ಅಂದು ಮುಂಜಾನೆ 48 ವರ್ಷದ ಗೋಮತಿ ವೀರಯನ್ ತನ್ನ ಗುಡಿಸಲಿನ ಹೊರಗೆ ಕುಳಿತು ಕುಟುಂಬಕ್ಕೆ ಗಡಿಬಿಡಿಯಲ್ಲಿ ಅಡುಗೆ ಮಾಡುತ್ತಿದ್ದರು. ಇದು ಮುಯಿಲಾಡುತುರೈ ಜಿಲ್ಲೆಯ ಸಿರ್ಕಾಳಿ ತಾಲ್ಲೂಕಿನ ಪಳೈಯಾರ್ ಎನ್ನುವಲ್ಲಿಂದ ಆರು ಕಿಲೋಮೀಟರ್ ದೂರದಲ್ಲಿರುವ ತಾಂಡವಕುಲಂ ದಲಿತ ಕಾಲೋನಿಯ ಕುರಿತು ತಿಳಿದಿರುವ ಯಾರಿಗೂ ತೀರಾ ಅಪರಿಚಿತ ದೃಶ್ಯವೇನಲ್ಲ. ಈ ಕಾಲೋನಿಯ ಬಹುತೇಕ ಮಹಿಳೆಯರಂತೆ ಗೋಮತಿಯವರೂ ಬೆಳಗ್ಗೆ ನಾಲ್ಕು ಗಂಟೆಗೂ ಎದ್ದು ಕೆಲಸ ಶುರು ಮಾಡುತ್ತಾರೆ. ಬೆಳಗಿನ ಕೆಲಸಗಳೆಂದರೆ ಹತ್ತಿರದ ನಲ್ಲಿಯಿಂದ ನೀರು ತರುವುದು, ಇಕ್ಕಟ್ಟಾದ ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ತೆರೆದ ಸ್ಥಳದಲ್ಲಿರುವ ಸೌದೆ ಒಲೆಯಲ್ಲಿ ಅಡುಗೆ ಮಾಡುವುದು.
“ಗ್ಯಾಸ್ ಇದೆ, ಆದರೆ ಇದು ಅಗ್ಗ ಅನ್ಸತ್ತೆ” ಎಂದ ಗೋಮತಿ ತನ್ನ ಅನುಭವಿ ಕೈಗಳಿಂದ ಮಡಕೆಯ ಒಳಗೆ ಸೌಟು ಹಾಕಿ ತಿರುಗಿಸುತ್ತಿದ್ದರು. ತನ್ನ ಗಂಡ, ಅತ್ತೆ ಮತ್ತು ಮಗನಿಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ತಯಾರಿಸುವ ಹೊತ್ತಿಗೆ, ಸಮಯ ಮೀರಿ ತಿಂಡಿ ತಿನ್ನುವುದಕ್ಕೂ ಅವರಿಗೆ ಹೊತ್ತು ಸಿಗುವುದಿಲ್ಲ.
ಮನೆಯಿಂದ ಗಡಿಬಿಡಿಯಲ್ಲೇ ಹೊರಡುವ ಅವರು ಅಲ್ಲಿಂದ ಪಳೈಯಾರ್ ಎನ್ನುವಲ್ಲಿಗೆ ಬರುತ್ತಾರೆ. ಅವರು ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಮೀನು ಒಣಗಿಸುವ ಕೆಲಸ ಮಾಡುತ್ತಾರೆ. ಇಲ್ಲಿನ ಅವರ ಇಡೀ ದಿನದ ಕೆಲಸವನ್ನು ನದಿಯ ಲಯ ಮತ್ತು ಚಂದ್ರನ ಚಲನೆ ನಿರ್ದೇಶಿಸುತ್ತದೆ.
