ಮೊಹರಂ ಸಂದರ್ಭದಲ್ಲಿ ಪಾಟ್ನಾದ ಬೀದಿಗಳಲ್ಲಿ ಚಲಿಸುವ ಈ ಗುಮ್ಮಟದ ಆಕಾರದ ಗಾಜಿ ಸಿಪಾರ್ ನಿಮ್ಮನ್ನು ಒಂದು ಕ್ಷಣ ತಡೆದು ನಿಲ್ಲಿಸುವುದಂತೂ ಸತ್ಯ. “ಖಡ್ಗಗಳಿಂದ ಹಿಡಿದು ಗುರಾಣಿಯ ತನಕ ಮತ್ತು ಖಡ್ಗದ ತುದಿಗೆ ಚುಚ್ಚಿರುವ ಅನಾರ್ (ಅಲಂಕಾರಿಕ ದಾಳಿಂಬೆ) ತನಕ ಎಲ್ಲವೂ ಗಾಜಿನ ಕೆತ್ತನೆ” ಎನ್ನುತ್ತಾರೆ ನಝರೇ ಇಮಾಮ್. ಇವರು ನಮ್ಮೊಂದಿಗೆ ಶೀಷೇ ಕೀ ಸಿಪಾರ್ ಎನ್ನುವ ನಗರದ ಹೆಮ್ಮೆಯ ಕುರಿತು ಮಾತನಾಡುತ್ತಿದ್ದರು.
ಒಂದು ಕಾಲದಲ್ಲಿ ಯುದ್ಧ ಭೂಮಿಗೆ ಕೊಂಡೊಯ್ಯಲಾಗುತ್ತಿದ್ದ ಕತ್ತಿ, ಗುರಾಣಿ, ಬಿಲ್ಲು ಮತ್ತು ಬಾಣಗಳು ಸೇರಿದಂತೆ ಎಲ್ಲ ಬಗೆಯ ಆಯುಧಗಳನ್ನೂ ಈ ಗಾಜಿನ ಸಿಪಾರ್ ಹೊಂದಿರುತ್ತದೆ. ಅಲಂಕೃತ ಶಸ್ತ್ರಾಗಾರವನ್ನು ಹೋಲುವ ಇದು ಕನಿಷ್ಟ ಒಂದು ಡಜನ್ ಅಲಂಕಾರಿಕ ವಸ್ತುಗಳನ್ನು ಹೊಂದಿರುತ್ತದೆ.
ಇಲ್ಲಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ, ಪಾಟ್ನಾ ನಗರದ ದಕ್ಷಿಣದಲ್ಲಿ ಕಲಾವಿದ 40 ವರ್ಷದ ಮೊಹಮ್ಮದ್ ನಿಸಾರ್ ತನ್ನ ಸಿಪಾರ್ ತಯಾರಿಕೆಯ ಕೆಲಸ ಮುಗಿಸಿ ತನ್ನ ಹೆಣ್ಣುಮಕ್ಕಳೊಂದಿಗೆ ನಿಂತು ಅದರ ಅಂದ ಚಂದ ನೋಡುತ್ತಿದ್ದರು. ಅವರು ತಮ್ಮ ಕಲಾಕೃತಿಯನ್ನು ತನ್ನ ವರ್ಕ್ ಶಾಪಿನ ಜಗಲಿಯ ಮೇಲೆ ಇಟ್ಟಿದ್ದರು. ಬಾಗ್ ಕಾಲು ಖಾನ್ ಎಂದು ಕರೆಯಲಾಗುವ ಈ ಪ್ರದೇಶದಲ್ಲಿ ಮಝರ್ (ದರ್ಗಾ) ಮತ್ತು ಕೆಲವು ಮನೆಗಳಿವೆ.
“ಇದು ಒಬ್ಬರು ಮಾಡಿ ಮುಗಿಸಬಹುದಾದ ಕೆಲಸವಲ್ಲ. ಇದು ಅನೇಕ ಕಲಾತ್ಮಕ ಕೌಶಲಗಳ ಸಂಗಮ. ಇದರಲ್ಲಿ ಬಳಸಲಾಗಿರುವ ವಸ್ತುಗಳಲ್ಲಿ ಕೆಲವನ್ನು ಬಿಹಾರದಲ್ಲೇ ತಯಾರಿಸಲಾಗುತ್ತದೆ ಮತ್ತು ಕೆಲವನ್ನು ದೇಶದ ಇತರೆಡೆಗಳಿಂದ ತರಿಸಲಾಗುತ್ತದೆ” ಎಂದು ಕುಶಲಕರ್ಮಿ ನಿಸಾರ್ ಹೇಳುತ್ತಾರೆ.
ಅವರು ಆರಿ, ಝರ್ದೋಝಿ, ಕಶೀದಾ ಕರಿ, ಛಾಪಾ, ನಾಗಾ ಮತ್ತು ಕೆಲವೊಮ್ಮೆ ಈ ಕಲೆಯಲ್ಲಿ ಬಳಸಲಾಗುವ ಮೀನಾಕರಿ ಮೊದಲಾದ ಕರಕುಶಲ ಕಲೆಗಳ ಕುರಿತು ಹೇಳುತ್ತಿದ್ದರು. ಇವೆಲ್ಲವನ್ನೂ ಸಿಪಾರ್ ಕಲೆಯಲ್ಲಿ ಬಳಸಲಾಗುತ್ತದೆ. ಬಟ್ಟೆಯ ಮೇಲೆ ವಿವಿಧ ವಿನ್ಯಾಸಗಳನ್ನು ರಚಿಸುವ ಕಸೂತಿ ಕಲೆಗೆ ಆರಿ ಎನ್ನಲಾಗುತ್ತದೆ. ಝರ್ದೋಝಿ ಕಸೂತಿಗೆ ಲೋಹದ ದಾರಗಳನ್ನು ಬಳಸಲಾಗುತ್ತದೆ. ಕಶೀದಾ ಎನ್ನುವುದು ಬಿಹಾರದಲ್ಲಿ ಆಚರಣೆಯಲ್ಲಿರುವ ಕಾಶ್ಮೀರಿ ಕಸೂತಿಯ ಒಂದು ರೂಪ. ಇನ್ನು ಛಾಪಾ ಎನ್ನುವುದು ಮೆಟಾಲಿಕ್ ಬಣ್ಣವನ್ನು ಬಳಸಿ ಬಳಸಿ ಮಾಡುವ ವುಡ್ ಬ್ಲಾಕ್ ಪ್ರಿಂಟಿಂಗ್ ಕಲೆ.
ಇವುಗಳ ಜೊತೆಯಲ್ಲಿ ಸಿಪಾರ್ ತಯಾರಿಕೆಯಲ್ಲಿ ಮೀನಾಕರಿ ಎನ್ನುವ ಎನಾಮೆಲ್ ಚಿತ್ರಕಲೆ ಮತ್ತು ನಾಗ್ ಎನ್ನುವ ಸುಂದರವಾಗಿ ಕೆತ್ತಿದ ಹರಳುಗಳನ್ನು ಬಟ್ಟೆಯ ಮೇಲೆ ಅಂಟಿಸುವ ಕಲೆಯನ್ನು ಸಹ ಬಳಸಲಾಗುತ್ತದೆ.



















