ಅಸುಂತಾರನ್ನು ಬಾಲಕ ಸಂಜೀವನಿ ಅಮ್ಮ ಎಂದೇ ಕರೆಯುತ್ತಾನೆ. ಆದರೆ ಅವನು ಅಸುಂತಾರ ಮಗನಲ್ಲ.
ಅಸುಂತಾ ಟೋಪ್ಪೊ ಓರ್ವ ಗ್ರಾಮೀಣ ಆರೋಗ್ಯ ವ್ಯವಸ್ಥಾಪಕಿ (ರೂರಲ್ ಹೆಲ್ತ್ ಆರ್ಗನೈಸರ್/ಆರ್ಎಚ್ಒ). ಧರಮ್ಜೈಗಢ್ ಬಳಿಯ ಮಿರಿಗುಡ ಅವರ ಕಾರ್ಯಕ್ಷೇತ್ರ. ಅವರಿಲ್ಲಿ ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಅನಿವಾರ್ಯವಾಗಿ ಒಂದು ಹೈ-ರಿಸ್ಕ್ ಹೆರಿಗೆಯ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿ ಬಂತು. ತಾಯಿಯ ರಕ್ತದೊತ್ತಡ ವಿಪರೀತವಾಗಿತ್ತು, ಆದರೆ ಆಕೆ ಹೆಮೊಗ್ಲೋಬಿನ್ ಮಟ್ಟ ಏಳು ಗ್ರಾಮ್ಗಿಂತಲೂ ಕಡಿಮೆಯಿತ್ತು. “ಅವರು ನಮ್ಮ ಉಪ ಆರೋಗ್ಯ ಕೇಂದ್ರಕ್ಕೆ ಬರುವ ಹೊತ್ತಿಗಾಗಲೇ ಹೆರಿಗೆ ನೋವು ಆರಂಭವಾಗಿತ್ತು. ನಾವು ಆಕೆಯನ್ನು ಹಾಸಿಗೆಯ ಮೇಲೆ ಮಲಗಿಸುವಷ್ಟರಲ್ಲಿ ಮಗು ಹುಟ್ಟಿಯಾಗಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಅಸುಂತಾ.
ಸ್ಥಳೀಯವಾಗಿ ಉಪಸ್ವಾಸ್ಥ್ಯ ಕೇಂದ್ರ ಎಂದು ಕರೆಯಲ್ಪಡುವ ಉಪ ಆರೋಗ್ಯ ಕೇಂದ್ರದಲ್ಲಿ ಜನಿಸಿದ ಈ ಮಗುವಿನ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. “ನಮ್ಮಲ್ಲಿ ಆಕ್ಸಿಜನ್ ಸೌಲಭ್ಯವೂ ಇದ್ದಿರಲಿಲ್ಲ. ಜೊತೆಗೆ ತಾಯಿಗೂ ಸಮಾನ ಆರೈಕೆಯ ಅಗತ್ಯವಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಅಸುಂತಾ. ತಾಯಿಗೆ ವಿಪರೀತ ರಕ್ತಸ್ರಾವವಾಗುತ್ತಿತ್ತು. ಅಸುಂತಾ ತಾಯಿಯನ್ನು ನೋಡುವುದೋ ಅಥವಾ ಮಗುವನ್ನು ನೋಡುವುದೋ ಎನ್ನುವ ಗೊಂದಲಕ್ಕೆ ಸಿಲುಕಿದ್ದರು.
“ಮೊದಲು ನಾವು ತಾಯಿ-ಮಗುವನ್ನು ಧರಮ್ಜೈಗಢಕ್ಕೆ ಕರೆದುಕೊಂಡು ಹೋದೆವು. ಅಲ್ಲಿ ಒಬ್ಬ ಡಾಕ್ಟರ್ ಇದ್ದರು. ನನಗೆ ಆಕೆಯ ಹೆಸರು ಹೇಳಲು ಇಷ್ಟವಿಲ್ಲ. ಅವರು ಮಗು ಮತ್ತು ತಾಯಿ ಇಷ್ಟು ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿರುವಾಗ ಇಲ್ಲಿಗೆ ಏಕೆ ಕರೆದುಕೊಂಡು ಬಂದಿರಿ ಎಂದು ಅಸಮಾಧಾನದೊಂದಿಗೆ ಕೇಳಿದರು. “ನಾನು ಆಗ, ನಿಮ್ಮಿಂದ ಚಿಕಿತ್ಸೆ ಮಾಡುವುದು ಸಾಧ್ಯವಿಲ್ಲದೆ ಹೋದರೆ ಬಿಟ್ಟುಬಿಡಿ. ದಯವಿಟ್ಟು ನನಗೆ ಸ್ವಲ್ಪ ಸಹಾಯ ಮಾಡಿ ಎಂದೆ. ಇದರಿಂದ ಆಕೆಗೆ ಸಿಟ್ಟು ಬಂತು.”
ಅಸುಂತಾ ಮಗುವನ್ನು ಎತ್ತಿಕೊಂಡು ಕೂಡಲೇ ಆಂಬುಲೆನ್ಸ್ ತರಿಸುವಂತೆ ಒತ್ತಾಯಿಸಿದರು. ಈ ನಡುವೆ ಆ ವೈದ್ಯೆ ಒಂದು ಇಂಜೆಕ್ಷನ್ ಕೊಟ್ಟು ಸುಮ್ಮನಾದರು. ಅಸುಂತಾ ಹೇಳುವಂತೆ ಅಂದಿನ ದಿನ ಅವರ ಜೊತೆಗಿದ್ದ ಮಿತಾನಿನ್ (ಆಶಾ ಕಾರ್ಯಕರ್ತೆ) ಬಹಳ ಸಹಾಯ ಮಾಡಿದರು. ಅಸುಂತಾ ಮಗುವಿಗೆ ಬಾಯಿಗೆ ಬಾಯಿ ಕೊಟ್ಟು ಉಸಿರು ತುಂಬಲು ಯತ್ನಿಸುತ್ತಿದ್ದರೆ ಆಶಾ ಕಾರ್ಯಕರ್ತೆ ತಾಯಿಯ ಆರೈಕೆಯಲ್ಲಿ ಬಹಳ ಸಹಾಯ ಮಾಡಿದರು.