ತಮ್ಮ ಮನೆಗೆಲಸಗಳನ್ನು ಮುಗಿಸಿ ಒಬ್ಬೊಬ್ಬರಾಗಿ ಒಟ್ಟುಗೂಡತೊಡಗಿದ ಮಹಿಳೆರು, ನದಿಯ ಉಬ್ಬರ ಕಡಿಮೆಯಾಗುತ್ತಿದ್ದ ಹಾಗೆ ಅದರ ದಡದತ್ತ ಸಾಗುತ್ತಾರೆ. ಪಳೈಯಾರ್ಬಂದರಿನಲ್ಲಿ ಅವರಿಗೆ ಮೀನು ಒಣಗಿಸುವ ಕೆಲಸವಿರುವಾಗ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಹತ್ತಿರದ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿ ಬಸ್ ಹಿಡಿಯುತ್ತಾರೆ. ಅವರ ಸಮಯ ನದಿಯ ಉಬ್ಬರ ಮತ್ತು ಇಳಿತವನ್ನು ಅವಲಂಬಿಸಿರುತ್ತದೆ. “ಪಳೈಯಾರ್ ನಮ್ಮ ಜನರ ಬದುಕಿನ ಜೀವನಾಡಿ! ಈ ನದಿಯೆಂದರೆ ಇಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಪಾಲಿಗೆ ಎಲ್ಲವೂ ಹೌದು” ಪಳೈಯಾರ್ ಬಂದರಿನಲ್ಲಿ ಮೀನು ಒಣಗಿಸುವ ಕೆಲಸ ಮಾಡುವ ಗೋಮತಿ ಹೇಳುತ್ತಾರೆ.
ಪಳೈಯಾರ್ ಮೀನುಗಾರಿಕಾ ಬಂದರಾಗಿದ್ದು, ಇದು ಕೊಲ್ಲಿಡಂ ನದಿಯ ಮುಖಜ ಪ್ರದೇಶದಲ್ಲಿದೆ. ಇದೇ ಪ್ರದೇಶದಲ್ಲಿ ಈ ನದಿ ಬಂಗಾಳಕೊಲ್ಲಿ ಸಮುದ್ರವನ್ನು ಸೇರುತ್ತದೆ. ಮಯಿಲಾಡುತುರೈ (2020ರಲ್ಲಿ ನಾಗಪಟ್ಟಿಣಂ ಜಿಲ್ಲೆಯಿಂದ ಬೇರ್ಪಟ್ಟಿದೆ) ಜಿಲ್ಲೆಗೆ ಸೇರಿದ ಇದು ತಮಿಳುನಾಡಿನ 12 ಮೀನುಗಾರಿಕಾಬಂದರುಗಳಲ್ಲಿಒಂದು. ಮತ್ತು ಇದು ಸುತ್ತಮುತ್ತಲಿನ ಊರುಗಳ ಮೀನುಗಾರಿಕೆಯನ್ನು ಹೊಟ್ಟೆಪಾಡು ಮಾಡಿಕೊಂಡಿರುವ ಜನರಿಗೆ ಹೊಟ್ಟೆಪಾಡಿಗೆ ದಾರಿ ತೋರಿಸುತ್ತದೆ.
