“ನೀರು ಗಬ್ಬುನಾತ ಬರುತ್ತದೆ, ಆದರೆ ನಮಗೆ ಬೇರೆ ದಾರಿ ಏನಿದೆ?”
ಪಶ್ಚಿಮದಲ್ಲಿ ಸೂರ್ಯನು ಅಸ್ತಮಿಸುತ್ತಿದ್ದಂತೆ, ಬಚ್ಚಾ ದೇವಿಯವರು ದೆಹಲಿಯ ಯಮುನಾ ನದಿಯಲ್ಲಿ ಮಿಂದೇಳಲು ಸಿದ್ಧರಾಗುತ್ತಿದ್ದರು. ಛತ್ತ್ ಮಹಾಪರ್ವವನ್ನು ಆಚರಿಸಲು ಕಾಳಿಂದಿ ಕುಂಜ್ನ ಘಾಟಿನಲ್ಲಿ ಸೇರಿರುವ ನೋಯ್ಡಾ, ದೆಹಲಿ, ಫರಿದಾಬಾದಿನ ಸಾವಿರಾರು ಭಕ್ತರಲ್ಲಿ ಇವರೂ ಒಬ್ಬರು. ನವೆಂಬರ್ ತಿಂಗಳ ಮೊದಲ ವಾರದಲ್ಲಿ ಬರುವ ಈ ಹಬ್ಬದಂದು ಸೂರ್ಯ, ನೀರು, ವಾಯು ಮತ್ತು ಪ್ರಕೃತಿಯನ್ನು ಆರಾಧಿಸಲಾಗುತ್ತದೆ. “ಛತ್ತ್ ನಮಗೆ ದೊಡ್ಡ ಹಬ್ಬ, ದೀಪಾವಳಿಗಿಂತಲೂ ದೊಡ್ಡ ಹಬ್ಬ,” ಎಂದು ಬಿಹಾರದ ಖಗರಿಯಾದಿಂದ ದೆಹಲಿಗೆ ವಲಸೆ ಬಂದಿರುವ 45 ವರ್ಷ ಪ್ರಾಯದ ರಾಜೇಶ್ ಮಂಡಲ್ ಹೇಳುತ್ತಾರೆ.
ನಾಲ್ಕು ದಿನಗಳ ಈ ಛತ್ತ್ ಪೂಜೆಯಲ್ಲಿ ಮೂರನೇ ದಿನ ತುಂಬಾ ಪವಿತ್ರವಾದ ದಿನ. ಅಂದು ಹೆಂಗಸರೆಲ್ಲಾ ಸೊಂಟದ ವರೆಗೆ ನೀರಿನಲ್ಲಿ ಮುಳುಗಿ ಎರಡು ಗಂಟೆಗಳ ಕಾಲ ಅಸ್ತಮಿಸುತ್ತಿರುವ ಸೂರ್ಯನಿಗೆ ಸಂಧ್ಯಾ ಆರ್ಘ್ಯವನ್ನು ಅರ್ಪಿಸುತ್ತಾರೆ. ದೆಹಲಿ ಸುತ್ತಮುತ್ತ ವಾಸಿಸುವ ಭಕ್ತರಿಗೆ ಈ ಆಚರಣೆಯನ್ನು ಮಾಡಲು ಮಲಿನಗೊಂಡಿರುವ ಯಮುನಾ ನದಿಯ ಅಪಾಯಕಾರಿಯಾಗಿ ನೀರನ್ನು ಬಿಟ್ಟು ಬೇರೆ ಯಾವ ಆಯ್ಕೆಯೂ ಇಲ್ಲ.



















