ಅದು ಬೆಳಗಿನ ಜಾವದ ಹೊತ್ತು. ಸೂರ್ಯ ಇನ್ನೂ ತನ್ನ ಅಂದಿನ ಕೆಲಸಕ್ಕೆ ಹಾಜರಾಗಿರಲಿಲ್ಲ. ಆದರೆ ಅಷ್ಟು ಹೊತ್ತಿಗಾಗಲೇ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಹಥುವಾ ಎಂಬ ಈ ಪುಟ್ಟ ಪಟ್ಟಣವನ್ನು ಎರಡು ಬೇರೆ ಬೇರೆ ದನಿಗಳು ಜನರನ್ನು ಎಬ್ಬಿಸುತ್ತಿದ್ದವು. ಒಂದು, ಅಲ್ಲಿನ ಕೆಲವು ಮಸೀದಿಗಳ ಮಿನಾರುಗಳಿಂದ ಮೊಳಗುವ ಮುಖ್ತಿಯಾರರ ಆಜಾನ್ ಕರೆಯಾದರೆ, ಇನ್ನೊಂದು ಆ ಭಾಗದ ಮೂರ್ನಾಲ್ಕು ದೇವಾಲಯಗಳಿಂದ ಕೇಳಿಬರುವ ಭಜನಾ ಮಂಡಳಿಯ ಹಾಡುಗಾರಿಕೆ. ಮಧುರವಾದ 'ಅಲ್ಲಾಹು ಅಕ್ಬರ್! ಅಲ್ಲಾಹು ಅಕ್ಬರ್! ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹ...' ಎಂಬ ಉದ್ಘೋಷವು, ತಾಳದ ಲಯಕ್ಕೆ ತಕ್ಕಂತೆ ಜಪಿಸುವ 'ಹರೇ ರಾಮ, ಹರೇ ಕೃಷ್ಣ, ಹರೇ ಕೃಷ್ಣ, ಹರೇ ರಾಮ' ಎಂಬ ಮಂತ್ರಘೋಷದೊಂದಿಗೆ ಬೆರೆಯುತ್ತಿತ್ತು. ಅಷ್ಟರಲ್ಲೇ, ಆ ವಾತಾವರಣದಲ್ಲಿ ಮತ್ತಷ್ಟು ಹತ್ತಿರದಿಂದ ತೇಲಿಬಂದ ಕೊಳಲಿನ ನಾದವೊಂದು ಇವೆಲ್ಲ ದನಿಯನ್ನು ಒಟ್ಟುಗೂಡಿಸಿ ಇನ್ನಷ್ಟು ಇಂಪಾಗಿಸಿತು.
ಕೊಳಲಿನಿಂದ ಹೊಮ್ಮುತ್ತಿದ್ದ ಮಧುರ ಸ್ವರ ಮತ್ತು ಆ ಕಲಾವಿದನನ್ನು ಭೇಟಿಯಾಗಬೇಕೆನ್ನುವ ಹಂಬಲವೇ ನನ್ನನ್ನು 176 ವರ್ಷಗಳಷ್ಟು ಹಳೆಯದಾದ ಗೋಪಾಲ ದೇವಸ್ಥಾನದತ್ತ ಕರೆದೊಯ್ದಿತು. ಹಥುವಾದ ಅಂದಿನ ಮಹಾರಾಣಿ ಶ್ಯಾಮ್ ಸುಂದರಿ ಕುವರ್ ಅವರು 1850 ಮತ್ತು 1866 ರ ನಡುವೆ ನಿರ್ಮಿಸಿದ ಈ ಸುಂದರ ಕಟ್ಟಡದ ಸುತ್ತಲೂ ಹಳೆಯ ಕೋಟೆ, ಹೊಸ ಕೋಟೆ ಮತ್ತು ಶೀಶ್ ಮಹಲ್ ಆವರಿಸಿಕೊಂಡಿವೆ. ಆ ಕಾಲದಲ್ಲೇ ಸುಮಾರು 4,50,000 ಬೆಳ್ಳಿ ನಾಣ್ಯಗಳ ವೆಚ್ಚದಲ್ಲಿ (ಇಂದಿನ ಮೌಲ್ಯದಲ್ಲಿ ಸರಿಸುಮಾರು 55 ಕೋಟಿ ರೂಪಾಯಿಗಳು) ನಿರ್ಮಾಣಗೊಂಡ ಈ ರಾಜವಂಶದ ದೇವಾಲಯದ ಬೃಹತ್ ದ್ವಾರಗಳನ್ನು ಭದ್ರತಾ ಸಿಬ್ಬಂದಿಯೊಬ್ಬರು ಕಾಯುತ್ತಿದ್ದರು. 14 ಎಕರೆಗಳಷ್ಟು ವಿಶಾಲ ಸ್ಥಳದಲ್ಲಿ ಹರಡಿಕೊಂಡಿರುವ ಈ ಆವರಣದ ಒಳಗೆ ಸುಂದರ ತೋಟಗಳು, ಕಾರಂಜಿಗಳು, ಕೊಳಗಳು, ಸಂಸ್ಕೃತ ವಿಶ್ವವಿದ್ಯಾಲಯದ ಕಟ್ಟಡ ಮತ್ತು ಹಲವು ಕೋಣೆಗಳನ್ನು ಒಳಗೊಂಡ ಪ್ರಸಿದ್ಧ ದೇವಾಲಯವಿದೆ.