ಗೋಮತಿ ವೀರಯನ್ ಹಲವು ವರ್ಷಗಳಿಂದ ಪಳೈಯಾರ್ ಮೀನುಗಾರಿಕೆ ಬಂದರಿನಲ್ಲಿ ಮೀನು ಒಣಗಿಸುವ ಕೆಲಸ ಮಾಡುತ್ತಿದ್ದಾರೆ. “ಮಹಿಳೆಯರ ಮತ್ತು ಬಂದರಿನ ನಡುವಿನ ನಂಟು ಬಹಳ ಆಳವಾದದ್ದು” ಎನ್ನುತ್ತಾರೆ ಗೋಮತಿ. “ಇಲ್ಲಿಯೇ ಹುಟ್ಟಿದ ನಾವು ಇಲ್ಲಿಯೇ ಮದುವೆಯಾಗಿ ಬಾಳು ನಡೆಸುತ್ತೇವೆ. ಈ ಹಿಂದೆ ಹೊಲ-ಗದ್ದೆಗಳಲ್ಲಿ ಭತ್ತದ ನಾಟಿ, ಬೇಳೆ – ಕಾಳು ಬೆಳೆಗಳಿಗೆ ಸಂಬಂಧಿಸಿದ ಕೆಲಸವನ್ನೂ ಮಾಡುತ್ತಿದ್ದೆವು. ಆದರೆ ಈಗ ಅದಕ್ಕೆಲ್ಲ ಜಾಗವಿಲ್ಲ. ಜೊತೆಗೆ ಮಳೆಯೂ ಸರಿಯಾಗಿ ಬರುತ್ತಿಲ್ಲ, ಅಥವಾ ಈಗ ಎಲ್ಲವೂ ಸರಿಯಿಲ್ಲ ಬೆಳೆಗಳೆಲ್ಲ ಒಣಗಿಹೋಗುತ್ತವೆ.”
ತನ್ನ ಮಾತು ಮುಂದುವರೆಸಿದ ಅವರು “ಇಲ್ಲಿ ಬರಿಗೈಯಲ್ಲಿ ಸೀಗಡಿ [ಕ್ಯಾರಿಡಿಯಾ] ಹಿಡಿಯಲು ಅರಂಭಿಸಿದಾಗ ನನಗೆ 15 ವರ್ಷ. ನನ್ನ ಅಮ್ಮ ಹಾಗೂ ಅತ್ತೆ ಕೂಡಾ ಇದನ್ನೇ ಮಾಡಿದ್ದರು. ಬಸುರಿಯಿದ್ದಾಗಲೂ ನನಗೆ ಸೀಗಡಿ ಹಿಡಿಯುವ ಆಸೆಯಾಗುತ್ತಿತ್ತು, ಹಿಡಿಯುತ್ತಿದ್ದೆ ಕೂಡಾ. ಇದೇ ಸಂಪಾದನೆಯಿಂದ ನನ್ನ ಮಕ್ಕಳನ್ನು ಓದಿಸಿದ್ದೇನೆ. ಜೀವ ಇರುವ ತನಕ ಈ ಸೀಗಡಿ ಹಿಡಿಯುವ ಕೆಲಸ ಮುಂದುವರೆಸುತ್ತೇನೆ” ಎಂದರು.
ಬಂದರಿನಿಂದ ಆರುಕಿಲೋಮೀಟರ್ ದೂರದಲ್ಲಿರುವ ಅವರ ಊರಿನಿಂದ ಸುಮಾರು 20ಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ಇದೇ ಕೆಲಸ ಮಾಡುತ್ತಾರೆ. “ಹೆಂಗಸರು ಬೆಳಗಿನ 6 ಗಂಟೆಗೆ ಬಸ್ ಹಿಡಿಯುತ್ತಾರೆ. ನಾವು ಸೀಗಡಿ, ಮೀನು ಮತ್ತುಕಟಿಲ್ ಮೀನನ್ನು ಕ್ಲೀನ್ ಮಾಡುವುದು, ಉಪ್ಪು ಹಚ್ಚುವುದು, ಕಾಪಿಡುವುದು, ಮತ್ತು ಒಣಗಿಸುವುದನ್ನು ನಾಲ್ಕೈದು ಬಾರಿ ಮಾಡುತ್ತೇವೆ. ಪ್ರತಿಯೊಂದನ್ನೂ ಬೇರೆ ಬೇರೆ ರೀತಿಯಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಕಟ್ಟಿಡಲಾಗುತ್ತದೆ” ಎನ್ನುವ ಗೋಮತಿ ಪರೈಯರ್ ಸಮುದಾಯದ (ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ) ಸದಸ್ಯರು .




















