"ಆಜಾದಿ! ಆಜಾದಿ!" ಅರಮನೆಯಿಂದ ದೂರದಲ್ಲಿ ಕೋಟ್ಯಂತರ ಕೊಳಕು ಕೀಟಗಳು ಕೂಗುತ್ತಿದ್ದವು. ಆ ಕೀಟಗಳು ಒಟ್ಟಾಗಿ ಗರ್ಜಿಸಿದಾಗ ಅವನಿಗೆ ತೀವ್ರ ಹೇಸಿಗೆಯೆನ್ನಿಸುತ್ತಿತ್ತು. "ಆಜಾದಿ! ಆಜಾದಿ!" ಆ ಕೀಟಗಳು ಘನತೆಯ ಬದುಕು ನಡೆಸಲು ಮುಂದಾದಾದಂತೆ ಅವನಲ್ಲಿ ದ್ವೇಷ ಹೆಚ್ಚುತ್ತಿತ್ತು. "ಆಜಾದಿ! ಆಜಾದಿ!" ಆ ಕೀಟಗಳು ಒಗ್ಗಟ್ಟಿನ ಕರಾಳ ವಿದ್ಯೆಯನ್ನು ಕಲಿಯುತ್ತಿರುವುದು ಅವನಿಗೆ ಅಸಹನೀಯವಾಗಿತ್ತು. "ಆಜಾದಿ! ಆಜಾದಿ!" ಆ ಕ್ರಿಮಿಕೀಟಗಳು ಕೊಳಕು ಮತ್ತು ಬೆವರನ್ನು ಇಂತಹ ಭವ್ಯ ಸಸಿಗಳಾಗಿ ಪರಿವರ್ತಿಸಲು ಹೇಗೆ ಸಾಧ್ಯವಾಯಿತು? ಇದು ಯಾವ ಮಾಯೆ? ಯಾವ ಹುಚ್ಚುತನ? "ಆಜಾದಿ! ಆಜಾದಿ!" ಆ ತಿಳಿಗೇಡಿ ಹುಳಗಳಿಗೆ ತಮ್ಮ ಶ್ರಮಕ್ಕೆ ಪ್ರತಿಫಲವಾಗಿ ಹಣವನ್ನು ಕೇಳಲು ಹೇಗೆ ಧೈರ್ಯ ಬಂತು?
ರಾಜ ಆ ರೋಷಾವಿಷ್ಟ ಪ್ರಾಣಿಗಳನ್ನು ಮತ್ತೆ ಪಂಜರದಲ್ಲಿ ಕೂಡಿಡಲು ಬಯಸುತ್ತಿದ್ದ. ಆಕಾಶ ದಾರಿಯಲ್ಲಿ ನಗುತ್ತಾ ಸಾಗುವ ದೇವತೆಗಳ ಅಧಿಪತಿಯ ಕೃಪೆಯಿಂದಾಗಿ ಆ ರಾಜ್ಯಕ್ಕೆ ಎಲ್ಲಿಂದಲೋ ಹೊಸ ಕಾಯಿಲೆಯೊಂದು ಬಂತು. ವ್ಯಾಪಾರದಿಂದಾಗಿ ರಾಜ್ಯದ ಬೊಕ್ಕಸದಲ್ಲಿ ಹಣ ತುಂಬಿ ಹರಿಯುತ್ತಿತ್ತು. ಈ ಕಾಯಿಲೆಯು ಜನಸಮೂಹವವನ್ನು ಕರಗಿಸುತ್ತಿತ್ತು. ʼಆಜಾದಿ!, ಆಜಾದಿ!ʼ ಎನ್ನುವ ಮಾರಕ ರೋಗಕ್ಕೆ ರಾಜ ಔಷಧಿ ಕಂಡು ಹಿಡಿದಿದ್ದ. ಅದು ಅವನ ಮುಷ್ಟಿಯಲ್ಲಿತ್ತು. ಆದರೆ ಈ ಕೀಟಗಳಿಗೆ ಆ ಸರ್ವರೋಗ ನಿವಾರಕ ಔಷಧಿಯನ್ನು ಉಚಿತವಾಗಿ ಕೇಳುವಷ್ಟು ಧೈರ್ಯವನ್ನು ಹೇಗೆ ಮಾಡಿದವು?
ರಾಜ್ಯದ ಆಗಸಕ್ಕೆ ಕತ್ತಲು ಆವರಿಸುತ್ತಿತ್ತು. ರಾಜ ತನ್ನ ಕಿಟಿಕಿಯಿಂದ ತನ್ನ ಹೊಸ ಅರಮನೆಯ ಗುಮ್ಮಟವನ್ನು ಆತುರದಿಂದ ನೋಡುತ್ತಿದ್ದನು. "ಆಜಾದಿ! ಆಜಾದಿ!" ಈ ದನಿಗಳು ಬಿದ್ದು ಹೋಗಲಿ. ಮಣ್ಣನ್ನು ಪಚ್ಚೆ ಹಸಿರಾಗಿಸುವ ಈ ಬೆರಳುಗಳು ಬಿದ್ದು ಹೋಗಲಿ. ಶ್! ಸುಮ್ಮನಿರು! ಕಿಟಕಿಯ ಬಳಿ ಏನೋ ಸದ್ದು ಕೇಳಿಸಿತು. ಒಂದು ವಿಚಿತ್ರ ಬಳ್ಳಿ ಮೇಲಕ್ಕೆ ಹರಿದಾಡುತ್ತಾ ಏರುತ್ತಿತ್ತು, ಅದರ ಎಲೆಗಳು ಉಗುರುಗಳಂತಿದ್ದವು ಮತ್ತು ಹೂವುಗಳು ರಕ್ತಗೆಂಪು ದೇಹದ ಮಾಂತ್ರಿಕನಂತಿದ್ದವು.
ಹಗಲಿನಲ್ಲಿ ರೈತನೊಬ್ಬನ ಟ್ರಾಕ್ಟರ್ ಹರಿದಂತೆ, ರಾತ್ರಿಗೆ ಇಬ್ಬರು ಚಂದ್ರರು ರಾಜನ ಕಿಟಕಿಯೆದುರು ಉದಯಿಸಿದರು. ಅವುಗಳಲ್ಲಿ ಒಂದು ನಮ್ಮ ಬಹಿಷ್ಕೃತ ರಂಜಾನ್ನ ಅರ್ಧಚಂದ್ರಾಕೃತಿಯಾದರೆ, ಮತ್ತೊಂದು ಟ್ರಾಕ್ಟರ್ನ ಏಕೈಕ ಚಕ್ರವಾಗಿತ್ತು.












