“ಶಿಲ್ ಕಟಾ-ವೋ-ವೋ-ವೋ!”
ಉತ್ತರ ಸೋನಾರ್ಪುರದ ಗರಿಯಾದ ಗಲ್ಲಿಗಳಲ್ಲಿ ಲಾಲ್ಬಾಬು ಮಹತೋ ಅವರ ದನಿ ಜೋರಾಗಿ ಕೇಳುತ್ತಿತ್ತು. ನಡು ಮಧ್ಯಾಹ್ನ, ಅವರ ದನಿಯನ್ನು ಬಿಟ್ಟರೆ ಸಮೀಪದ ಮಾರುಕಟ್ಟೆಯ ಕೆಲಸಕ್ಕೆ ಬಾರದ ಹರಟೆ ಮಾತ್ರ ಕೇಳುತ್ತಿತ್ತು.
“ಶಿಲ್ ಕಟಾ-ವೋ-ವೋ-ವೋ!” ಎಂದು ಮತ್ತೆ ಜೋರಾಗಿ ಕೂಗುತ್ತಾ ಶಿಲ್ ನೋರಾ ಕಲ್ಲಿಗೆ ಉಳಿಯಿಂದ ಕೆತ್ತನೆ ಮಾಡಲು ಗ್ರಾಹಕರನ್ನು ಹುಡುಕುತ್ತಾ ಚುರುಕಾಗಿ ಅವರು ನಡೆಯುತ್ತಿದ್ದರು. ಬಂಗಾಳದಲ್ಲಿ ಶಿಲ್ ಕಟಾವೋ ಎಂದರೆ ರುಬ್ಬುವ ಕಲ್ಲಿಗೆ ಕೆತ್ತನೆ ಮಾಡುವ ಸಾಂಪ್ರದಾಯಿಕ ವೃತ್ತಿ. ಶಿಲ್ ಎಂದರೆ ರುಬ್ಬುವ ಚಪ್ಪಡಿ ಕಲ್ಲು, ನೋರಾ ಎಂದರೆ ಅದರ ಮೇಲೆ ಅರೆಯಲು ಬಳಸುವ ಕೈಯಲ್ಲಿ ಹಿಡಿಯುವ ಇನ್ನೊಂದು ಕಲ್ಲು. ಸಿಲ್ ಬಟ್ಟಾ ಅಥವಾ ತಮಿಳಿನ ಅಮ್ಮಿ ಕಲ್ಲಿನಂತೆ ಶಿಲ್-ನೋರಾವನ್ನು ಮಸಾಲೆಯನ್ನು ಅರೆಯಲು, ಪುಡಿ ಮಾಡಲು ಬಳಸಲಾಗುತ್ತದೆ. ಭಾರತೀಯ ಅಡುಗೆ ಸಂಸ್ಕೃತಿಯ ಕೇಂದ್ರಬಿಂದು ಇದು. ನೋರಾವು ಸ್ಥಿರವಾಗಿ ಶಿಲ್ ಮೇಲೆ ಒತ್ತಡ ಹಾಕಿ ಹೊರಳಿಸಿದಾಗ ಗಿಡಮೂಲಿಕೆಗಳು ಮತ್ತು ಮಸಾಲೆಗಳು ಚೆನ್ನಾಗಿ ಅರೆದು ನಿಜವಾದ ಪರಿಮಳವನ್ನು ಬೀರುತ್ತವೆ ಎಂದು ಭಾರತೀಯ ಅಡುಗೆಯವರು ನಂಬುತ್ತಾರೆ.
““ಮಸಾಲೆಯನ್ನು ನುಣ್ಣಗೆ ಅರೆಯುವುದೇ ಇದರ ಮುಖ್ಯ ಕೆಲಸ. ಎಷ್ಟು ದುಬಾರಿ ಮಿಕ್ಸರ್ ಇದ್ದರೂ ಇದರಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಿಲ್ಲ,” ಎಂದು ಲಾಲ್ಬಾಬು ಈ ಪ್ರಮುಖ ಅಡುಗೆ ಸಾಧನದ ಬಗ್ಗೆ ಹೇಳುತ್ತಾರೆ.
“ಹೊಸಬರು ಶಿಲ್ ಕಟಾವೋ ಕೆಲಸ ಮಾಡಲು ಬರುವುದು ತುಂಬಾ ಕಡಿಮೆ. ನಾವು ಕೊನೆಯ ತಲೆಮಾರಿನವರು,” ಎಂದು ಬಿಹಾರದ ಸಿವಾನ್ ಜಿಲ್ಲೆಯಿಂದ ಬಂಗಾಳಕ್ಕೆ ವಲಸೆ ಬಂದಿರುವ ಲಾಲ್ಬಾಬು ಹೇಳುತ್ತಾರೆ. “ಸುಮಾರು 10 ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಾಗ ಕಿಡ್ಡರ್ಪೋರ್ನಲ್ಲಿ ಮಾತ್ರ ನನ್ನಂತ 250 ಜನರಿದ್ದರು. ಈಗ ಅವರಲ್ಲಿ ಬಹುತೇಕರಿಗೆ ವಯಸ್ಸಾಗಿದೆ. ಇಷ್ಟು ಕಷ್ಟದ ಕೆಲಸ ಮಾಡಲು ಶಕ್ತಿಯಿಲ್ಲದೆ ವೃತ್ತಿಯನ್ನು ನಿಲ್ಲಿಸಿದ್ದಾರೆ,” ಎಂದು ಅವರು ಹೇಳುತ್ತಾರೆ.












