“ಮದುಮಗಳ ತಾಯಿ ಮದುಮಗಳಿಗೆ ನನ್ನ ಕೈಯಿಂದಲೇ ಹೆಣೆದ ದೌರಿಯನ್ನು ಉಡುಗೊರೆಯಾಗಿ ಕೊಡುವಂತೆ ತುಂಬಾ ಸ್ಟ್ರಿಕ್ಟ್ ಆಗಿ ನಂಗೆ ಹೇಳಿದ್ದಾರೆ” ಎಂದು ಚಂದ್ರಾವತಿ ದೇವಿ ನಗುತ್ತಾ ಹೇಳುತ್ತಾರೆ. "ನಮಗೆ ದುಬಾರಿ ಉಡುಗೊರೆಗಳನ್ನು ಕೊಡಲು ಸಾಧ್ಯವಿಲ್ಲ, ಆದರೆ ನಮ್ಮ ಸಂಪ್ರದಾಯದಲ್ಲಿ ಇದನ್ನು ನಾವು ಉಡುಗೊರೆಯಾಗಿ ಕೊಡುತ್ತೇವೆ" ಎಂದು ಅವರು ತಮ್ಮ ಸೊಸೆಯ ಮದುವೆಗೆ ತಾವು ಕೊಡಲಿರುವ ಉಡುಗೊರೆಯ ಬಗ್ಗೆ ಹೇಳುತ್ತಾರೆ.
ಬನಿಯಾ ಛಾಪರ್ ಗ್ರಾಮದವರಾದ 45 ವರ್ಷ ಪ್ರಾಯದ ಇವರು ಮೂಂಜ್ ಎಂಬ ಒಣ ಹುಲ್ಲಿನಿಂದ ದೌರಿ ಎಂಬ ಬುಟ್ಟಿಗಳನ್ನು ಹೆಣೆಯುತ್ತಾರೆ. ಕೈಯಿಂದ ತಯಾರಿಸಿದ ಈ ಬುಟ್ಟಿಗಳನ್ನು ವಧುವಿಗೆ ಉಡುಗೊರೆಯಾಗಿ ಕೊಡುತ್ತಾರೆ, ಈ ಪ್ರದೇಶದ ಮದುವೆಗಳಲ್ಲಿ ಇದೊಂದು ಸಂಪ್ರದಾಯ. ರೈತ ಮಹಿಳೆಯಾಗಿರುವ ಚಂದ್ರಾವತಿಯವರು ತಮ್ಮ ಅರ್ಧ ಬಿಘಾ ಜಮೀನಿನಲ್ಲಿ ಕೃಷಿ ಮಾಡುತ್ತಾರೆ, ಬಿಡುವು ಸಿಕ್ಕಾಗ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಾರೆ.
ದೌರಿಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತದೆ. "ನಮ್ಮಲ್ಲಿ ಧಾನ್ಯಗಳು, ಸಿಹಿತಿಂಡಿಗಳು, ಹಿಟ್ಟು ಅಥವಾ ತರಕಾರಿಗಳನ್ನು ತೆಗೆದಿಡಲು ಕವಾಟುಗಳಿಲ್ಲ. ನಾವು ಅವನ್ನು ದೌರಿಯಲ್ಲಿ ಇಡುತ್ತೇವೆ” ಎಂದು ಚಂದ್ರಾವತಿಯವರ 18 ವರ್ಷ ಪ್ರಾಯದ ಮಗಳು ಪುಷ್ಪಾ ಹೇಳುತ್ತಾರೆ.
ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿರುವ ಅವರ ಮನೆಯಲ್ಲಿ ಮೂಂಜ್ ಹುಲ್ಲಿನ ಕಂತೆಗಳನ್ನು ಗೋಡೆಗಳಿಗೆ ಜೋಡಿಸಿ ಇಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಈ ಹುಲ್ಲುಗಳನ್ನು ಸಂಗ್ರಹಿಸಿ ಬೇಸಿಗೆಯ ದಿನಗಳಲ್ಲಿ ಬಿಸಿಲಿನಲ್ಲಿ ಒಣಗಿಸುತ್ತಾರೆ.














