“ನಾನು ಚಿಕ್ಕವಳಿದ್ದಾಗ ಒಂದು ದಿನ ನಾವು ಈ ಕೆಲಸವನ್ನು ನಿಲ್ಲಿಸಬಹುದು ಎಂದು ಯೋಚಿಸಿದ್ದೇ ಇಲ್ಲ.”
ಆದರೆ ರಾಧಾದೇವಿ ಯಾವುದನ್ನು ನಡೆಯಲು ಸಾಧ್ಯವಿಲ್ಲ ಎಂದು ಯೋಚಿಸಿದ್ದರೋ ಇಂದು ಅದು ನಿಜವಾಗಿದೆ. ಈಗ ಅವರ ಮನೆಯ ಮಹಡಿಯ ಮೇಲೆ ನೂಲು ತೆಗೆಯುವ ರಾಟೆ ಮತ್ತು ಹಳೆಯ ಮರದ ನೇಯ್ಗೆ ಕಡ್ಡಿ ಈಗ ಧೂಳು ಕುಡಿಯುತ್ತಾ ಮೌನವಾಗಿ ಬಿದ್ದಿವೆ. ಈ ಉಪಕರಣಗಳನ್ನು ಬಳಸಿ ಅವರು ಕಂಬಳಿಗಳನ್ನು ನೇಯುತ್ತಿದ್ದರು. ಈ ಕಂಬಳಿಗೆ ಯಾವುದೇ ಕೃತಕ ಬಣ್ಣವನ್ನು ಸೇರಿಸುತ್ತಿರಲಿಲ್ಲ.
"ಸೂತಾ ಬನಾವಟ್ ಕೇ ಕಲಾ ಹಮಾರ್ ಹಾಥ್ ಸೇ ಚ್ಹೂಟಾಟ್ ಜಾತಾ [ದಾರವನ್ನು ನೂಲುವ ಕಲೆ ಈಗ ನನ್ನ ಕೈಜಾರಿ ಹೋಗುತ್ತಿದೆ]” ಎನ್ನುತ್ತಾರೆ ಈ ಭೋಜಪುರ ಮೂಲದ ನೇಕಾರ ಮಹಿಳೆ. “[2016]ರ ನಂತರ ನಾನು ಒಂದೇ ಒಂದು ಕಂಬಳಿ ನೇಯ್ದಿಲ್ಲ” ಎನ್ನುತ್ತಾ ಅವರು ಕಂಬಳಿ ದಪ್ಪಗಿನ, ಕಂದು ಬಣ್ಣದ ಛಾಯೆಯ ಅಡ್ಡಗೆರೆಗಳಿರುವ ಕಂಬಳಿಯೊಂದನ್ನು ತೋರಿಸಿದರು.
“ಅಮ್ಮ, ಚಾಚಿ [ಚಿಕ್ಕಮ್ಮ], ಮತ್ತು ದಾದಿ [ಅಜ್ಜಿ] ಜೊತೆ ಚಿಕ್ಕವಳಿದ್ದಾಗಿನಿಂದಲೂ ಈ ಕೆಲಸ ಮಾಡಿದ್ದೇನೆ” ಎನ್ನುವ ರಾಧಾದೇವಿಯವರಿಗೆ ತಮ್ಮ ನಿಖರ ವಯಸ್ಸು ತಿಳಿದಿಲ್ಲವಾದರೂ, “ನಾನು ಇಂದಿರಾ ಗಾಂಧಿಯ ಕಾಲವನ್ನು ನೋಡಿದ್ದೇನೆ” ಎನ್ನುತ್ತಾರೆ.
