ಕಳೆದ ಒಂದು ವಾರದಿಂದ ಅವಳು ನಿದ್ದೆ ಮಾಡಿರಲಿಲ್ಲ. ಅವಳು ಮತ್ತು ಅವಳ ಕೆಲವು ಸಹೋದ್ಯೋಗಿಗಳು ಹಳೆಯ ಕಥೆಗಳು, ಪುರಾಣ ಮತ್ತು ದಂತಕಥೆಗಳನ್ನು ಅಗೆದು ತೆಗೆಯಲು ಆಧುನಿಕ ಆರ್ಯಾವರ್ತದಲ್ಲಿ ಸಂಚರಿಸುತ್ತಿದ್ದರು. ಯಮುನಾ ನದಿಯ ಈ ಒಂದು ಕಾಲದ ಫಲವತ್ತಾದ ಕಣಿವೆಯು ಬಹುತೇಕ ಬಂಜರು ಭೂಮಿಯಾಗಿದೆ ಎನ್ನುವುದು ಅವಳಿಗೆ ಗೊತ್ತಿತ್ತು; ಆದರೆ ಈಗ ಅವಳಿಗೆ ಕಾಣಿಸುತ್ತಿರುವುದು ಅವಳ ಜೀವನದಲ್ಲಿ ಅವಳು ಕಂಡ ಅತ್ಯಂತ ಭಯಾನಕ ಸಂಶೋಧನೆಯಾಗಿತ್ತು! ಅಗೆದಂತೆಲ್ಲಾ ಅಸ್ಥಿಪಂಜರಗಳು, ತಲೆಬುರುಡೆಗಳು ಮತ್ತು ಬೂದು ಬಣ್ಣದ ಮಣ್ಣಿನಿಂದ ಇಣುಕುತ್ತಿರುವ ಬಿಳಿಬಣ್ಣದ ಮೂಳೆಗಳು ಕಾಣಿಸುತ್ತಿದ್ದವು... ಈ ಭಯಾನಕ ಸ್ಮಶಾನವನ್ನು ಕಂಡು ಅವಳ ಕುತೂಹಲದ ಜಾಗವನ್ನು ಭಯಾನಕ ಭೀತಿಯು ಯಾವಾಗ ಆಕ್ರಮಿಸಿತೆನ್ನುವುದು ಅವಳಿಗೇ ತಿಳಿಯಲಿಲ್ಲ.
ಕೆಲವು ಕಡೆಗಳಲ್ಲಿ ಮಾತ್ರ ಅವರಿಗೆ ವಿಭಿನ್ನವಾದುದೇನೋ ಸಿಕ್ಕಿತು. ಎಲ್ಲಿ ಶರಯೂ ನದಿ ಇತ್ತೋ ಅಲ್ಲಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಒಂದು ಪುರಾತನ ದೇವಸ್ಥಾನದ ಅವಶೇಷಗಳಿದ್ದವು. ಕಲ್ಲುಗಳ ರಾಶಿಯಿತ್ತು. ಆ ಕಲ್ಲುಗಳ ಮೇಲೆ ತಾಮ್ರದ ಫಲಕಗಳನ್ನು ಅಂಟಿಸಲಾಗಿತ್ತು. ಅದೊಂದುಅತ್ಯಂತ ವಿಭಿನ್ನವಾದ ವಾಸ್ತುಶೈಲಿಯಾಗಿತ್ತು, ಯಾವುದೋ ಬಹಳ ಪುರಾತನ ಕಾಲದ ಕಡೆಗೆ ಇದು ಇಶಾರೆ ಮಾಡುತ್ತಿತ್ತು. ಅಲ್ಲಿಯೇ ಅವಳಿಗೆ ಕೆಲವು ಇಟ್ಟಿಗೆಗಳೂ ದೊರೆತವು, ಅವುಗಳ ಮೇಲೆ ಅಪರಿಚಿತ ಲಿಪಿಯ ಕೆಲವು ಅಕ್ಷರಗಳನ್ನು ಕೆತ್ತಲಾಗಿತ್ತು. ಇದಕ್ಕೂ ಮೊದಲು ಯಮುನಾ ನದಿಯ ಪಶ್ಚಿಮ ತೀರದಲ್ಲಿ ಒಂದು ಸಮಾಧಿಯಂತಹ ಕಟ್ಟಡದ ಕಲ್ಲುಗಳ ಮೇಲೂ ಅವರಿಗೆ ಇಂತಹದೇ ಅಕ್ಷರಗಳು ಕೆತ್ತಲ್ಪಟ್ಟಿರುವುದು ಕಂಡುಬಂದಿತ್ತು. ಅವಳಿಗೆ ಅದರ ನೆನಪಾಯಿತು. ಕೆಲವು ಎತ್ತರದ ಪುತ್ಥಳಿಗಳೂ ದೊರೆತಿದ್ದವು. ಕೆಲವು 182 ಮೀಟರ್ ಎತ್ತರದವು... ಕೆಲವು ಅದಕ್ಕಿಂತಲೂ ಎತ್ತರದವು. ಆದರೆ ಈ ಎಲ್ಲವನ್ನೂ ಮೀರಿ ನಿಲ್ಲುವಂತವುಗಳೆಂದರೆ ಆ ಮಾನವ ಅಸ್ಥಿಪಂಜರಗಳು! ಅವು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದವು.
ಮತ್ತು ಈ ಎಲ್ಲದರ ಮಧ್ಯೆ ಅವರಿಗೆ ಒಂದು ತ್ರಿಕೋನಾಕಾರದ ಕಟ್ಟಡವು ಕಂಡಿತು, ಅದು ಯಾವುದೋ ರಾಜನ ದರ್ಬಾರಿನಂತೆ ಇತ್ತು. ವಿಚಿತ್ರವಾಗಿ ಕಾಣುವ ಒಂದು ಸಿಂಹಾಸನವೂ ಅಲ್ಲಿತ್ತು. ಬಹುಶಃ ಯಮುನಾ ತೀರದಲ್ಲಿ ಯಾರ ಅಸ್ಥಿಪಂಜರಗಳು ಕಂಡುಬಂದಿದ್ದವೋ, ಆ ಜನರ ರಾಜನಿರಬಹುದು ಅವನು. ಇವೆಲ್ಲವನ್ನೂ ನೋಡಿ ಅವಳಿಗೆ ಭಯವಾಯಿತು. ಅವಳು ಆ ಭಾಗಕ್ಕೆ ‘ಸ್ಮಶಾನ ನಗರ’ ಎಂದು ಹೆಸರಿಟ್ಟಳು. ಆ ಸಮಾಧಿಗಳ ಮಧ್ಯದಿಂದ ಅಂಕುಡೊಂಕಾಗಿ ಮುರಿದು ಬಿದ್ದಿದ್ದ ಕಂಬಗಳು ಕಾಣಿಸುತ್ತಿದ್ದವು. ಹಾಗಿದ್ದರೆ ಇತಿಹಾಸದಲ್ಲಿ ಎಂತಹ ದೊಡ್ಡ ಹತ್ಯಾಕಾಂಡ ನಡೆದಿರಬಹುದು...? ಅವಳ ಜೊತೆಗಿದ್ದ ಇತಿಹಾಸ ತಜ್ಞರು ಮತ್ತು ಪುರಾತತ್ವ ಶಾಸ್ತ್ರಜ್ಞರು ಅದನ್ನು ನೆನಪಿಸಿಕೊಳ್ಳಲು ಮತ್ತು ಅದರ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು.



