ʼರಾಜ ಸುಪಾಡ್ಕನ್ನೊʼ –ಗುಜರಾತಿಯಲ್ಲಿ ಆನೆ ಕಿವಿಯ ರಾಜ – ನನ್ನ ಬಾಲ್ಯದ ಅಚ್ಚುಮೆಚ್ಚಿನ ಕಥೆಗಳಲ್ಲಿ ಇದು ಒಂದು. ಇದನ್ನು ನಾನು ಮೊದಲ ಬಾರಿಗೆ ನನ್ನ ತಾಯಿಯಿಂದ ಕೇಳಿದೆ. ನಂತರ, ನಾನು ಇದರ ಹಲವಾರು ಆವೃತ್ತಿಗಳನ್ನು ಕೇಳಿದೆ. ಗಿಜುಭಾಯಿ ಬಧೇಕಾ ಅವರ ಮಕ್ಕಳಿಗಾಗಿ ಬರೆದ ಕಿರು ಕಥೆಗಳ ಪುಸ್ತಕದಲ್ಲಿ ಕೂಡ ಇದರ ಒಂದು ಆವೃತ್ತಿಯನ್ನು ನಾನೇ ಓದಿದೆ. ಬಧೇಕಾ ಅವರ ಪುಸ್ತಕದಲ್ಲಿ ಪ್ರಪಂಚದಾದ್ಯಂತದ ಅನೇಕ ಜಾನಪದ ಕಥೆಗಳನ್ನು ಅಳವಡಿಸಲಾಗಿತ್ತು. ಬಹುಶಃ ರಾಜ ಸುಪಾಡ್ಕನ್ನೊ ಕಥೆಗೆ ರಾಜ ಮೈದಾದ ಕತ್ತೆ ಕಿವಿಯ ಕಥೆ ಸ್ಫೂರ್ತಿಯಾಗಿರಬಹುದು.
ಹಸಿದು ದಾರಿತಪ್ಪಿದ ರಾಜನೊಬ್ಬ ಕಾಡಿನಲ್ಲಿ ಒಂದು ಗುಬ್ಬಚ್ಚಿಯ ಕುತ್ತಿಗೆ ಮುರಿದು ತಿಂದಿದ್ದ. ಆ ಕಾರಣಕ್ಕಾಗಿ ಅವನಿಗೆ ದೊಡ್ಡ, ಆನೆಗಳ ಕಿವಿಯಂತಹ ಕಿವಿಗಳನ್ನು ಹೊಂದುವ ಶಾಪ ಸಿಕ್ಕಿತ್ತು. ಅರಮನೆಗೆ ಮರಳಿದ ನಂತರ, ಅವನು ತನ್ನ ಪ್ರಜೆಗಳ ಸೂಕ್ಷ್ಮ ನೋಟದಿಂದ ತನ್ನ ಕಿವಿಗಳನ್ನು ಬಗೆಬಗೆಯ ಶಿರಸ್ತ್ರಾಣಗಳು ಮತ್ತು ಸ್ಕಾರ್ಫ್ಗಳ ಅಡಿಯಲ್ಲಿ ಅಡಗಿಸಿಕೊಂಡು ಉಳಿದ ದಿನಗಳನ್ನು ಕಳೆದನು. ಆದರೆ ಸಮಯ ಬಂದಾಗ, ಅವನು ತನ್ನ ಹತೋಟಿಗೆ ಸಿಗದ ಕೇಶರಾಶಿ ಮತ್ತು ನಿಯಂತ್ರಿಸಲಾಗದ ಗಡ್ಡವನ್ನು ಕತ್ತರಿಸಲು ಕ್ಷೌರಿಕನೊಬ್ಬನನ್ನು ಕರೆಯಬೇಕಾಯಿತು.
