“60 ವರ್ಷಗಳ ಹಿಂದೆ ಮಾತ್ರವಲ್ಲ, ಈಗಲೂ ಜನರು ಈ ಕುಷ್ಠ ರೋಗಿಗಳನ್ನು ಮುಟ್ಟಿದರೆ ಅವರಿಗೂ ರೋಗ ಹರಡುತ್ತದೆ ಎಂದು ನಂಬುತ್ತಿದ್ದಾರೆ.”
ಆರು ದಶಕಗಳ ಹಿಂದೆಯೇ ಕುಷ್ಠ ರೋಗದಿಂದ ಮುಕ್ತಿ ಪಡೆದಿರುವ ಎಪ್ಪತ್ತರ ಹರೆಯದ ನಿಯಾಮತ್ ಉಲ್ಲಾ ಖಾನ್ ಅವರು ಜನರಲ್ಲಿ ಇರುವ ಈ ರೀತಿಯ ಮೂಢನಂಬಿಕೆ ಈಗಲೂ ತಮ್ಮನ್ನು ಕಾಡುತ್ತಿದೆ ಎನ್ನುತ್ತಾರೆ. “ನನ್ನ ಮನೆಯವರು ನನಗೆ ಗೌರವ ಕೊಡುತ್ತಾರೆ, ಆದರೆ ನನ್ನ ಪರಿಸ್ಥಿತಿ ಕಾರಣದಿಂದಾಗಿ ಅದೇ ಗೌರವವನ್ನು ಹೊರಗಿನಿಂದ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ,” ಎನ್ನುತ್ತಾರೆ ಅವರು.
ಅನುಕಂಪದೊಂದಿಗೆ ಅಸಹ್ಯವನ್ನೂ ಹೊಂದಿರುವ ಜನರ ಕಣ್ಣ ನೋಟವನ್ನು ಸಹಿಸಿಕೊಳ್ಳಲಾಗದೆ ಅವರು 2025ರಲ್ಲಿ ಕುಪ್ವಾರದಲ್ಲಿರುವ ತಮ್ಮ ಮನೆ ಮತ್ತು ಕುಟುಂಬವನ್ನು ತೊರೆದು, ಬೆಹ್ರಾರ್ ಕುಷ್ಠರೋಗಿಗಳ ಕಾಲೋನಿಗೆ ಹೋದರು.
“ಇಲ್ಲಿ ಎಲ್ಲರೂ ಸಮಾನರು, ಹಾಗಾಗಿ ಇಲ್ಲಿಗೆ ಬಂದೆ. ನನ್ನ ಊರಿನಲ್ಲಿ ನನ್ನನ್ನು ನಡೆಸಿಕೊಂಡಂತೆ ಇಲ್ಲಿ ನನ್ನನ್ನು ನಡೆಸಿಕೊಳ್ಳುವುದಿಲ್ಲ. ಇದು ನನ್ನ ಮನೆ ಇದ್ದಂತೆ. ಹಾಗಾಗಿ ಸಾಯುವ ವರೆಗೆ ಇಲ್ಲಿಯೇ ಬದುಕುವುದೆಂದು ನಿರ್ಧರಿಸಿದೆ,” ಎಂದು 76 ವರ್ಷ ಪ್ರಾಯದ ನಿಯಾಮತ್ ಹೇಳುತ್ತಾರೆ.
















