ಒಂದು ಕೈಯನ್ನು ಆಶೀರ್ವಾದದ ಭಂಗಿಯಲ್ಲಿ ಎತ್ತಿರುವ, ಸಿಂಹಾಸನದಲ್ಲಿ ವಿರಾಜಮಾನನಾಗಿರುವ ಗಣೇಶನ 10 ಅಡಿ ಎತ್ತರದ ಮೂರ್ತಿಯ ಸೊಂಡಿಲನ್ನು ಹಿಡಿದಿರುವ ಶಂಕರ್ ಮಿರದ್ವಾಡ್, ಒದ್ದೆಯಾದ ಮಣ್ಣಿನಿಂದ ಅದಕ್ಕೆ ಅಂತಿಮ ರೂಪ ನೀಡುತ್ತಿದ್ದಾರೆ. ಬಣ್ಣದ ಬಾಟಲಿಗಳು, ರಬ್ಬರ್ ಡೈ ಡಬ್ಬಿಗಳು, ಮತ್ತು ಮೂರ್ತಿಗಳ ಚೌಕಟ್ಟುಗಳ ಸುತ್ತಮುತ್ತ ತೆಂಗಿನ ಚಿಪ್ಪುಗಳು ಮತ್ತು ಪ್ಲಾಸ್ಟರ್ ತುಂಬಿದ ಗೋಣಿಚೀಲಗಳು ಹರಡಿಕೊಂಡಿವೆ. “ಕೆಲವು ಭಾಗಗಳಲ್ಲಿ ಇನ್ನೂ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಬಾಕಿಯಿದೆ” ಎಂದು ಶಂಕರ್ ಹೇಳುತ್ತಾರೆ. “ಅದರ ನಂತರ ಮೂರ್ತಿ ಬಣ್ಣ ಬಳಿಯಲು ಸಿದ್ಧವಾಗುತ್ತದೆ.”
ಹೈದರಾಬಾದ್ನ ಹಳೆಯ ನಗರದ ಧೂಳ್ಪೇಟ್ ಗದ್ದಿಬಿಡ್ದ ಮಂಗಲಹಾಟ್ ರಸ್ತೆಯಲ್ಲಿ ಕಂಡೂ ಕಾಣದಂತಿರುವ ಟಾರ್ಪಾಲಿನ್ ಮತ್ತು ಬಿದಿರಿನ ಶೆಡ್ನಡಿಯಲ್ಲಿ ಸಿದ್ಧವಿರುವ ಮತ್ತು ತಯಾರಾಗುತ್ತಿರುವ ಮೂರ್ತಿಗಳ ಸಾಲಿನ ಹಿಂದೆ, ಶಂಕರ್ ಕೆಲಸ ಮಾಡುತ್ತಿದ್ದಾರೆ. ದೊಡ್ಡ-ಸಣ್ಣ ಗಣೇಶ ಮೂರ್ತಿಗಳನ್ನು ಒಯ್ಯುವ ಟ್ರಕ್ಗಳು ಮತ್ತು ಟೆಂಪೋಗಳು ಕಿರಿದಾದ ಗಲ್ಲಿಗಳಲ್ಲಿ ಅತ್ಯಂತ ನಿಧಾನವಾಗಿ ಸಾಗುತ್ತಿವೆ. ಇಲ್ಲಿ ತಯಾರಾದ ಅತಿ ದೊಡ್ಡ ಮೂರ್ತಿಗಳು 21 ಅಡಿ ಎತ್ತರದವು, ಇವು ತಾರ್ಪಾಲಿನ್ನಿಂದ ಮುಚ್ಚಲ್ಪಟ್ಟಿದ್ದು, ಜನರ ಜಯಘೋಷದೊಂದಿಗೆ ಜನಸಂದಣಿಯ ನಡುವೆ ಪಂಡಾಲ್ಗಳು ಮತ್ತು ಮನೆಗಳ ಕಡೆಗೆ ಸಾಗುತ್ತಿವೆ.
ಶಂಕರ್ ಜೂನ್ ತಿಂಗಳ ಕೊನೆಯ ವಾರದಿಂದ ಈ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಶೆಡ್ನ ಮಾಲೀಕರು - ಪ್ರಸ್ತುತ ಊರಿನಲ್ಲಿರಲಿಲ್ಲ - ಇಂತಹ ಮೂರು ಇತರ ಶೆಡ್ಗಳನ್ನು ನಡೆಸುತ್ತಾರೆ ಎಂದು ಅವರು ಹೇಳುತ್ತಾರೆ. ಆಗಸ್ಟ್ನ ಕೊನೆಯ ವಾರದಲ್ಲಿ ಭೇಟಿ ನೀಡಿದಾಗ, ಪ್ರತಿ ಶೆಡ್ಡಿನಲ್ಲಿ 2-3 ಕುಶಲಕರ್ಮಿಗಳು ಈ ವರ್ಷದ ಸೆಪ್ಟೆಂಬರ್ನ ಮೊದಲ ವಾರದಲ್ಲಿ ನಡೆಯುವ ಗಣೇಶ ಚತುರ್ಥಿಗಾಗಿ ಮೂರ್ತಿಗಳನ್ನು ಸಿದ್ಧಗೊಳಿಸುವಲ್ಲಿ ನಿರತರಾಗಿದ್ದರು.
ಮತ್ತೊಂದು ತಂಡ—ಶಿಲ್ಪಿಗಳು—ಪ್ರತಿ ವರ್ಷ ಜನವರಿಯಿಂದ ಏಪ್ರಿಲ್ವರೆಗೆ ಧೂಳ್ಪೇಟೆಯ ಶೆಡ್ಡುಗಳಿಗೆ ಬಂದು ಕೆಲಸ ಮುಗಿಸಿ ಹಿಂದಿರುಗುತ್ತಾರೆ ಎಂದು ಶಂಕರ್ ವಿವರಿಸುತ್ತಾರೆ. “ನಮ್ಮ ಶೆಡ್ಡಿನಲ್ಲಿ ಕೋಲ್ಕತ್ತಾದ ಮೂರ್ತಿ ತಯಾರಕರನ್ನು ಕರೆಸುತ್ತೇವೆ” ಎಂದು ಅವರು ಹೇಳುತ್ತಾರೆ. “ಅವರು ಚೀನಿ ಮಿಟ್ಟಿ [ನುಣುಪಾದ ಮಣ್ಣು] ಬಳಸಿ ಮೂರ್ತಿಯನ್ನು ತಯಾರಿಸುತ್ತಾರೆ. ಒಂದು ದೊಡ್ಡ ಮೂರ್ತಿಯನ್ನು ಪೂರ್ಣಗೊಳಿಸಲು ಶಿಲ್ಪಿಗೆ ಸುಮಾರು 25 ದಿನಗಳು ಬೇಕಾಗುತ್ತವೆ.