ರಾಜನ ಕಿವಿಯನ್ನು ನೋಡಿ ಕ್ಷೌರಿಕನು ದಿಗ್ಭ್ರಮೆಗೊಂಡನು. ಅವನ ದೊಡ್ಡ ಕಿವಿಗಳ ನಾಚಿಕೆಗೇಡಿನ ರಹಸ್ಯ ಈಗ ಬಹಿರಂಗವಾಗುವ ಅಪಾಯದಲ್ಲಿತ್ತು. ಶಕ್ತಿಶಾಲಿ ರಾಜನು ಆ ಸಾಮಾನ್ಯ ಕ್ಷೌರಿಕನನ್ನು ಬೆದರಿಸಿ, ಆ ರಹಸ್ಯವನ್ನು ಯಾರಿಗೂ ಹೇಳದಂತೆ ಆಜ್ಞಾಪಿಸಿದನು. ಆದರೆ, ರಾಜನ ಕ್ಷೌರಿಕನು ಆ ರಹಸ್ಯವನ್ನು ತನ್ನೊಳಗೆ ಇಟ್ಟುಕೊಳ್ಳಲಾಗದೆ, ಕಾಡಿನಲ್ಲಿ ಒಂದು ಮರದ ಬಳಿ ಹೋಗಿ ಅದನ್ನು ಪಿಸುಗುಟ್ಟಿದನು.
ಯಾವುದೋ ಸಂದರ್ಭದಲ್ಲಿ ಮರವು ಮರ ಕಡಿಯುವವನಿಗೆ ಎದುರಾದಾಗ, ಆ ಮರವು ರಾಜನ ಆನೆ ಕಿವಿಯ ರಹಸ್ಯದ ಬಗ್ಗೆ ಹಾಡಿತು. ಮರ ಕಡಿಯುವವನು ಆ ಮಾಂತ್ರಿಕ ಮರವನ್ನು ಡೋಲು ತಯಾರಕನಿಗೆ ಮಾರಿದನು. ಅವನು ಅದರಿಂದ ಡಹರೆ ಎಂಬ ವಾದ್ಯವನ್ನು ಮಾಡಿದನು. ಅದನ್ನು ನುಡಿಸಿದಾಗಲೆಲ್ಲಾ ಅದೇ ಹಾಡನ್ನು ಹಾಡುತ್ತಿತ್ತು. ಮತ್ತು ಬೀದಿಗಳಲ್ಲಿ ಡೋಲು ನುಡಿಸುತ್ತಾ ಕಾಣಿಸಿಕೊಂಡ ಒಬ್ಬ ಮನುಷ್ಯನನ್ನು ತಕ್ಷಣವೇ ರಾಜನ ಬಳಿ ಕರೆತರಲಾಯಿತು… ನಾನು ನೆನಪಿಸಿಕೊಂಡಂತೆ, ರಾಜನು ತನ್ನ ಪಾಪಗಳಿಂದ ಮುಕ್ತಿ ಪಡೆಯಲು ತನ್ನ ರಾಜ್ಯದಲ್ಲಿ ಒಂದು ಪಕ್ಷಿಧಾಮವನ್ನು ಸ್ಥಾಪಿಸಬೇಕೆಂದು ತಿಳಿದುಕೊಳ್ಳುವವರೆಗೂ ಕಥೆ ಮುಂದುವರೆಯುತ್ತದೆ.
ರಾಜನ ಆನೆ ಕಿವಿ
ನಿನ್ನ ಬಾಯಿ ಬೀಗ ಹಾಕಿಕೋ, ಒಂದು ಮಾತನ್ನೂ ಆಡಬೇಡ
ರಾಜನಿಗೆ ಆನೆ ಕಿವಿಯಿದೆಯೆಂದು ಯಾರಿಗೂ ಹೇಳಬೇಡ
ಕತೆಗಳನ್ನು ಗಾಳಿಯಲ್ಲಿ ಹರಡಬೇಡ
ರಾಜನಿಗೆ ಆನೆ ಕಿವಿಯೆಂದು.
ಮೈನಾ ಹಕ್ಕಿಗಳೆಲ್ಲ ಎಲ್ಲಿ ಹೋದವು?
ನಾನೊಮ್ಮೆ ನೋಡಿದ್ದೆ,
ಇತ್ತೀಚೆಗಷ್ಟೇ ತಾನೇ?
ಯಾರು ಸುಪ್ತವಾಗಿ ಜಾಲ ಹರಡಿದ್ದರು?
