ಬರಹಗಾರನಿಗೆ ಸದಾ ಕಾಡುವ ಪ್ರಶ್ನೆಯೆಂದರೆ “ನಾನು ಬರಹದ ವಿಷಯದಲ್ಲಿ ಯಾರನ್ನು ನಂಬಬಹುದು?” ಎನ್ನುವುದು.
ಒಂದು ಬರಹವನ್ನು ಲೋಕ ಓದುವ ಮೊದಲು ಅದನ್ನು ಮೊದಲ ಬಾರಿಗೆ ಕೇಳಿಸಿಕೊಳ್ಳುವ ವ್ಯಕ್ತಿಯೊಬ್ಬನಿರುತ್ತಾನೆ. ಶೃದ್ಧಾನಂದ ಅಸುರ ಅವರ ಪಾಲಿಗೆ ಈ ವ್ಯಕ್ತಿ ಕಳೆದ 18 ವರ್ಷಗಳಿಂದ ಬದಲಾಗಿಲ್ಲ.
“ನಾನು ಅತ್ನಾಸ್ ಎದುರು ಓದುತ್ತೇನೆ. ನಾನು ಬರೆದ ಮೊದಲ ಗೀತೆ – ಯೇಸು ಗೀತೆ, ಅವನಿಗೆ ಅರ್ಪಿತ” ಎನ್ನುತ್ತಾ ಅವರು ತನ್ನ ಮೊದಲ ಓದುಗ ಗೆಳೆಯನತ್ತ ನೋಡಿದರು. ಕೆಲವು ಕ್ಷಣಗಳ ನಂತರ ಇಬ್ಬರೂ ಜೋರಾಗಿ ನಗತೊಡಗಿದರು.
ಶ್ರದ್ಧಾನಂದ್ ಮತ್ತು ಅತ್ನಾಸ್ ಇಬ್ಬರೂಜಾರ್ಖಂಡ್ ರಾಜ್ಯದ ಲುಪುಂಗ್ಪಾಟ್ ಗ್ರಾಮದವರು. ಸಣ್ಣವರಿದ್ದಾಗ ಒಟ್ಟಿಗೆ ಶಾಲೆಗೆ ಹೋದವರು. ಒಂದು ದಿನ, ರೋಮನ್ ಕ್ಯಾಥೊಲಿಕ್ ಪ್ರಾಥಮಿಕ ಶಾಲೆಗೆ ಹೋಗುತ್ತಿರುವಾಗ ಅತ್ನಾಸ್ ಬಹಳ ಒತ್ತಡದಲ್ಲಿರುವುದು ಶೃದ್ಧಾನಂದ ಅವರ ಗಮನಕ್ಕೆ ಬಂದಿತು. “ಆ ದಿನ ಶಾಲೆಯಲ್ಲಿ ಹಾಡುವ ಸರದಿ ಅತ್ನಾಸನದಾಗಿತ್ತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಈ ಹಾಡುಗಾರಿಕೆಯನ್ನು ವಿದ್ಯಾರ್ಥಿಗಳ ವಾರ್ಷಿಕ ಮೌಲ್ಯಮಾಪನದಲ್ಲಿಯೂ ಪರಿಗಣಿಸಲಾಗುತ್ತಿತ್ತು.
ಈ ಹುಡುಗರು ಜಾರ್ಖಂಡ್ ರಾಜ್ಯದ ಅಸುರ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ರಾಜ್ಯದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ಗುರುತಿಸಲಾಗಿದೆ. ಅತ್ನಾಸ್ ಹುಟ್ಟುವಾಗಲೇ ಎಡಗೈ ನ್ಯೂನ್ಯತೆಯೊಂದಿಗೆ ಜನಿಸಿದ್ದರು. ಅವರ ಎಡಗೈ ಬೆಳವಣಿಗೆ ಹೊಂದಿರಲಿಲ್ಲ. “ಜನರು ಅವನನ್ನು ಲುಲಾ [ಅಂಗವಿಕಲ] ಅಥವಾ ಠೂಠಾ [ದುರ್ಬಲ] ಎಂದು ಕರೆಯುತ್ತಿದ್ದರು" ಎಂದು ನೆನಪಿಸಿಕೊಂಡ ಶೃದ್ಧಾನಂದ್ ಅವರ ಮುಖದ ಮೇಲಿನ ನಗು ಆ ಕ್ಷಣಕ್ಕೆ ಬಾಡಿತ್ತು.














