ನವೀನ್ ಕುಮಾರ್ ಟಮ್ಟಾ ಅವರನ್ನು ಭೇಟಿ ಮಾಡಲು ಬರುವವರೆಲ್ಲಾ ಅವರ ಕೆಲಸದ ಪೋಟೋ ಮತ್ತು ವೀಡಿಯೋಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇದೆಲ್ಲಾ ಅವರಿಗೆ ಅಭ್ಯಾಸವಾಗಿ ಹೋಗಿದೆ. ಉತ್ತರಾಖಂಡದ ಅಲ್ಮೋರಾದಲ್ಲಿರುವ ಐವತ್ತರ ಹರೆಯದ ಈ ನುರಿತ ಕುಶಲಕರ್ಮಿ ತಾಮ್ರದ ಕಲಾಕೃತಿಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಒಳ್ಳೆಯ ಡಿಸೈನ್ಗಳಲ್ಲಿ ತಯಾರಿಸಿ ಕೊಡುತ್ತಾರೆ.
ಟಮ್ಟಾ ಅವರು ನೂರಾರು ವರ್ಷಗಳ ಹಿಂದೆ ರಾಜಸ್ಥಾನದಿಂದ ಹಿಮಾಲಯದ ಕುಮಾವೂನ್ ಪ್ರದೇಶಕ್ಕೆ ವಲಸೆ ಬಂದ ತಾಮ್ರ ಕುಶಲಕರ್ಮಿಗಳ ಪರಂಪರೆಗೆ ಸೇರಿದವರು. ಈ ಸಮುದಾಯ ವಲಸೆ ಬಂದ ಆರಂಭದಲ್ಲಿ ಲೋಹಘಾಟ್ನ ಗೋಸ್ನಿ ಗ್ರಾಮದ ಬಳಿ ನೆಲೆಸಿತ್ತು. ಅರಸೊತ್ತಿಗೆಯು ತನ್ನ ರಾಜಧಾನಿಯನ್ನು ಚಂಪಾವತ್ನಿಂದ ಅಲ್ಮೋರಾಗೆ ವರ್ಗಾಯಿಸಿದಾಗ, ಕೆಲವು ಕುಟುಂಬಗಳು ಅಲ್ಲಿಗೆ ಹೋಗಿ ನೆಲೆಸಿದವು.
ತುಂಬಾ ಕಾಲದಿಂದ, ತಾಮ್ರದ ಕೆಲಸವು ಕುಟುಂಬದ ವ್ಯವಹಾರವಾಗಿತ್ತು. “ಎಲ್ಲರೂ ಜೋಕ್ ಹೇಳಿ ನಗುತ್ತಿದ್ದರು, ಮಾತನಾಡುತ್ತಿದ್ದರು. ನಮ್ಮ ನಡುವೆ ಒಂದು ಸ್ಪರ್ಧೆಯೂ ಇತ್ತು. ಆ ಸ್ಪರ್ಧಾತ್ಮಕ ಮನೋಭಾವದಿಂದಾಗಿ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದರು,” ಎಂದು ಕುಶಲಕರ್ಮಿ ಪ್ರದೀಪ್ ಟಮ್ಟಾ ಹೇಳುತ್ತಾರೆ.
ಮಹಿಳೆಯರು ಈ ವೃತ್ತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರು ಸಮೀಪದ ಕಾಡುಗಳಿಗೆ ಹೋಗಿ ಕುಲುಮೆ ಉರಿಸಲು ಬೇಕಾದ ಕಟ್ಟಿಗೆಗಳನ್ನು ತರುತ್ತಾರೆ. ತಯಾರಿಸಿದ ಕಲಾಕೃತಿಗಳಿಗೆ, ವಸ್ತುಗಳಿಗೆ ಪಾಲಿಶ್ ಹಾಕುತ್ತಾರೆ. ಕುಲುಮೆಯ ಫ್ಯಾನನ್ನು ತಿರುಗಿಸುತ್ತಾರೆ, ವೆಲ್ಡಿಂಗ್ ಮಾಡಲು ಬೇಕಾದ ಪುಡಿಯನ್ನು ಸಿದ್ಧಪಡಿಸುತ್ತಾರೆ. ಅನೇಕ ಹೆಂಗಸರು ಅಡುಗೆ ಕೆಲಸದೊಂದಿಗೆ, ಮನೆಗೆಲಸದ ನಡುವೆ, ಡಿಸೈನಿಂಗ್ ಕೆಲಸ ಮಾಡುತ್ತಾರೆ. ಸುತ್ತಿಗೆಯಿಂದ ಹೊಡೆಯುವ ಮೊದಲು ಲೋಹದ ಹಾಳೆಗಳನ್ನು ಬಿಸಿ ಮಾಡುವಂತಹ ಅನೇಕ ಸೂಕ್ಷ್ಮ ಕೆಲಸಗಳನ್ನು ಮಾಡುತ್ತಾರೆ.































