ತಮ್ಮ ಕನ್ನಡಕದ ಮೂಲಕ ಇಣುಕುತ್ತ, ತಮ್ಮಿಗಮಲ್ ಕಾಸಿಮಿಯಾ ಒಂದು ಸಣ್ಣ ವೃತ್ತಾಕಾರದ ಕನ್ನಡಿಯನ್ನು ಬಟ್ಟೆಯ ತುಂಡಿಗೆ ಸೇರಿಸುತ್ತಾರೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಿಟ್ಟಿಲಿಂಗಿ ಕಣಿವೆಯಲ್ಲಿನ ಎರಡು ಚಿಕ್ಕ ಲಂಬಾಡಿ ಹಳ್ಳಿಗಳಲ್ಲಿ ಒಂದೆನಿಸಿದ ಅಕ್ಕರೆ ಕಾಟ್ಟು ತಾಂಡಾದಲ್ಲಿರುವ ತಮ್ಮ ಮನೆಯಲ್ಲಿ ಅವರು, “ಕನ್ನಡಿಯನ್ನು ಜಾರಿಹೋಗದಂತೆ ಕೂಡಿಸಬೇಕಿದ್ದು, ಈ ಸಾಂಗ್ಲಿ ಹೊಲಿಗೆಯು ಅತ್ಯಂತ ಕಷ್ಟಕರವಾದುದು.” ಎಂಬುದಾಗಿ ನನಗೆ ತಿಳಿಸಿದರು.
60 ವರ್ಷದ ತಮ್ಮಿಗಮಲ್ ಅಥವ ʼʼಗಮ್ಮಿʼ 12 ವರ್ಷಗಳಿಂದಲೂ ಮತ್ತೊಂದು ಗಂಭೀರ ರೂಪದ ಪತನವನ್ನು ತಡೆಯುವಲ್ಲಿ ಸಹಾಯಮಾಡಿದ್ದಾರೆ. ಗೆಳತಿ ಆರ್. ನೀಲ ಅವರೊಂದಿಗೆ, ತಮ್ಮ ಸಮುದಾಯದ ಘಾಟರ್ ಎಂಬ ಲಂಬಾಣಿ ಕಸೂತಿಯು ಸಾಮೂಹಿಕ ನೆನಪಿನಿಂದ ಮರೆಯಾಗುವುದನ್ನು ತಪ್ಪಿಸಲು ಯುವತಿಯರಿಗೆ ಅದನ್ನು ಕಲಿಸುತ್ತಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ, ಕಸೂತಿಯಿಂದ ದೊರೆಯುವ ಸ್ಥಿರವಾದ ಹೆಚ್ಚುವರಿ ಆದಾಯವು ಮಹಿಳೆಯರ ವಲಸೆಯ ಅಗತ್ಯವನ್ನು ಕಡಿಮೆಗೊಳಿಸಿದೆ.
ಸಾಮಾನ್ಯವಾಗಿ ಲಂಬಾಣಿ ಮಹಿಳೆಯರು ಸಿಟ್ಟಿಲಿಂಗಿಯಿಂದ ದಕ್ಷಿಣಕ್ಕೆ 200 ಕಿಲೋಮೀಟರ್ ದೂರದಲ್ಲಿನ ತಿರುಪ್ಪೂರಿನ ಬಟ್ಟೆ ಗಿರಣಿಗಳಿಗೆ ಅಥವಾ ನಿರ್ಮಾಣ ಸ್ಥಳಗಳಿಗೆ ವಲಸೆ ಹೋಗುತ್ತಾರೆ. ಸಮುದಾಯದಲ್ಲಿನ ಪುರುಷರು ಬಹುತೇಕವಾಗಿ ನಿರ್ಮಾಣ ಮತ್ತು ಮರ ಕಡಿಯುವ ಕೆಲಸಕ್ಕಾಗಿ ಕೇರಳದಲ್ಲಿ ಉದ್ಯೋಗವನ್ನು ಹುಡುಕುತ್ತಾರೆ. ವಲಸೆ ಕಾರ್ಮಿಕ ಪುರುಷರು ಮತ್ತು ಮಹಿಳೆಯರು ತಿಂಗಳಿಗೆ ಸರಾಸರಿ ರೂ. 7,000ದಿಂದ ರೂ. 15,000ದವರೆಗೆ ಗಳಿಸುತ್ತಾರೆ.
ತಮಿಳುನಾಡಿನಲ್ಲಿ, ಲಂಬಾಣಿಗಳು (ರಾಜ್ಯದಲ್ಲಿ ಹಿಂದುಳಿದ ಜಾತಿ ಎಂದು ಪಟ್ಟಿಮಾಡಿರುವ) ಮುಖ್ಯವಾಗಿ ಧರ್ಮಪುರಿ ಮತ್ತು ತಿರುವಣ್ಣಾಮಲೈ ಜಿಲ್ಲೆಗಳ ಹಳ್ಳಿಗಳಲ್ಲಿ ವಾಸಿಸುತ್ತಾರೆ. ಸಿಟ್ಟಿಲಿಂಗಿಯಲ್ಲಿ 924 ಲಂಬಾಡಿಗಳಿದ್ದಾರೆ (ಇತರ ರಾಜ್ಯಗಳಲ್ಲಿ ಇವರನ್ನು ಬಂಜಾರರು ಎಂದೂ ಕರೆಯುತ್ತಾರೆ) ಎಂಬುದಾಗಿ ಗ್ರಾಮ ಪಂಚಾಯತ್ ಅಧಿಕಾರಿಯು ತಿಳಿಸುತ್ತಾರೆ. ಸಿಟ್ಟಿಲಿಂಗಿಯಲ್ಲಿನ ಹೆಚ್ಚಿನ ಲಂಬಾಡಿಗಳು ಒಂದು ಅಥವಾ ಎರಡು ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ಅವರ ಜೀವನಾಧಾರ ಕೃಷಿಯು ಮಳೆಯನ್ನು ಅವಲಂಬಿಸಿದೆ. ಕಳೆದ 30 ವರ್ಷಗಳಲ್ಲಿ, ಕಬ್ಬು ಮತ್ತು ಭತ್ತದಂತಹ ಹೆಚ್ಚು ನೀರಿನ ಅವಶ್ಯಕತೆಯಿರುವ ವಾಣಿಜ್ಯ ಬೆಳೆಗಳ ಕಡೆಗೆ ಕೃಷಿಯು ಸ್ಥಾನಪಲ್ಲಟಗೊಳ್ಳುತ್ತಿದ್ದು, ಇದರ ಜೊತೆಗೆ, ಅಸಮರ್ಪಕ ಮಳೆಯಿಂದಾಗಿ ಹಣದ ಅಗತ್ಯವು ಹೆಚ್ಚಾಗಿದೆ, ಇದು 15 ದಿನಗಳಿಂದ ಒಂದು ವರ್ಷದವರೆಗಿನ ವಲಸೆಯನ್ನು ಅನಿವಾರ್ಯಗೊಳಿಸಿದೆ.
“ಇಲ್ಲಿ ವಲಸೆಯು ಜೀವನದ ವಾಸ್ತವಾಂಶ. ಆದಾಗ್ಯೂ, ಕನಿಷ್ಠ ಪಕ್ಷ, ಘಾಟರ್ನಿಂದ ಹಣವನ್ನು ಸಂಪಾದಿಸುವ ಮಹಿಳೆಯರ ಮನೆಗಳಲ್ಲಿಯಾದರೂ aದು ನಿಂತಿದೆ” ಎನ್ನುತ್ತಾರೆ 35 ವರ್ಷದ ಥೈಕುಲಂ.