ಬೀಜಗಳ ಬಲೆಯನ್ನು ಇಟ್ಟವರು ಯಾರು?
ಒಳಸಂಚಿನ ವಾಸನೆಯನ್ನು ಅನುಮಾನಿಸುವುದನ್ನು ನಿಲ್ಲಿಸಿ,
ಷಡ್ಯಂತ್ರದ ಬಗ್ಗೆ ಯೋಚಿಸಬೇಡಿ -
ಏಕೆಂದರೆ ರಾಜನಿಗೆ ಆನೆ ಕಿವಿಗಳಿವೆ.
ನೀವು ಹೇಳುವಂತೆ ಮೈನಾ ಹಕ್ಕಿಗಳನ್ನು ದೇಶಭ್ರಷ್ಟ ಮಾಡುವ ಆದೇಶ ಹೊರಡಿಸಿದ್ದರೆ
ಅವುಗಳ ಗೂಡುಗಳಿಂದ, ಮರಗಳಿಂದ, ಕಾಡುಗಳಿಂದ, ಹೊಲಗಳಿಂದ, ಮತ್ತು ಉಳಿದ ಸ್ಥಳಗಳಿಂದ
ಅವುಗಳನ್ನು ಓಡಿಸಿದ್ದರೆ,
ಅವುಗಳ ಜೀವನ, ಹಾಡುಗಳು, ಸ್ವರಗಳು,
ಮತ್ತು ಅವುಗಳ ರೆಕ್ಕೆಗಳನ್ನು ತಮ್ಮ ಇಚ್ಛೆಯಂತೆ ಬಡಿದೆಬ್ಬಿಸುವ ಅಧಿಕಾರ
ಇನ್ನೂ ಉಳಿದಿರುತ್ತಿತ್ತೇ?
ಯಾವುದೇ ಕಾರಣವಿಲ್ಲದೆ ತೊಂದರೆಗಳನ್ನು ಹೆಚ್ಚಿಸುವಂತಹ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿ.
ಒಬ್ಬ ರಾಜನ ಮುಂದೆ ಮೈನಾ ಹಕ್ಕಿಗಳ ಯೋಗ್ಯತೆ ಏನು?
'ಪಕ್ಷಿಗಳನ್ನು ಉಳಿಸಿ, ರಾಜನನ್ನು ಅಧಿಕಾರದಿಂದ -
ಇಂತಹ ಟೊಳ್ಳು ಘೋಷಣೆಗಳನ್ನು ಕೂಗಬೇಡಿ -
ಏಕೆಂದರೆ ರಾಜನಿಗೆ ಆನೆ ಕಿವಿಗಳಿವೆ.
ಪಕ್ಷಿಗಳು ಹೇಳಿದವು, "ನಾನು ಸಾಕ್ಷಿ,
ನನ್ನ ಮಾತನ್ನು ನಂಬಿ ಅಥವಾ ಆಕಾಶವನ್ನು ಕೇಳಿ.
ರಾಜನೇ ಮೈನಾ ಹಕ್ಕಿಗಳನ್ನು ಕೊಲ್ಲಿಸಿದ್ದಾನೆ."
ಗಾಳಿ ಹೇಳುತ್ತದೆ, "ನನ್ನನ್ನು ನಂಬಿ,
ನಾನು ಅವುಗಳ ಧ್ವನಿಯನ್ನು ಕೇಳಿದ್ದೇನೆ,
ರಾಜನ ಹೊಟ್ಟೆಯಲ್ಲಿ ಮೈನಾ ಹಕ್ಕಿಗಳು ಹಾಡುತ್ತವೆ."
ಆದರೆ, ಜನರು ಹೇಳುವುದನ್ನು ನೀವು ಕೇಳಬೇಡಿ,
ನಿಮ್ಮ ಕಣ್ಣುಗಳು ನೋಡುವುದನ್ನು ನಂಬಬೇಡಿ,
ಮತ್ತು ನೀವು ನಂಬಬೇಕಿದ್ದರೆ, ನಂಬಿ,
ಆದರೆ ಮತ್ತೆ ಈ ರೀತಿ ಯೋಚಿಸುವ ಧೈರ್ಯವನ್ನು ಮಾಡಬೇಡಿ -
ಏಕೆಂದರೆ ರಾಜನಿಗೆ ಆನೆ ಕಿವಿಗಳಿವೆ.
