"ಅದರ ದಂತದ ಒಂದು ಇರಿತದಿಂದ ಏಳು ಚೀಲಗಳಷ್ಟು ಫಸಲು ನಾಶವಾಯಿತು."
ಇದಾಗಿ ಒಂದು ವರ್ಷ ಕಳೆದಿದ್ದರೂ, ದಂಪರೆಹಂಗ್ಪುಯಿ ಗ್ರಾಮದ ರಾಂಪರ ತನ್ನ ಮನೆಯಲ್ಲಿ ಒಂಟಿ ಆನೆಯೊಂದು ಉಂಟುಮಾಡಿದ ಹಾನಿಯನ್ನು ಮರೆತಿಲ್ಲ.
ಏಳು ಚೀಲಗಳಷ್ಟು ಫಸಲು ಐದು ಟಿನ್ ಕಂಟೈನರ್ ಸಾಸಿವೆಯಷ್ಟಿರುತ್ತದೆ. ಅಂದರೆ ಸುಮಾರು 10-12 ಕಿಲೋಗಳಷ್ಟು. ಮಿಜೋರಾಂ ರಾಜ್ಯದಲ್ಲಿ ಆಹಾರವನ್ನು ಸಂಗ್ರಹಿಸಲು ಬಳಸುವ ಚೀಲಗಳ ಗಾತ್ರ ಅಥವಾ ತೂಕವನ್ನು ಅಳೆಯಲು ಸಾಂಪ್ರದಾಯಿಕವಾಗಿ ಟಿನ್ನುಗಳನ್ನು ಬಳಸಲಾಗುತ್ತದೆ.
"ಆನೆ ನೆಕ್ಕಿದ ಮೇಲೆ ಸಾಸಿವೆ ಹಾಳಾಗಿದೆ" ಎಂದು ಅವರು ಹೇಳುತ್ತಾರೆ. ಆನೆ ಒಮ್ಮೆಯಷ್ಟೇ ತನ್ನ ನಾಲಿಗೆಯನ್ನು ಆಡಿಸಿ ಅವರ ಬಿದಿರಿನ ಕಾವಲು ಗುಡಿಸಲಿನೊಳಗೆ ಸಂಗ್ರಹಿಸಿಟ್ಟಿದ್ದ ಭತ್ತವನ್ನೂ ಸಹ ನಾಶಪಡಿಸಿತ್ತು.
ಆದರೆ 73 ವರ್ಷದ ರಾಂಪಾರ ಅವರು ಕ್ಷಮಾ ಗುಣ ಹೊಂದಿರುವ ವ್ಯಕ್ತಿ. "ಮಯುಂಗ್ [ಆನೆ] ಒಳ್ಳೆಯ ಪ್ರಾಣಿ. ಅದು ಯಾವ ಕಾರಣಕ್ಕೂ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಹೆಚ್ಚೆಂದರೆ ಬೆಳೆಗಳನ್ನು ನಾಶಪಡಿಸುತ್ತದೆ ಅಷ್ಟೆ. ಅದು ಆಹಾರಕ್ಕಾಗಿ ಬರುತ್ತದೆ. ಬಂದು ತನಗೆ ಬೇಕಿರುವುದನ್ನು ತಿಂದು ಹೊರಟುಹೋಗುತ್ತದೆ" ಎನ್ನುತ್ತಾರೆ ಅವರು. ರೈತ ಮತ್ತು ಬಿದಿರಿನ ಕರಕುಶಲಕರ್ಮಿಯಾಗಿರುವ ರಾಂಪರ ರಿಯಾಂಗ್ (Reang ಅಥವಾ Riang) ಬುಡಕಟ್ಟು ಸಮುದಾಯಕ್ಕೆ ಸೇರಿದರು.
ಆನೆ ಬಹಳ ನಾಚಿಕೆ ಸ್ವಭಾವದ್ದು ಎನ್ನುತ್ತಾ ಅವರು ಪಾರಿಯೊಂದಿಗಿನ ಮಾತುಕತೆಯನ್ನು ಮುಂದುವರೆಸಿದರು. "ಮನುಷ್ಯರ ಧ್ವನಿ ಕೇಳಿಸಿದರೆ ಸಾಕು, ಅದು ತನ್ನ ಉದ್ದನೆಯ ಕಿವಿಗಳನ್ನು ಕೆಳಕ್ಕೆ ಇಳಿಸುತ್ತದೆ." ಇತ್ತೀಚಿನ ವರ್ಷಗಳಲ್ಲಿ ಅದು ಹೊಲಗಳಿಗೆ ಬರುವುದನ್ನೂ ಕಡಿಮೆ ಮಾಡಿದೆ. 2022 ಮತ್ತು 2023ರಲ್ಲಿ ಮೂರರಿಂದ ನಾಲ್ಕು ಬಾರಿ ದಾಳಿ ಮಾಡುತ್ತಿದ್ದ ಆನೆ, 2024ರಲ್ಲಿ ಎರಡು ಬಾರಿ ಮತ್ತು 2025ರಲ್ಲಿ ಕೇವಲ ಒಂದು ಬಾರಿ ಮಾತ್ರ ಬಂದಿದೆ.















