18 ವರ್ಷ ಪ್ರಾಯದ ಪ್ರಿಯಾಂಕಾ ಕುಮಾರಿ ಒಳ್ಳೆಯ ಓಟಗಾರ್ತಿ. ಅವಳ ತಂದೆ ಲಾಲ್ ದೇವ್ ಒರಾಂವ್ “ಬಹುತ್ ತೇಜ್ ದೌಡ್ತಿ ಥಿ ಬಚ್ಪನ್ ಸೆ [ಬಾಲ್ಯದಿಂದಲೇ ಅವಳು ತುಂಬಾ ಫಾಸ್ಟಾಗಿ ಓಡುತ್ತಿದ್ದಳು],” ಎಂದು ತಮ್ಮ ಮಗಳ ಓಟದ ವೇಗದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.
ದಿನಗೂಲಿ ಕಾರ್ಮಿಕರಾದ ಲಾಲ್ ದೇವ್ ಓರಾಂ ಅವರ ನಾಲ್ವರು ಮಕ್ಕಳಲ್ಲಿ ಪ್ರಿಯಾಂಕಾ ದೊಡ್ಡವಳು. ಅರೆಸೇನಾ ಪಡೆಗಳ ನೇಮಕಾತಿಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಎಸ್ಎಸ್ಸಿ ಜಿಡಿಗೆ ಸಿದ್ಧತೆ ನಡೆಸುತ್ತಿದ್ದಾಳೆ.
“ಹಮ್ಕೊ ವರ್ದಿ ಪೆಹನ್ನಾ ಹೈ [ನಂಗೆ ಆರ್ಮಿಯ ಯೂನಿಫಾರ್ಮ್ ಧರಿಸಬೇಕು],” ಎಂದು ಪ್ರಿಯಾಂಕಾ ನಾಚುತ್ತಾ ಹೇಳುತ್ತಾಳೆ.
ಅದಕ್ಕಾಗಿ ಪ್ರಿಯಾಂಕಾ ಪ್ರತಿದಿನ ಅಭ್ಯಾಸ ನಡೆಸುತ್ತಾಳೆ. ಆದರೆ ತಾನು ಈ ಪರೀಕ್ಷೆಯಲ್ಲಿ ಅನರ್ಹಳಾಗುವ ಸಾಧ್ಯತೆಯ ಅರಿವೂ ಅವಳಿಗಿದೆ. ಅರೆಸೇನಾ ಪಡೆಗಳ ವೈದ್ಯಕೀಯ ಪರೀಕ್ಷೆಯಲ್ಲಿ ಫ್ಲೋರೋಸಿಸ್ ತಪಾಸಣೆ ನಡೆಸಲಾಗುತ್ತದೆ. ಈ ರೋಗದ ಲಕ್ಷಣಗಳಾದ ಹಲ್ಲುಗಳ ಮೇಲಿನ ಕಲೆಗಳು ಮತ್ತು ಕೀಲು ನೋವು ಇವಳಲ್ಲಿ ಕಂಡುಬಂದಿರುವುದರಿಂದ ನೇಮಕಾತಿಯಲ್ಲಿ ಅನರ್ಹಳಾಗಬಹುದು.
ಕಳೆದ ನವೆಂಬರ್ನಲ್ಲಿ ಪ್ರಿಯಾಂಕಾ ತನ್ನ ಊರಿನ ಹತ್ತಿರದ ಬಯಲು ಗದ್ದೆಗಳಲ್ಲಿ ಅಭ್ಯಾಸ ಆರಂಭಿಸಿದಳು. 1,600 ಮೀಟರ್ ದೂರವನ್ನು 8.5 ನಿಮಿಷಗಳಲ್ಲಿ ಓಡಿ ಪೂರ್ಣಗೊಳಿಸುವುದು ಆಕೆಯ ಗುರಿಯಾಗಿತ್ತು. “ಪೆಹ್ಲಾ ದಿನ ಹಮ್ 7 ಮಿನಿಟ್ ಮೆ ದೌರ್ ಗಯೇ [ಮೊದಲ ದಿನವೇ ನಾನು ಅದನ್ನು 7 ನಿಮಿಷಗಳಲ್ಲಿ ಓಡಿ ಮುಗಿಸಿದೆ],” ಎಂದು ಪ್ರಿಯಾಂಕಾ ಹೆಮ್ಮೆಯಿಂದ ಹೇಳಿದಳು.
ಆದರೆ ಓಡಿದ ಮೊದಲ ದಿನವೇ ದೇಹದಲ್ಲಿ ನೋವು ಶುರುವಾಯಿತು. ಮೊದಲು ಮೊಣಕಾಲುಗಳಿಂದ ನೋವು ಆರಂಭವಾಯಿತು. ನೋವು ನಿವಾರಕ ಗುಳಿಗೆ ತೆಗೆದುಕೊಳ್ಳುವಂತೆ ತಂದೆ ಹೇಳಿದಾಗ, ಪ್ರಿಯಾಂಕಾ ಬೇಡವೆಂದಳು. “ಒಮ್ಮೆ ತೆಗೆದುಕೊಂಡರೆ ಅದು ಅಭ್ಯಾಸವಾಗಿಬಿಡುತ್ತದೆ,” ಎಂದು ಅವಳು ಹೇಳುತ್ತಾಳೆ. ಅವಳ ಊರಿನ ಬಹುತೇಕ ಯುವಜನರು ತಮ್ಮ ಮೈಕೈನೋವನ್ನು ಸಹಿಸಿಕೊಳ್ಳಲಾಗದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ತನ್ನ ಬಾಲ್ಯದಿಂದಲೂ ಜಾರ್ಖಂಡ್ನ ಪಲಾಮು ಜಿಲ್ಲೆಯ ಈ ಪ್ರದೇಶ ಜನರ ಅಸಹನೀಯ ಬಾಳ್ವೆಯನ್ನು ನೋಡುತ್ತಾ ಬೆಳೆದಿದ್ದಾಳೆ.
ಚುಕ್ರು ಗ್ರಾಮದ ನಿವಾಸಿಗಳು, ಮುಖ್ಯವಾಗಿ ಪರಿಶಿಷ್ಟ ಪಂಗಡದವರು ಫ್ಲೋರೋಸಿಸ್ ಎಂಬ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಅತಿಯಾದ ಪ್ರಮಾಣದ ಫ್ಲೋರೈಡ್ ಇರುವುದೇ ಈ ಕಾಯಿಲೆಗೆ ಕಾರಣ. ಫ್ಲೋರೈಡ್ ಬಂಡೆಗಳು, ಮಣ್ಣು ಮತ್ತು ಅಂತರ್ಜಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಖನಿಜ. ಪಲಾಮು ಜಿಲ್ಲೆಯ ಭೂಗರ್ಭದ ಬಹುಭಾಗವನ್ನು ರೂಪಿಸಿರುವ ನೈಸ್ (Gneiss) ಮತ್ತು ಗ್ರಾನೈಟ್ ಬಂಡೆಗಳಲ್ಲಿ ಫ್ಲೋರೈಡ್ ಹೊಂದಿರುವ ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಈ ಬಂಡೆಗಳ ಮೂಲಕ ನೀರು ಹರಿದಾಗ, ಆ ನೀರಿನಲ್ಲಿ ಫ್ಲೋರೈಡ್ ಕರಗಿ ಸೇರಿಕೊಳ್ಳುತ್ತದೆ.




