ಎಂತಹ ರಾಜ ಮತ್ತು ಎಂತಹ ಮಹಾನ್ ದೇಶ!
ದೇವರಂತೆ ಬಟ್ಟೆ ಧರಿಸುತ್ತಾನೆ,
ಮತ್ತು ಹಸಿದವರನ್ನು ತಿಂದುಬಿಡುತ್ತಾನೆ?
ಇಂತಹ ನಿಷ್ಪ್ರಯೋಜಕ ಮಾತುಗಳನ್ನು ಆಡಬೇಡಿ, ಇದು ನನ್ನ ವಿನಂತಿ.
ಇಡೀ ದಿನ ನಿಮ್ಮ ಆತ್ಮಸಾಕ್ಷಿಯೊಂದಿಗೆ ಹೋರಾಡಬೇಡಿ.
ನಿಮಗೆ ಗೋಡೆ ಕಾಣಿಸಿದರೆ,
ನಿಸ್ಸಂಶಯವಾಗಿ ಬಿರುಕುಗಳೂ ಕಾಣಿಸುತ್ತವೆ.
ಆದರೆ, ಪ್ರತಿ ಬಿರುಕು, ಪ್ರತಿ ರಂಧ್ರದ
ಆಳಕ್ಕೆ ಹೋಗಬೇಡಿ.
ಪ್ರತಿ ಎರಡನೇ ಹಳ್ಳಿಯ ರಸ್ತೆಯ ಮೂಲೆಯಲ್ಲಿ
ನಿಮಗೆ ಸತ್ಯ ಕೇಳಿಬರುತ್ತದೆ
ಸಾವಿರ ವಿಭಿನ್ನ ಭಾಷೆಗಳಲ್ಲಿ ಮಾತನಾಡುತ್ತದೆ.
ಹುಚ್ಚರಂತೆ ಅದನ್ನು ಬೆನ್ನಟ್ಟಲು ಪ್ರಾರಂಭಿಸಬೇಡಿ.
ಯಾವುದೇ ಮೂರ್ಖ ಸಸ್ಯದೊಂದಿಗೆ ಮಾತನಾಡಬೇಡಿ.
ಇದರ ಹಾಡನ್ನು ಹಾಡುವ ಅಗತ್ಯವಿಲ್ಲ,
ಮತ್ತು ಡೋಲನ್ನೂ ಬಡಿಯುವ ಅಗತ್ಯವಿಲ್ಲ -
ಏಕೆಂದರೆ ರಾಜನಿಗೆ ಆನೆ ಕಿವಿಗಳಿವೆ.
ನನ್ನ ಮಾತು ಕೇಳಿ, ಮೈನಾ ಹಕ್ಕಿಗಳು ಮತ್ತು ಮರಗಳನ್ನು ಮರೆತುಬಿಡಿ,
ಕಾಡಿನ ಕಡೆಗೆ ನೋಡುವುದನ್ನು ನಿಲ್ಲಿಸಿ.
ಮತ್ತು ನೀವು ನೋಡಲೇಬೇಕಿದ್ದರೆ, ನೋಡಿ, ಆದರೆ ಚೆನ್ನಾಗಿ ತಿಳಿದುಕೊಳ್ಳಿ
ಮತ್ತು ದಯೆ ಮಾಡಿ, ತಂದೆ-ತಾಯಿ.
ಕವಿತೆಯಲ್ಲಿ ಈ ರೀತಿ ಬರೆಯುವ ತಪ್ಪನ್ನು
ಎಂದಿಗೂ ಮಾಡಬೇಡಿ -
ಏಕೆಂದರೆ ರಾಜನಿಗೆ ಆನೆ ಕಿವಿಗಳಿವೆ.
ಓಹೋ, ರಾಜನಿಗೆ ಆನೆ ಕಿವಿಗಳಿವೆ.