ಗರ್ಹಾನಿ ತಾಲೂಕಿನ ಭಿನಾರಿ ಗ್ರಾಮದಲ್ಲಿ ಒಂದು ಕಾಲದಲ್ಲಿ ಕುರಿಯ ಉಣ್ಣೆ ತನ್ನದೇ ಆದ ಲಯವನ್ನು ಹೊಂದಿತ್ತು. ಚಳಿಗಾಲದ ಮಾರುಕಟ್ಟೆಯಲ್ಲಿ ಪಾಲ್ ಸಮುದಾಯದ ನೇಕಾರರು ಹೆಣೆದ ಒರಟು ಉಣ್ಣೆಯ ಕಂಬಳಿಗಳು ಬಿಸಿ ದೋಸೆಯಂತೆ ಖರ್ಚಾಗುತ್ತಿದ್ದವು. ಚಳಿಗಾಲದ ದೀರ್ಘ ರಾತ್ರಿಗಳನ್ನು ಬೆಚ್ಚಗಾಗಿಸುವಲ್ಲಿ ಈ ಕಂಬಳಿಗಳು ಮುಖ್ಯ ಪಾತ್ರವನ್ನು ವಹಿಸುತ್ತಿದ್ದವು. ಇಂದು ಆ ಕಂಬಳಿ ಮಾರುಕಟ್ಟೆ ಅಸ್ತಿತ್ವ ಕಳೇದುಕೊಂಡಿದೆ ಮತ್ತು ರಾಧಾದೇವಿಯವರ ಕಾಲದ ನಂತರದ ಮಹಿಳೆಯರಿಗೆ ಈ ಕಂಬಳಿ ಹೆಣೆಯುವ ಕೆಲಸ ಗೊತ್ತಿಲ್ಲ.
“ಎಹಿ ಜಾತ್ ಬಾ ಹಮಾರ್ [ಇದೇ ನಮ್ಮ ಜಾತಿ]. ಮೊದಲಿನಿಂದಲೂ ನಾವು ಇದನ್ನೇ ಮಾಡಿಕೊಂಡು ಬಂದಿದ್ದು” ಎನ್ನುತ್ತಾರೆ ರಾಧಾದೇವಿ.
ರಾಧಾದೇವಿ ಈ ಕಲೆಯನ್ನು ಎಂಟು ವರ್ಷದವರಿದ್ದಾಗಲೇ ಕಲಿತಿದ್ದರು. ಗುಲಾಬಿ ಮತ್ತು ಹಸಿರು ಬಣ್ಣದ ಸೀರೆಯುಟ್ಟು, ಬೆಳಗಿನ ಬೆಚ್ಚಗಿನ ಬಿಸಿಲು ಬೀಳುತ್ತಿದ್ದ ಗೋಡೆಗೊರಗಿ ನಮ್ಮೊಂದಿಗೆ ಮಾತನಾಡುತ್ತಿದ್ದ ಅವರು ತಾವು ಈ ಕೆಲಸ ಕಲಿತ ಬಗೆಯನ್ನು ವಿವರಿಸಿದರು. ಅವರ ಅಪ್ಪ ಮತ್ತು ತಾತನ ಬಳಿ ನೂರಕ್ಕೂ ಹೆಚ್ಚು ಕುರಿಗಳಿದ್ದವು. ಸಾಮಾನ್ಯವಾಗಿ ಮನೆಯ ಹೆಂಗಸರು ಈ ಕುರಿಗಳ ಉಣ್ಣೆಯನ್ನು ಬಳಸಿಕೊಂಡು ಕಂಬಳಿ ಹಾಗೂ ಸ್ವೆಟರುಗಳನ್ನು ಹೆಣೆಯುತ್ತಿದ್ದರು. ಇವರು ಕಂಬಳಿ ಮತ್ತು ಸ್ವೆಟರುಗಳನ್ನು ಅಕ್ಕಪಕ್ಕದ ಊರುಗಳು ಮತ್ತು ಕೆಲವೊಮ್ಮೆ ಪಕ್ಕದ ಜಿಲ್ಲೆಗಳಲ್ಲೂ ಮಾರಲಾಗುತ್ತಿತ್ತು. ಮದುವೆಯ ನಂತರವೂ ಅವರು ಇಂತಹದ್ದೇ ದೃಶ್ಯವನ್ನು ತಮ್ಮ ಗಂಡನ ಮನೆಯಲ್ಲಿ ಕಂಡಿದ್ದರು. ಇಲ್ಲಿ ಅವರ ಗಂಡ ಮತ್ತು ಮಾವ ಕುರಿಗಳನ್ನು ನೋಡಿಕೊಂಡರೆ, ಅತ್ತೆ ಕಂಬಳಿ ಹೆಣೆಯುತ್ತಿದ್ದರು.












