ದನಾಮತಿಯವರಿಗೆ ಬರುವ ಪಿಂಚಣಿಯಲ್ಲಿ ಹೆಚ್ಚೂ ಕಡಿಮೆ ಅರ್ಧ ಹಣ ಬೆಲ್ಲ ಮತ್ತು ತಂಬಾಕುಗಳಿಂದ ತಯಾರಿಸಲಾಗಿರುವ ಟೂತ್ಪೇಸ್ಟ್ಗೆ ಖರ್ಚಾಗುತ್ತದೆ,
“ನಂಗೆ 1,000 ರುಪಾಯಿ ಪಿಂಚಣಿ ಬರುತ್ತದೆ. ನನಗೆ ಊಟ ಹಾಕುವ ನನ್ನ ತಮ್ಮನ ಸೊಸೆಗೆ ಅದರಲ್ಲಿ 500 ರುಪಾಯಿ ಕೊಡುತ್ತೇನೆ. ಉಳಿದ ಹಣದಲ್ಲಿ ಉಪ್ಪು, ಮೆಣಸಿನಕಾಯಿ, ಸಾಬೂನು, ಮೈಗೆ ತಿಕ್ಕುವ ಎಣ್ಣೆ ಮತ್ತು ಗುಢಾಖು (ಟೂತ್ಪೇಸ್ಟ್) ತರುತ್ತೇನೆ,” ಎಂದು ಅವರು ಹೇಳುತ್ತಾರೆ.
ಇರುವುದೇ ಒಂದೆರಡು ಹಲ್ಲುಗಳು, ಅವುಗಳನ್ನು ತೊಳೆಯಲು ಇಷ್ಟು ಖರ್ಚು ಮಾಡಿ ಟೂತ್ಪೇಸ್ಟ್ ತರಬೇಕೇ ಎಂದು ವರದಿಗಾರರು ಕಿಚಾಯಿಸಿದಾಗ, ಅವರು ಮೆಲ್ಲಗೆ ನಗುತ್ತಾ ಹೌದೌದು ಎಂದರು. “ಅದರಲ್ಲಿ ಉಜ್ಜದಿದ್ದರೆ ನಂಗೆ ನೆಮ್ಮದಿಯಾಗುವುದಿಲ್ಲ, ನಿಮಗೆ ಗುಟ್ಕಾ ಜಗಿಯುವ ಚಟ ಇದ್ದಂತೆ, ನಂಗೆ ಇದೊಂದು ಚಟ,” ಎಂದರು ಅವರು.
ದನಾಮತಿಯವರದ್ದು ಹೆಂಚು ಹಾಕಲಾಗಿರುವ ಮಣ್ಣಿನ ಮನೆ, ಒಂದು ಕೋಣೆಯ ಆ ಮನೆಯೊಳಗೆ ಹೋಗಲು ಎಲ್ಲರೂ ತಲೆ ಬಾಗಬೇಕು. ರಾಗಿ ಬೀಸುವ ಕಲ್ಲು, ಟಾರ್ಚ್, ಮಣ್ಣಿನ ಚೂಲ್ಹಾ (ಓಲೆ) ಮತ್ತು ಬಟ್ಟೆ ಹಾಕುವ ಬಿದಿರಿನ ಬುಟ್ಟಿ ಬಿಟ್ಟರೆ ಅಲ್ಲಿ ಹೆಚ್ಚೇನೂ ಇರಲಿಲ್ಲ. ಮಣ್ಣಿನ ನೆಲದ ಮೇಲೇ ಈ ಅಜ್ಜಿ ಮಲಗುತ್ತಾರೆ.
ಹಿಟ್ಟು ರುಬ್ಬುತ್ತಾ ಮಾತುಕತೆ ಆರಂಭ ಮಾಡಿದರು. ಒಡಿಶಾದ ಕಾಲಾಹಂಡಿಯಲ್ಲಿರುವ ದೇಶದ ಅತ್ಯಂತ ಬಡ ಪ್ರದೇಶದಲ್ಲಿ ಬೆಳೆದ ಇವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕುಹಾಕಿದರು.












