ಹೈದರಾಬಾದ್ ನಗರದ ಹಳೆಯ ಭಾಗದಲ್ಲಿ ಬಂದು ನೀವು ಅರಗಿನ (ಲ್ಯಾಕ್ ಕೀಟ ಸ್ರವಿಸುವ ಅರಗು, ರಾಳ) ಬಳೆಯ ಕುರಿತು ವಿಚಾರಿಸಿದರೆ ಅವರು ನಿಮ್ಮನ್ನು ಕಳುಹಿಸವುದು ನಗರ ಲಾಡ್ (ಲ್ಯಾಕ್ ಮಾರ್ಕೆಟ್) ಮಾರುಕಟ್ಟೆಯಲ್ಲಿರುವ ಒಸ್ಮಾನ್ ಕಾ ಕರಿಗಾರ್ ಬಳಿಗೆ. ಈ ಪ್ರಸಿದ್ಧ ಅಂಗಡಿಗೆ ಯಾವ ಬೋರ್ಡೂ ಇಲ್ಲ. ಒಂದು ತುಕ್ಕು ಹಿಡಿದ ರೋಲಿಂಗ್ ಶಟರ್ ಇರುವ ಅಂಗಡಿ ನಿಮ್ಮನ್ನು ಎದುರುಗೊಳ್ಳುತ್ತದೆ. ಮೂರು ಗೋಡೆಗಳಿರುವ ಈ ಅಂಗಡಿಯಲ್ಲಿ ಲ್ಯಾಕ್ ಕುಶಲಕರ್ಮಿಗಳಾದ ಶೇಖ್ ಅಖೀಲ್ ಮತ್ತು ಶೇಖ್ ಹಾಜೀಲ್ ಕುಳಿತಿರುತ್ತಾರೆ. ಮತ್ತೆ ಅವರೆದುರಿಗೊಂದು ಅಷ್ಟೇನೂ ಎತ್ತರವಿಲ್ಲದ ಲೋಹದ ಟೇಬಲ್ ಇರುತ್ತದೆ.
ಈ ಅಣ್ಣ ತಮ್ಮಂದಿರು ಕಳೆದ ಕೆಲವು ದಶಕಗಳಿಂದ ಈ ಕರಕುಶಲ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಮತ್ತು ಒಬ್ಬೊಬ್ಬರು ದಿನಕ್ಕೆ 500 ಬಳೆಗಳ ತನಕ ತಯಾರಿಸಬಲ್ಲರು. ತಯಾರಿಕೆಯ ವಿವಿಧ ಹಂತಗಳಲ್ಲಿರುವ ಹಲವು ಬಳೆಗಳು ಅವರ ಸುತ್ತ ಅಲ್ಲಿ ಬಿದ್ದಿದ್ದವು. “ಗುಲಾಬಿ ಬಣ್ಣದ ಬಳೆ ಇಲ್ಲಿ ಹೆಚ್ಚು ಜನಪ್ರಿಯ” ಎಂದು ಅಖೀಲ್ ಗುಲಾಬಿ ಬಣ್ಣದ ಅರಗಿನ ಗಟ್ಟಿ ತುಂಡೊಂದನ್ನು ಎತ್ತಿಕೊಂಡು ಹೇಳಿದರು. ಗುಲಾಬಿ ಬಣ್ಣದ ಜೊತೆಗೆ ಕಪ್ಪು, ಹೊಂಬಣ್ಣ ಮತ್ತು ನೀಲಿ ಬಣ್ಣದ ಗಾಜನ್ನು ಹುದುಗಿಸಿಟ್ಟ ಬಳೆಗಳು ಸಹ ಇಲ್ಲಿ ಸಾಕಷ್ಟು ಜನಪ್ರಿಯ. ಇವುಗಳೆಲ್ಲವನ್ನೂ ಅಲ್ಲಿ ಒಂದು ಪಾರದರ್ಶಕ ಪ್ಲಾಸ್ಟಿಕ್ ಪೆಟ್ಟಿಗೆೆಯಲ್ಲಿ ಜೋಡಿಸಿಡಲಾಗಿತ್ತು.
ಚಾರ್ಮಿನಾರ್ ಬಳಿಯ ಲಾಡ್ ಬಜಾರಿನ ಕಿರಿದಾದ ಬೀದಿಯಲ್ಲಿರುವ ಅಂಗಡಿ ಹಾಗೂ ವರ್ಕ್ಶಾಪ್ ಹಳೆಯ ಮರ ಮತ್ತು ಹಿತ್ತಾಳೆ ವಾಸನೆಯನ್ನು ಸೂಸುತ್ತಿತ್ತು. ಅಖೀಲ್ ಮತ್ತು ಹಾಜೀಲ್ ಕೆಲಸ ಮಾಡಲು ಪ್ರಾರಂಭಿಸುತ್ತಿದ್ದಂತೆ ಹತ್ತಿರದ ಮಸೀದಿಯ ಆಜಾನ್ ಸದ್ದು ಮತ್ತು ಅಲ್ಲೇ ಪಕ್ಕದಲ್ಲಿ ಆಡುತ್ತಿದ್ದ ಮಕ್ಕಳ ಗದ್ದಲ ಮಂದವಾಗತೊಡಗಿತು. ಮೂವತೈದು ವರ್ಷದ ಆಸುಪಾಸಿನಲ್ಲಿರುವ ಈ ಅಣ್ಣ-ತಮ್ಮ ಇದೊಂದು ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಹೋದವರಲ್ಲ. ಇವರು ಒಮ್ಮೆ ಕೆಲಸದಲ್ಲಿ ತೊಡಗಿದರೆಂದರೆ ಅವರ ತಲ್ಲೀನತೆಗೆ ಯಾವುದೂ ಭಂಗ ತರಲಾರದು.
ಅವರು ಪರಿಗೆ ತಿಳಿಸಿದಂತೆ, ʼಒಸ್ಮಾನ್ʼ ಎನ್ನುವ ಅಂಗಡಿಯ ಹೆಸರು ಅವರ ಸಂಬಂಧಿಕರೊಬ್ಬರು ಹೆಸರು. “ಈ ಅಂಗಡಿ ಅವರದ್ದೇ, ಆದರೆ ಅವರು ಇಲ್ಲಿ ಕೆಲಸ ಮಾಡುವುದಿಲ್ಲ. ನಾನು ಮತ್ತು ನನ್ನ ಸಹೋದರ ಇಬ್ಬರೇ ಇಲ್ಲಿ ಕೆಲಸ ಮಾಡುವುದು” ಎಂದ ಅಖೀಲ್, ಅಂಗಡಿಗೆ ಯಾವುದೇ ಬಾಡಿಗೆ ಕೊಡುತ್ತಿಲ್ಲ ಎಂದೂ ತಿಳಿಸಿದರು.














