ಹಳೆಯ ಮರದ ತಡಿ, ಹಳೆಯ ಮಗ್ಗ, ಮರದ ಪೋಲೋ ಮ್ಯಾಲೆಟ್, ಹುಲ್ಲಿನ ಚಪ್ಪಲಿಗಳು, ಪ್ರಾಚೀನ ಬೆಳ್ಳಿಯ ಆಭರಣಗಳು, ಕಣ್ಮರೆಯಾಗುತ್ತಿರುವ ಶಿನಾ ಕಾವ್ಯದ ಹಸ್ತಪ್ರತಿ, ಮದುವೆಗಳಲ್ಲಿ ಹೆಂಗಸರು ಆಭರಣವಾಗಿ ಧರಿಸುವ ಬಾಚಣಿಗೆಗಳು, ಹೀಗೆ ಅನೇಕ ದಿನ ಬಳಕೆಯ ಪ್ರಾಚೀನ ವಸ್ತುಗಳನ್ನು ಅಹಮದ್ ಟೆರೂ ಅವರು ತಮ್ಮ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಬಶೀರ್ ಅವರು ಗುರೇಜ್ ಮತ್ತು ದ್ರಾಸ್ನಲ್ಲಿ ಹೆಚ್ಚಾಗಿ ವಾಸಿಸುವ ದಾರ್ಡ್-ಶಿನ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಕಳೆದ ಐದು ವರ್ಷಗಳಿಂದ ಜನರು ತಮಗೆ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಮತ್ತು ದಿನನಿತ್ಯ ಬಳಸುವ ಅನೇಕ ವಸ್ತುಗಳನ್ನು ಸಂಗ್ರಹಿಸಿ ದಾವರ್ನಲ್ಲಿ ಬಶೀರ್ ಅವರು ನಡೆಸುತ್ತಿರುವ ದಾರ್ಡ್ಶಿನ್ ವಸ್ತು ಸಂಗ್ರಹಾಲಯಕ್ಕೆ ತಂದು ಕೊಡುತ್ತಿದ್ದಾರೆ.
“ಜನರು ತಮ್ಮ ಮನೆಗಳಲ್ಲಿ ಇರುವ ಹಳೆಯ ವಸ್ತುಗಳನ್ನು ಬಿಸಾಡುವುದನ್ನು ನಾನು ನೋಡಿದ್ದೇನೆ, ಅವುಗಳಿಂದ ಯಾವುದೇ ಉಪಯೋಗವಿಲ್ಲ ಎಂದುಕೊಂಡಿದ್ದಾರೆ. ಹಳೆಯ ಬಟ್ಟೆಗಳನ್ನು ಸುಡುತ್ತಾರೆ, ಬಳಸದ ಕೃಷಿ ಸಾಧನಗಳನ್ನು ಎಸೆಯುತ್ತಾರೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಹಾಗಾಗಿ, ಹಿಂದೊಮ್ಮೆ ಹಳೆಯದೆಂದು ಎಸೆಯಲ್ಪಟ್ಟ, ಸುಡಲ್ಪಟ್ಟ ವಸ್ತುಗಳು ಈಗ ಇವರ ವಸ್ತುಸಂಗ್ರಹಾಲಯದಲ್ಲಿ ಬೆಚ್ಚಗೆ ಕುಳಿತಿವೆ.
ಸರ್ಕಾರಿ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಇವರು ತಮ್ಮ ವೃತ್ತಿಯು ಜನರ ಇತಿಹಾಸವನ್ನು ಸಂರಕ್ಷಿಸುವ ಈ ವಸ್ತುಸಂಗ್ರಹಾಲಯವನ್ನು ರೂಪಿಸಲು ಸಹಾಯ ಮಾಡಿದೆ ಎಂದು ಬಶೀರ್ ಅಂದುಕೊಂಡಿದ್ದಾರೆ. 44 ವರ್ಷ ಪ್ರಾಯದ ಈ ಸರ್ಕಾರಿ ಉದ್ಯೋಗಿ ಜನರು ತನ್ನನ್ನು ನಂಬುತ್ತಾರೆ ಮತ್ತು ಇದರಿಂದ ವಸ್ತುಸಂಗ್ರಹಾಲಯದ ನಿರ್ವಹಣೆ ತುಂಬಾ ಸುಲಭವಾಗಿದೆ ಎಂದು ಹೇಳುತ್ತಾರೆ. ಕಾಶ್ಮೀರದ ಗುರೇಜ್ ಕಣಿವೆಯಲ್ಲಿ ಚಳಿಗಾಲದ ಹಿಮಪಾತ ವರ್ಷದ ಆರು ತಿಂಗಳು ಜನರಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಆ ಸಂದರ್ಭದಲ್ಲಿ ಆರೋಗ್ಯ ಸೌಲಭ್ಯಗಳು ಸಿಗುವುದೂ ಕಷ್ಟ. ಹಾಗಾಗಿ, ಈ ಸಮಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಬಶೀರ್ ಅವರಂತಹ ಸಮುದಾಯ ಆರೋಗ್ಯ ಕಾರ್ಯಕರ್ತರ ಮೇಲೆ ಜನರು ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.


















