"ಬಾಬರ್ ಭಾರತಕ್ಕೆ ಎರಡು ವಿಷಯಗಳನ್ನು ಪರಿಚಯಿಸಿದ - ಬಾರೂದ್ [ಗನ್ ಪೌಡರ್] ಮತ್ತು ಬಕರ್ ಖಾನಿ" ಎನ್ನುತ್ತಾರೆ ಏಜಾಜ್ ಹಸನ್. ಮೂರನೇ ತಲೆಮಾರಿನ ನಾನ್ - ಬಾಯಿ ಅಥವಾ ರೊಟ್ಟಿ ತಯಾರಕರಾಗಿರುವ ಅವರು ತಂದೂರಿ ಒಲೆಯ ಪಕ್ಕ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಪಾಟ್ನಾ ನಗರದ ಊರುಗಳಲ್ಲಿ ಒಂದಾದ ಲೋಧಿ ಕತ್ರಾದಲ್ಲಿರುವ ತನ್ನ ಮನೆಯ ಪಕ್ಕದಲ್ಲೇ ಅವರು ಈ ತಂದೂರಿ ಒಲೆಯನ್ನು ಸ್ಥಾಪಿಸಿಕೊಂಡಿದ್ದಾರೆ. ಅವರು ಆ ಗಂಟೆಯ ಆಕಾರದಲ್ಲಿರುವ ಒಲೆಯನ್ನು ತಣಿಸುವ ಸಲುವಾಗಿ ಅದಕ್ಕೆ ಜೇಡಿ ಮಣ್ಣು ಮತ್ತು ನೀರಿನ ಮಿಶ್ರಣವನ್ನು ಬಳಿಯುತ್ತಿದ್ದರು.
ಪದರ ಪದರವಾಗಿರುವ, ಗರಿಗರಿಯಾದ ಮತ್ತು ಸಿಹಿಯಾದ ರೊಟ್ಟಿಯಂತಹ ತಿನಿಸೇ ಬಕರ್ ಖಾನಿ. ಇದೊಂದು ಮೊಘಲ್ ತಿನಿಸು. ಈ ಕುರಿತು ಹಲವು ದಂತಕತೆಗಳಿದ್ದು, ಅವುಗಳಲ್ಲಿ ಒಂದನ್ನು ಏಜಾಜ್ ನೆನಪಿಸಿಕೊಂಡರು. ಅವರಿಗೆ ಇದನ್ನು ಅವರ ಅಜ್ಜ, ಉಸ್ತಾದ್ ನಾನ್- ಬಾಯಿ (ನಿಪುಣ ರೊಟ್ಟಿ ತಯಾರಕ) ಹಾಫಿಜ್ ಅಮೀರ್ ಹಸನ್ ಅವರಿಂದ ಕೇಳಿದ ಕಥೆಯನ್ನು ವಿಶೇಷವಾಗಿ ನೆನಪಿಸಿಕೊಂಡರು. "ಬಂಗಾಳ ಮತ್ತು ಪೂರ್ವ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಬಕರ್ ಖಾನಿಯ ವಿವಿಧ ಬಗೆಗಳು ಸಿಗುತ್ತವೆ. ಆದರೆ ಇದೆಲ್ಲದಕ್ಕಿಂತಲೂ ಪಾಟ್ನಾದಲ್ಲಿ ತಯಾರಾಗುವ ಬಕರ್ ಖಾನಿಗೆ ವಿಶೇಷ ಸ್ಥಾನವಿದೆ. ಹಾಗಾಗಿ ಇದನ್ನು ಸಾಮಾನ್ಯವಾಗಿ 'ಶಾಹಿ' (ರಾಜಮನೆತನದ) ಅಥವಾ ಮೊಘಲೈ ಬಾಕರ್ಖಾನಿ ಎಂದು ಕರೆಯಲಾಗುತ್ತದೆ" ಎಂದು ಇಜಾಜ್ ಹೇಳುತ್ತಾರೆ. ಅವರು ತಮ್ಮ ಸಹಾಯಕ ಇಮ್ಟಿಯಾಜ್ ಬೆಳಗಿನ ಚಹಾವನ್ನು ಮತ್ತೆ ಬಿಸಿ ಮಾಡಿ ತರುವುದನ್ನೇ ತಾಳ್ಮೆಯಿಂದ ಕಾಯುತ್ತಾ ನಮ್ಮೊಂದಿಗೆ ಮಾತನಾಡುತ್ತಿದ್ದರು.