ಈ ದೇವಸ್ಥಾನವು ಹಿಂದಿನ ಹಥುವಾ ಸಂಸ್ಥಾನವನ್ನು ಆಳಿದ ಶ್ರೀಮಂತ ರಾಜ ಕುಟಂಬವೊಂದರ ಆಡಳಿತದಲ್ಲಿದೆ. ಇದು ಅವರ ಖಾಸಗಿ ಆಸ್ತಿಯಾಗಿರುವ ಕಾರಣ ಇಲ್ಲಿಗೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಸಾರ್ವಜನಿಕರಿಗೆ ಪ್ರವೇಶವಿದೆ. ಈ ಸಮಯದಲ್ಲಿ ಇಲ್ಲಿಗೆ ಒಂದಷ್ಟು ಭಕ್ತರು ಬಂದುಹೋಗುವುದನ್ನು ನೀವು ಗಮನಿಸಬಹುದು. ಪೂಜಾರಿ ಗರ್ಭಗುಡಿಯ ಒಳಗಿನ ರಾಧಾ-ಕೃಷ್ಣ ವಿಗ್ರಹಗಳಿಗೆ ಪೂಜೆ ಮಾಡುತ್ತಿದ್ದರೆ, ಅದಕ್ಕೆ ಎದುರಿನ ದೊಡ್ಡ ಕಂಬಗಳ ಮಂಟಪದಲ್ಲಿ ಸಂಗೀತಗಾರರು ತಮ್ಮ ವಾದ್ಯಗಳಾದ ತಬಲಾ, ಹಾರ್ಮೋನಿಯಂ, ತಾಳಗಳೊಂದಿಗೆ ಕುಳಿತಿದ್ದರು. ಇವರ ಜೊತೆ ನಾನು ನನ್ನ ಸಹೋದ್ಯೋಗಿಗಳಿಂದ ಕೇಳಿ ತಿಳಿದಿದ್ದ ಸಂಗೀತ ಕಲಾವಿ ಸಗೀರ್ ಅನ್ಸಾರಿ ಕೂಡ ಕುಳಿತಿದ್ದರು.
ಈ 70 ವರ್ಷ ಪ್ರಾಯದ ಮುಸ್ಲಿಮ್ ಸಂಗೀತಗಾರ ಗೋಪಾಲನ ದೇವಸ್ಥಾನದಲ್ಲಿ ದೇವರುಗಳಿಗೆ ತಮ್ಮ ಕೊಳಲು ಸೇವೆಯನ್ನು ಅರ್ಪಿಸುತ್ತಾರೆ. ಆದರೆ ಅವರಿಗೆ ತಾನು ಏನೋ ಅಸಾಮಾನ್ಯವಾದದ್ದೇನನ್ನೋ ಮಾಡುತ್ತಿದ್ದೇನೆ ಎನ್ನುವ ಭಾವನೆಯಿಲ್ಲ. “ಮನುಷ್ಯರೆಲ್ಲರೂ ಒಂದೇ. ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎನ್ನುತ್ತಾರೆ ಅವರು. “ನಾವು ಸಾಮರಸ್ಯದಿಂದ ಬದುಕಬೇಕು. ಯಹ ಏಕ್ ಗ್ಯಾನ್ ಹೈ ಜೋ ಖುದಾನೇ ಮುಝೆ ದಿಯಾ ಹೈ. ಔರ್ ಗ್ಯಾನ್ ಬಾಂಟ್ನೇ ಮೇ ಕುಚ್ ಭೀ ಗಲತ್ ನಹೀ ಹೈ. [ಇದು ನನಗೆ ದೇವರು ಕೊಟ್ಟ ಜ್ಞಾನ. ಅದನ್ನು ಹಂಚಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ]. ನಾನಿಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ಕೊಳಲು ನುಡಿಸುತ್ತಿದ್ದೇನೆ.”







