“ಅವರು ನನ್ನ ಎರಡು ಗಡಿಗೆಗಳನ್ನು ಕದ್ದಿದ್ದಾರೆ!”
ಆನಂದ್ ಲೋಹರ್ ಸಿಟ್ಟಿನಲ್ಲಿದ್ದರು. ಇಂದಿನ ದಿನದ ಆರಂಭ ಅವರ ಪಾಲಿಗೆ ಒಳ್ಳೆಯ ರೀತಿಯಲ್ಲಿ ಆಗಿರಲಿಲ್ಲ. ಗೋಲಾಪಾಡಾದ ನಿವಾಸಿಯಾಗಿರುವ ಇವರು, 2 ಗಡಿಗೆ ಕಳ್ಳನ್ನು ಕಳೆದುಕೊಂಡಿದ್ದಲ್ಲದೆ, 90 ರೂಪಾಯಿಗಳನ್ನೂ ನಷ್ಟ ಮಾಡಿಕೊಂಡಿದ್ದರು. ಈ 90 ರೂಪಾಯಿ ಎರಡು ಮಣ್ಣಿನ ಗಡಿಗೆಯ ಬೆಲೆ. ಇದನ್ನು ಅವರು ಮನೆಯಿಂದ ಮೂರು ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿರುವ ಸೋನಾಜುರಿ ಎನ್ನುವಲ್ಲಿಂದ ಖರೀದಿಸಿ ತರುತ್ತಾರೆ.
ಆನಂದ್ ಅವರಿಗೆ 'ಖೇಜೂರ್' ಅಥವಾ ಈಚಲು ಮರದ ನೀರಾ ಸಂಗ್ರಹಿಸಲು ಮಡಿಕೆಗಳ ಅಗತ್ಯವಿದೆ. ಅವರೊಬ್ಬ 'ಶಿವುಲಿ' - ಈಚಲು ಮರಗಳನ್ನು ಹತ್ತಿ, ಅದನ್ನು ಸವರಿ, ಕಾಂಡದಿಂದ ರಸವನ್ನು ಸಂಗ್ರಹಿಸುವವರನ್ನು ಸ್ಥಳೀಯವಾಗಿ ಈ ಹೆಸರಿನಿಂದ ಕರೆಯುತ್ತಾರೆ. ಇದೊಂದು ಅಕ್ಟೋಬರ್ ತಿಂಗಳಿನಿಂದ ಜನವರಿವರೆಗೆ ನಡೆಯುವ ಹಂಗಾಮಿ ವೃತ್ತಿಯಾಗಿದ್ದು, ಶರತ್ಕಾಲಕ್ಕೆ ಹೊಂದಿಕೆಯಾಗುವ ಬಂಗಾಳಿ ತಿಂಗಳಾದ ಅಶ್ವಿನ್ ಮಾಸದಲ್ಲಿ ಇವರು ಸಕ್ರಿಯರಾಗುತ್ತಾರೆ. ಮತ್ತೊಂದು ವಿಷಯವೆಂದರೆ, ಬಂಗಾಳದಲ್ಲಿ ಶರತ್ಕಾಲದ ಆಗಮನವನ್ನು ಸೂಚಿಸುವ, ರಾತ್ರಿ ಅರಳುವ ಹೂವಿನ ಹೆಸರೂ ಸಹ 'ಶಿವುಲಿ' (ಪಾರಿಜಾತ).
ಬೋಲ್ಪುರ್ ಪಟ್ಟಣದಲ್ಲಿ ತಾವು ಕೆಲಸ ಮಾಡುತ್ತಿದ್ದ ಇಟ್ಟಿಗೆ ಭಟ್ಟಿ ಮುಚ್ಚಿದಾಗಿನಿಂದ, ವಯಸ್ಸಿನ ಭಾರದಿಂದ ಬಾಗಿರುವ ಈ 65 ವರ್ಷದ ಹಿರಿಯ ವ್ಯಕ್ತಿ ಕಳೆದ ಸುಮಾರು ಆರು-ಏಳು ವರ್ಷಗಳಿಂದ ಈ ಕೆಲಸವನ್ನೇ ಮಾಡುತ್ತಿದ್ದಾರೆ.
ಮಡಕೆಯನ್ನು ಕಳೆದುಕೊಂಡಿದ್ದ ಆನಂದ ಬಹಳ ಬೇಸರದಲ್ಲಿದ್ದರು. "ಪ್ರತಿ ಹಂಗಾಮಿನಲ್ಲೂ ಹೀಗೆ ಮಾಡುತ್ತಾರೆ" ಎಂದು ನೋವಿನಿಂದ ಗೊಣಗಿದರು. ನಾವು ಅವರು ಹತ್ತಲಿರುವ ಮುಂದಿನ ಮರದತ್ತ ನಡೆಯುತ್ತಿದ್ದರು. ನಾನು ಅವರ ಹಿಂದೆ ನಡೆಯತೊಡಗಿದೆ. ನಮ್ಮ ಕಾಲುಗಳ ಅಡಿಯಲ್ಲಿದ್ದ ಈಚಲು ಗರಿ ಸರ್ ಸರ್ ಸದ್ದು ಮಾಡುತ್ತಿತ್ತು. ಅದು ಡಿಸೆಂಬರ್ ತಿಂಗಳಾಗಿದ್ದ ಕಾರಣ ಚಳಿಯೂ ಜೋರಾಗಿತ್ತು. ಚಳಿಯಿಂದ ರಕ್ಷಣೆ ಪಡೆಯುವ ಸಲುವಾಗಿ ಆನಂದ ತಮ್ಮ ತಲೆಗೆ ಟೋಪಿ ಧರಿಸಿದ್ದರು. ಅವರು ಮರಗಳನ್ನು ಗುತ್ತಿಗೆಗೆ ಪಡೆದಿದ್ದು, ಇವು ಮನಸಾತಲಾದಲ್ಲಿರುವ ಅವರ ಮಣ್ಣಿನ ಮನೆಯಿಂದ ನಡೆದು ಹೋಗುವಷ್ಟು ಹತ್ತಿರದಲ್ಲಿವೆ - ಸುಮಾರು 300 ಮೀಟರ್ ದೂರ. ಆದರೆ ಅಸ್ತಮಾ ರೋಗಿಯಾಗಿರುವ ಅವರಿಗೆ, ಯಾವುದೇ ದೈಹಿಕ ಶ್ರಮವೂ ಕಷ್ಟದ್ದೇ. ಇನ್ನು ಸುಮಾರು ಏಳರಿಂದ ಎಂಟು ಕಿಲೋಗಳಷ್ಟು ತಾಜಾ ನೀರಾವನ್ನು ಹೊತ್ತುಕೊಂಡು ಹಿಂತಿರುಗಿ ಬರುವ ಪ್ರಯಾಣವಂತೂ ಇನ್ನೂ ಕಠಿಣವಾಗಿರುತ್ತದೆ.


































