ಈ ವರದಿಯು ಪುಲಿಟ್ಜರ್ ಕೇಂದ್ರದ ಬೆಂಬಲದೊಂದಿಗೆ ಪಾರ್ಥ್ ಎಮ್ ಎನ್ ಬರೆಯುತ್ತಿರುವ ಸರಣಿಯ ಒಂದು ಭಾಗ.
ಕೇರು ಧಹಿಫಾಳೆಯವರು ಈಗಾಗಲೇ ದೊಡ್ಡ ಮೊತ್ತದ ಸಾಲದಲ್ಲಿ ಮುಳುಗಿದ್ದಾರೆ. ಹಾಗೆಂದು ಈ ಸಾಲಕ್ಕೆ ಅವರನ್ನು ಇಡೀ ಮೊಹಟೆ ಊರಿನ ಜನರಿಗೆ 2025ರ ಮೇ ತಿಂಗಳಿನಲ್ಲಿ ಊಟ ಹಾಕದಂತೆ ತಡೆಯಲು ಸಾಧ್ಯವಾಗಿಲ್ಲ. ಅವರ ತಗಡಿನ ಛಾವಣಿ ಹೊಂದಿರುವ ಮನೆ ಮುಂದೆ ಅಂದು ಸುಮಾರು 3,000 ಸಾವಿರ ಜನರು ಸೇರಿದ್ದರು. ಬಂದಿದ್ದ ಜನರೇ ಸ್ವಯಂ ಸೇವಕರಾಗಿ ದುಡಿದು ಅಂದಿನ ಸಸ್ಯಾಹಾರಿ ಊಟವನ್ನು ಬಡಿಸಲು ಸಹಾಯ ಮಾಡಿದರು.
ಇದಕ್ಕೆ ತಗುಲಿದ ಖರ್ಚು 1.5 ಲಕ್ಷ.
70 ವರ್ಷದ ದಹಿಫಾಳೆ ಬಳಿ ಅಷ್ಟೆಲ್ಲ ಖರ್ಚು ಮಾಡುವಷ್ಟು ಹಣವಿರಲಿಲ್ಲ. ಅವರು ಇದನ್ನು ಮಾಡುವುದಕ್ಕಾಗಿಖಾಸಗಿ ಬಡ್ಡಿ ವ್ಯವಹಾರದವರಿಂದ ತಿಂಗಳಿಗೆ 3 ಪ್ರತಿಶತ ಅಥವಾ ವರ್ಷಕ್ಕೆ 36 ಪ್ರತಿಶತದಷ್ಟು ಬಡ್ಡಿಗೆ ಸಾಲ ಪಡೆದರು. ಈ ಸಾಲ ಅವರ ಕುತ್ತಿಗೆಯ ಸುತ್ತ ಇದ್ದ ಶಾಲನ್ನು ಇನ್ನಷ್ಟು ಬಿಗಿಗೊಳಿಸುವ ಸಾಧ್ಯತೆಯಿತ್ತು. ಅವರು ಈ ಹಿಂದೆ ಚಳಿಗಾಲದ ಬೆಳೆಯಾಗಿ ಈರುಳ್ಳಿಯನ್ನು ಹಾಕಿದ್ದರು. ಆದರೆ ಬರಗಾಲದ ಕಾರಣ ಅವರ ಬೆಳೆ ಒಣಗಿ ಅದಕ್ಕಾಗಿ ಖರ್ಚು ಮಾಡಿದ್ದ 35,000 ನಷ್ಟವಾಗಿತ್ತು.
ಬದುಕು ನಡೆಸಲು ಒದ್ದಾಡುತ್ತಿದ್ದರೂ ದಹಿಫಾಳೆ ಮನಸ್ಸಿನಲ್ಲಿ ಸಂತರ್ಪಣೆ ನಡೆಸುವ ಕುರಿತು ಎರಡನೇ ಯೋಚನೆ ಮೂಡಲೇ ಇಲ್ಲ. “ಒಂದು ವೇಳೆ ನಾನು ಇದನ್ನು ಮಾಡದೆ ಹೋಗಿದ್ದರೆ ನನಗೆ ದೇವಿಯ ಆಶೀರ್ವಾದ ಸಿಗುತ್ತಿರಲಿಲ್ಲ. ಅವಳು ನನ್ನ ಆಸೆಗಳನ್ನು ಈಡೇರಿಸುತ್ತಿರಲಿಲ್ಲ” ಎಂದು ಅವರು ಹೇಳುತ್ತಾರೆ.
ಮೊಹಾಟೆ ಗ್ರಾಮವಿರುವುದು ಅಹಿಲ್ಯಾನಗರ (ಹಿಂದಿನ ಅಹಮದ್ನಗರ) ಜಿಲ್ಲೆಯ ಪಾಥರ್ಡಿ ತಾಲೂಕಿನಲ್ಲಿ. ದಹಿಫಾಳೆ ಅವರ ಮನೆಯು ಪ್ರಸಿದ್ಧ ಮೊಹಟಾ ದೇವಿ ದೇವಸ್ಥಾನದಿಂದ ಇಳಿಯುವ ತಿರುವು ರಸ್ತೆಯಲ್ಲಿದೆ. ಈ ದೇವಾಲಯವು ಭವ್ಯವಾದ ನಾಲ್ಕು ಅಂತಸ್ತಿನ ರಚನೆಯಾಗಿದ್ದು, ಇದನ್ನು 2009ರಿಂದ 2013ರ ನಡುವೆ ಸುಮಾರು ₹20 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ವಾರ್ಷಿಕ 25 ಲಕ್ಷ ಭಕ್ತರನ್ನು ಆಕರ್ಷಿಸುವ ಈ ದೇವಸ್ಥಾನವು ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯ ಹಿಂದೂ ಯಾತ್ರಾಸ್ಥಳಗಳಲ್ಲಿ ಒಂದು.













