ತುಳುನಾಡಿನ ಗರ್ನಾಲ್ ಸಾಯ್ಬೆರ್ ಅಥವಾ ಸಿಡಿಮದ್ದು ತಯಾರಿಸುವ ಕುಶಲಕರ್ಮಿಗಳಿಗೆ ಕರಾವಳಿ ಕರ್ನಾಟಕದ ವಿವಿಧ ಸಾಂಸ್ಕೃತಿಕ ಆಚರಣೆಗಳಲ್ಲಿ ಹೆಚ್ಚು ಬೇಡಿಕೆಯಿದೆ. ಭೂತಕೋಲ, ಹಬ್ಬ ಹರಿದಿನಗಳು, ಮದುವೆಗಳು, ಹುಟ್ಟುಹಬ್ಬದ ಆಚರಣೆಗಳು, ಗೃಹಪ್ರವೇಶ ಮತ್ತು ಅಂತ್ಯಕ್ರಿಯೆಗಳಲ್ಲಿ ಅವರು ಒಂದು ಅವಿಭಾಜ್ಯ ಭಾಗವಾಗಿದ್ದಾರೆ.
ಗರ್ನಲ್ ಎಂದರೆ ಸಿಡಿಮದ್ದು ಮತ್ತು ಸಾಯ್ಬೆರ್ ಎಂದರೆ ಮುಸಲ್ಮಾನ ವ್ಯಕ್ತಿ.
ಮುಲ್ಕಿ ಪಟ್ಟಣದ ಗರ್ನಾಲ್ ಸಾಯಿಬರಾದ ಅಮೀರ್ ಹುಸೇನ್ ಅವರು ಹೇಳುವಂತೆ ಅವರಿಗೆ ಈ ಕಸುಬನ್ನು ಕಲಿಸಿದ್ದು ಅವರ ತಂದೆ ಮತ್ತು ತಲೆಮಾರುಗಳಿಂದ ಅವರ ಕುಟುಂಬ ಈ ವೃತ್ತಿಯನ್ನು ಮಾಡುತ್ತಾ ಬಂದಿದೆ.
"ಸಿಡಿಮದ್ದುಗಳನ್ನು, ಅದರಲ್ಲೂ ದೊಡ್ದ ಪಟಾಕಿಗಳನ್ನು ಎಸೆಯುವುದು ಮತ್ತು ಹ್ಯಾಂಡಲ್ ಮಾಡುವುದು ಅಪಾಯಕಾರಿ ಕೆಲಸ," ಎಂದು ಕರ್ನಾಟಕದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಸಂಶೋಧನಾ ಸಹವರ್ತಿ ನಿತೇಶ್ ಅಂಚನ್ ಹೇಳುತ್ತಾರೆ.
ಉಡುಪಿ ಜಿಲ್ಲೆಯ ಆತ್ರಾಡಿ ಗ್ರಾಮದ ಮುಸ್ಲಿಂ ಯುವಕ ಮುಸ್ತಾಕ್ ಆತ್ರಾಡಿ ಅವರು ಭೂತದ ಆಚರಣೆಗಳಲ್ಲಿ ಗರ್ನಲ್ಗಳನ್ನು ತಯಾರಿಸಿ ಸಿಡಿಸುತ್ತಾರೆ. ಇವರು ಅತ್ಯಂತ ಶಕ್ತಿಶಾಲಿ ಗರ್ನಲ್ಗಳಲ್ಲಿ ಒಂದಾದ ಕದೊಣಿಯನ್ನು ತಯಾರಿಸುವ ವಿಶೇಷ ಪರಿಣತಿಯನ್ನು ಪಡೆದಿದ್ದಾರೆ. "ಕದೊಣಿ ವಿವಿಧ ರಾಸಾಯನಿಕಗಳನ್ನು ಬಳಸಿ ವಿಸ್ತಾರವಾದ ಪ್ರಕ್ರಿಯೆಗಳಿಗೆ ಒಳಪಡಿಸಿ ತಯಾರಿಸಿದ ಸಿಡಿಮದ್ದು," ಎಂದು ಅವರು ಹೇಳುತ್ತಾರೆ. ಕದೊಣಿ ಸಿಡಿಯುವಾಗ ಇಡೀ ನೆಲವೇ ಅದುರುತ್ತದೆ.


