ತ್ರಿಪುರದ ಧರ್ಮನಗರ ಎಂಬ ಚಿಕ್ಕ ಪಟ್ಟಣದ ಹೃದಯಭಾಗದಲ್ಲಿ 'ಬೋರೋ ಕಾಳಿಬಾರಿಯ ದಿಘಿ' ಎಂಬ ಕೆರೆಯಿದೆ. ಇದರ ಮಧ್ಯದಲ್ಲಿ ಬೃಹತ್ ಶಿವನ ಪ್ರತಿಮೆಯಿದ್ದು, ಇದು ಈ ಪಟ್ಟಣದ ಮುಖ್ಯ ಕೇಂದ್ರಬಿಂದು. ನಗರದ ಗದ್ದಲದ ನಡುವೆಯೂ, ಸಂಜೆಯಾಗುತ್ತಿದ್ದಂತೆ ಶಾಂತಿಯನ್ನು ಹುಡುಕುವ ಸ್ಥಳೀಯರು ಮತ್ತು ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವಾಹನಗಳ ಕರ್ಕಶ ಸದ್ದು ಮತ್ತು ಜನರ ಗದ್ದಲದ ನಡುವೆಯೂ, ಆಗಾಗ್ಗೆ ಕೇಳಿಬರುವ ಮಧುರ ಸಂಗೀತ ಜನರನ್ನು ತನ್ಮಯಗೊಳಿಸಿ ತನ್ನತ್ತ ಸೆಳೆಯುತ್ತದೆ.
ಸಂಗೀತ ತೇಲಿ ಬಂದ ದಿಕ್ಕಿನತ್ತ ಸಾಗಿದರೆ ಅರವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು, ಉದ್ದ ಕೊರಳಿನ ತಂತಿ ವಾದ್ಯವೊಂದರಲ್ಲಿ ಜನಪ್ರಿಯ ಜಾನಪದ ಹಾಡುಗಳನ್ನು ನುಡಿಸುತ್ತಿರುವುದನ್ನು ಕಾಣಬಹುದು. ಕಣ್ಣು ಮುಚ್ಚಿ, ಒಂದು ಕೈಯಿಂದ ತಂತಿಗಳನ್ನು ಮೀಟುತ್ತಾ, ಇನ್ನೊಂದು ಕೈಯನ್ನು ಕಿರಿದಾದ ಫಿಂಗರ್ಬೋರ್ಡ್ ಮೇಲೆ ಚಲಿಸುತ್ತಾ ಅವರು ಸಂಗೀತದಲ್ಲಿ ಮಗ್ನರಾಗಿರುತ್ತಾರೆ. ಸುತ್ತ ಜಮಾಯಿಸಿರುವ ಕೆಲವೇ ಕೆಲವು ಕುತೂಹಲಿಗಳಿಗೆ ಆ ವಾದ್ಯದ ಹೆಸರಾಗಲಿ, ಆ ಮಧುರ ರಾಗವಾಗಲಿ, ಅಥವಾ ತ್ರಿಪುರಾದಲ್ಲಿ ಪರಿಶಿಷ್ಟ ಜಾತಿಗಳಡಿ ವರ್ಗೀಕರಿಸಲ್ಪಟ್ಟಿರುವ ಮಾಲಿ ಸಮುದಾಯಕ್ಕೆ ಸೇರಿದ ಈ ಕಲಾವಿದನ ಹೆಸರಾಗಲಿ ಗೊತ್ತಿಲ್ಲ.
ಆದರೆ ಇಲ್ಲಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಉತ್ತರ ತ್ರಿಪುರ ಜಿಲ್ಲೆಯ ಕದಮ್ತಲಾ ಬ್ಲಾಕ್ನ ಸರಲಾ ಗ್ರಾಮದ ಜನರು, ರತೀಶ್ ಮಲಾಕರ್ ಅವರನ್ನು ‘ದೋತಾರಾ ವಾದಕ’ ಎಂದೇ ಗುರುತಿಸುತ್ತಾರೆ.













