ಸಂಜೆ ಸುಮಾರು ಏಳರ ಹೊತ್ತಿಗೆ ಬೆಳ್ಳಿ-ಚಿನ್ನದ ಲೇಸ್ ಮತ್ತು ಗಾಜಿನ ತುಂಡುಗಳಿಂದ ಕೂಡಿದ ಘಾಗ್ರಾವನ್ನು ಹಿಡಿದುಕೊಂಡು ಉದಯ್ಪುರದ ಬಾಗೋರ್ ಕಿ ಹವೇಲಿಯಲ್ಲಿನ ವೇದಿಕೆಯನ್ನೇರುವ ನಿರ್ಮಲಾ ದೇವಿ, ಮಗಳು ತಾರಾ ಹಾಗೂ ಇತರೆ ಸುಮಾರು ಎಂಟು ಮಹಿಳಾ ಸಂಬಂಧಿಕರೊಂದಿಗೆ - ಚರಿ, ಘೂಮರ್, ಭವೈ ಮತ್ತಿತರ ನೃತ್ಯಗಳನ್ನು ಪ್ರಾರಂಭಿಸುತ್ತಾರೆ.
“ಪ್ರತಿ ದಿನವೂ ಅದೇ ಚೈತನ್ಯದಿಂದ ನೃತ್ಯ ಮಾಡುವುದು ಸುಲಭವಲ್ಲ” ಎಂದರಾಕೆ. ಅದರಲ್ಲೂ ವಿಶೇಷವಾಗಿ, ನಿಮ್ಮ ಹಲ್ಲುಗಳ ಮಧ್ಯೆ ಕತ್ತಿಗಳನ್ನು ಅಥವಾ ತಲೆಯ ಮೇಲಿನ ಲೋಹದ ಪಾತ್ರೆಯ ಮೇಲೆ ಉರಿಯುತ್ತಿರುವ ಎಣ್ಣೆಯ ದೀಪವನ್ನು ಹೊತ್ತೊಯ್ಯುವಾಗ, ಗಾಜಿನ ಚೂರುಗಳ ಮೇಲೆ ನೃತ್ಯ ಮಾಡುವಾಗ, ತಲೆಯ ಮೇಲೆ ಮಣ್ಣಿನ ಮಡಕೆಗಳನ್ನು ಸಮತೋಲನಗೊಳಿಸುವಾಗ ಇದು ಕಷ್ಟ ಸಾಧ್ಯ. ಆದರೂ, ನಿರ್ಮಲಾ ಮತ್ತು ಆಕೆಯ ಅತ್ತಿಗೆ ಸೀಮಾ ದೇವಿ ಮತ್ತು ಅತ್ತೆ, ಭಮ್ರಿ ಬಾಯ್ ಅವರನ್ನೊಳಗೊಂಡಂತೆ ಆಕೆಯ ತಂಡದ ಸದಸ್ಯರು ಪ್ರತಿ ದಿನ ಸಂಜೆ ಇದನ್ನು ನಿರ್ವಹಿಸುತ್ತಾರೆ. “ನನ್ನ ಅತ್ತಿಗೆಯು ತಲೆಯ ಮೇಲೆ ಹನ್ನೊಂದು ಪಾತ್ರೆಗಳನ್ನು ಹೊತ್ತೊಯ್ಯುತ್ತಾರೆ. ಇದು ಮುಗಿದಾಗ ತಲೆಯಿಂದ ಪಾದದವರೆಗೂ ಬೆವೆತಿದ್ದರೂ ವೇದಿಕೆಯ ಮೇಲೆ ನಸುನಗುತ್ತಲೇ ಇರುವ ಈಕೆ, ಮುಂದಿನ ನೃತ್ಯಕ್ಕೆ ತಯಾರಾಗಲು ಬಟ್ಟೆ ಬದಲಿಸುವ ಕೋಣೆಗೆ ಹಿಂದಿರುಗುತ್ತಾರೆ.”
ತೇರಾ ತಾಲಿ ಎಂಬ ನೃತ್ಯಗಾರರ ಕಾಮದ್ (ಪರಿಶಿಷ್ಟ ಜಾತಿಯೆಂದು ಪಟ್ಟಿಮಾಡಲಾಗಿದೆ) ಸಮುದಾಯವು ಹೆಚ್ಚು ಹೆಸರುವಾಸಿಯಾಗಿದೆ. ಹವೇಲಿಯಲ್ಲಿನ ಒಂದು ಗಂಟೆಯ ಪ್ರದರ್ಶನದ ಭಾಗವೆನಿಸಿದ ಈ 10-15 ನಿಮಿಷಗಳ ಸರಣಿಯು ಸ್ಥಳೀಯ ಜನರ ನಾಯಕ ಬಾಬಾ ರಾಮ್ದೇವ್ಗೆ ಸಲ್ಲಿಸಿದ ಶ್ರದ್ಧಾಂಜಲಿ. ದಂತಕಥೆಯು ಹೇಳುವಂತೆ, ಆತನು ಶೋಷಿತರಿಗೆ ಸಹಾಯಕ್ಕಾಗಿ, ತನ್ನ ಜೀವನವನ್ನೇ ಮುಡುಪಾಗಿಟ್ಟನು.