ಕಳೆದ ನಾಲ್ಕೈದು ದಶಕಗಳಿಂದ ಸಕ್ಕರೆ ಪಾಕದಲ್ಲಿ ಅದ್ದಿದ ಸಣ್ಣ ಬ್ರೆಡ್ ಮಾದರಿಯ ತಿನಿಸು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸಿದೆ. ಈ ತಿನಿಸಿನ ಹೊರ ಭಾಗ ಬಕರ್ ಖಾನಿಯ ಪದರಗಳ ರೀತಿಯೇ ಕಾಣುತ್ತದೆ. ಆದರೆ ಅವುಗಳ ಬೆಲೆ ಬಕರ್ ಖಾನಿಯ ಬೆಲೆ ಸಣ್ಣ ಭಾಗ ಮಾತ್ರ. ಇಂತಹ ವ್ಯಾಪಾರ ತಂತ್ರವು ಏಜಾಜ್ ಅವರಿಗೆ ಹಿಡಿಸುವುದಿಲ್ಲ. "ಅಬ್ ತೋ ಹರ್ ದೂಸ್ರೀ ರೋಟಿ ಬಕರ್ ಖಾನಿ ಹೈ, ಔರ್ ಹರ್ ದೂಸ್ರಾ ಆದ್ಮಿ ನಾನ್-ಬಾಯಿ. ಪಾಟ್ನಾ ಮೇಂ ಆಪ್ಕೋ 25-30 ರೂಪಾಯೇ ಕೀ ಭೀ ಬಕರ್ ಖಾನಿ ಮಿಲ್ ಜಾಯೇಗೀ, ಮಗರ್ ನಾ ಆಪ್ ಕಾ ದಿಲ್ ಭರೇಗಾ ನಾ ಸಾಲೋಂ ಸಾಲ್ ಕಾಮ್ ಸೀಖ್ನೇ ವಾಲೋಂ ಕಾ ಪೇಟ್" [ಈಗ ಎಲ್ಲ ರೊಟ್ಟಿಗೂ ಬಕರ್ ಖಾನಿ ಎಂದು ಹೆಸರಿಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ನಾನ್ - ಬಾಯಿ ಎಂದು ಎಂದು ಕರೆದುಕೊಳ್ಳುತ್ತಾನೆ. ಪಾಟ್ನಾದಲ್ಲಿ ನಿಮಗೆ 25-30 ರೂಪಾಯಿಗೆಲ್ಲ ಬಕರ್ ಖಾನಿ ಸಿಗಬಹುದು. ಆದರೆ ಅದು ನಿಮಗೆ ತಿಂದ ತೃಪ್ತಿಯನ್ನೂ ಕೊಡುವುದಿಲ್ಲ, ವರ್ಷಗಟ್ಟಲೆ ಈ ಕೆಲಸವನ್ನು ಕಲಿಯುವಲ್ಲಿ ಕಳೆದವರ ಹೊಟ್ಟೆಯನ್ನೂ ತುಂಬಿಸುವುದಿಲ್ಲ]" ಎಂದು ಅವರು ಹೇಳುತ್ತಾರೆ.
ಇಂತಹ ಅನುಕರಣೆಯ ಕೆಲಸ ನಾನ್-ಬಾಯಿಗಳ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವಲ್ಲದೆ ಇನ್ನೇನೂ ಅಲ್ಲ ಎನ್ನುವುದು ಏಜಾಜ್ ಅವರ ಅಭಿಪ್ರಾಯ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಾಲ್ಕು ಜನ ಕೆಲಸ ಮಾಡಿದರೂ, ಒಂದು ತಂದೂರ್ ಒಲೆಯಲ್ಲಿ ಒಂದು ದಿನಕ್ಕೆ 50 ಬಕರ್ ಖಾನಿಗಿಂತ ಹೆಚ್ಚು ತಯಾರಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.




























