಕೊಳ್ಳಲೂ ಪುರುಸೋತ್ತು ಇಲ್ಲದಷ್ಟು ಕೆಲಸಗಳಿರುತ್ತವೆ. ನಾನು ಬೆಳೆದಂತೆ ಸ್ವಂತ ಮನೆಯಲ್ಲಿಯೇ ಸೇವಕಿಯಂತೆ ಕೆಲಸ ಮಾಡಬೇಕಿತ್ತು. ನಾನು 7 ವರ್ಷದವಳಾಗಿದ್ದಾಗ, 2 ನೇ ತರಗತಿಯಲ್ಲಿಯೇ ಮನೆಯ ಎಲ್ಲಾ ಕೆಲಸಗಳನ್ನು ಮಾಡಲು ಶುರುಮಾಡಿದ್ದೆ. ಮನೆಯ ಎಲ್ಲರಿಗೂ ಅಡುಗೆ ತಯಾರಿಸುತ್ತಿದ್ದೆ, ಪಾತ್ರೆ ತೊಳೆಯುತ್ತಿದ್ದೆ, ಇಡೀ ಮನೆಯನ್ನು ಹಾಗೂ ದನಗಳ ಹಟ್ಟಿಯನ್ನು (ಗೋಶಾಲಾ) ಗುಡಿಸಿ ಸ್ವಚ್ಛಮಾಡುತ್ತಿದ್ದೆ, ದನಗಳು ಹಾಗೂ ಆಡುಗಳನ್ನು ಮೇಯಿಸುತ್ತಿದ್ದೆ, ಕಾಡಿಗೆ ಹೋಗಿ ಕಟ್ಟಿಗೆ ತರುತ್ತಿದೆ, ಹೀಗೆ ತುಂಬಾ ಕೆಲಸಗಳನ್ನು ಮಾಡುತ್ತಿದ್ದೆ.


















