ಸಿ.ಸುಬ್ಬುಲಕ್ಷ್ಮಿಯವರು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಆರು ಪ್ಲಾಸ್ಟಿಕ್ ನೀರಿನ ಬಿಂದಿಗಗಳಲ್ಲಿ ನೀರು ಖರೀದಿಸಿ ತುಂಬಿಸಿಕೊಂಡು ತನ್ನ ಪುಟ್ಟ ತಳ್ಳುಗಾಡಿಯಲ್ಲಿ ಇಟ್ಟುಕೊಂಡು ತರುತ್ತಿದ್ದರು. ರಸ್ತೆಯುದ್ದಕ್ಕೂ ಅವರಿಗೆ ನೀರಿನ ಸಂಕಷ್ಟ, ನೀರು ಎತ್ತೊಯ್ಯುವ ಭಾರದ ನೋವು ಇವುಗಳೇ ಕಾಡುತ್ತಿದ್ದವು. ಚುನಾವಣೆ ಮತ್ತು ಮತದಾನದ ಯೋಚನೆಗೆ ಅವರ ಮನಸ್ಸಿನಲ್ಲಿ ಯಾವಾಗಲೂ ಕೊನೆಯ ಸ್ಥಾನ. ಒಬ್ಬ ಕೃಷಿ ಕಾರ್ಮಿಕರಾದ ಅವರು, ಆ ಬಿಂದಿಗೆಗಳನ್ನೆಲ್ಲ ತಾನೇ ಹೊತ್ತೊಯ್ಯುವ ಅನಿವಾರ್ಯ ಸಹ ಇದೆ. “ನಾವು ಖಂಡಿತವಾಗಿಯೂ ಗೊಂದಲದಲ್ಲಿದ್ದೇವೆ" ಎಂದು ಕುಮಾರೆಡ್ಡಯ್ಯಪುರ ಗ್ರಾಮದ ಈ ನಿವಾಸಿ ಹೇಳುತ್ತಾರೆ.
48 ವರ್ಷದ ಸುಬ್ಬುಲಕ್ಷ್ಮಿಯವರು ಮತದಾನದ ಹೊರತಾಗಿ ಇತರ ಮುಖ್ಯ ವಿಷಯಗಳ ಮೇಲೆ ಗಮನಹರಿಸುವುದಕ್ಕೆ ಉತ್ತಮ ಕಾರಣವನ್ನು ಕೊಡುತ್ತಾರೆ, ಅವರ ಗ್ರಾಮವು ತೂತುಕುಡಿ ಲೋಕಸಭಾ ಕ್ಷೇತ್ರದಲ್ಲಿದೆ - ಅದು ತಮಿಳುನಾಡಿನಾದ್ಯಂತ ಅತ್ಯಂತ ಉನ್ನತ ಮಟ್ಟದ ಸ್ಪರ್ಧೆಗಳಿಗೆ ಸಾಕ್ಷಿಯಾಗಿದೆ. ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷದ ಎಂ ಕನಿಮೊಳಿ - ದಿವಂಗತ ಮತ್ತು ಖ್ಯಾತ, ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಪುತ್ರಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷ ತಮಿಳಿಸೈ ಸೌಂದರರಾಜನ್ ವಿರುದ್ಧ ಕಣಕ್ಕಿಳಿದಿದ್ದಾರೆ. 2014 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಎಐಎಡಿಎಂಕೆಯ ಜಯಸಿಂಗ್ ತ್ಯಾಗರಾಜ್ ಅವರು ಡಿಎಂಕೆ ಪ್ರತಿಸ್ಪರ್ಧಿ ಜೆಗನ್ ಪಿ ಅವರನ್ನು ಸೋಲಿಸಿದ್ದರು.
ಸುಮಾರು 13 ಲಕ್ಷಕ್ಕೂ ಹೆಚ್ಚು ಮತದಾರರಿರುವ ಈ ಕ್ಷೇತ್ರಕ್ಕೆ ಗಮನಾರ್ಹ ಅಂಶ ನೀಡಿದ ಇನ್ನೊಂದು ವಿಷಯವೆಂದರೆ, ಕಳೆದ ವರ್ಷ ತೂತುಕುಡಿ ಪಟ್ಟಣವನ್ನು ಬೆಚ್ಚಿಬೀಳಿಸಿದ ಹಿಂಸಾತ್ಮಕ ದುರಂತ. ಇದು ಕೇವಲ 24 ಕಿಲೋಮೀಟರ್ ದೂರದಲ್ಲಿರುವ ಕುಮಾರೆಡ್ಡಯ್ಯಪುರದ ಅನೇಕರನ್ನು ಬಾಧಿಸಿತು.
ಫೆಬ್ರವರಿ 12, 2018 ರಂದು, ಈ ಗ್ರಾಮದ ಸುಮಾರು 300 ಜನರು ತೂತುಕುಡಿ ಟೌನ್ ಸೆಂಟರ್ನಲ್ಲಿ ಸ್ಟೆರ್ಲೈಟ್ ತಾಮ್ರದ ಸ್ಥಾವರದ (ವೇದಾಂತ ಲಿಮಿಟೆಡ್ನ ವ್ಯವಹಾರ ಘಟಕ) ವಿಸ್ತರಣೆ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಅನುಮತಿ ನೀಡಿದ ಸಮಯದ ನಂತರ ಸ್ಥಳದಿಂದ ಹೊರಬರಲು ನಿರಾಕರಿಸಿದರು ಮತ್ತು ಅವರನ್ನು ಅಂತಿಮವಾಗಿ ಬಂಧಿಸಲಾಯಿತು. ಆ ಬಂಧನವು ಮಾರ್ಚ್ 24, 2018 ರಂದು ತೂತುಕುಡಿ ಪಟ್ಟಣದ ಬೀದಿಗಳಲ್ಲಿ ಸುಮಾರು 2 ಲಕ್ಷ ಜನರು ಪ್ರವಾಹವನ್ನೆ ಅಲ್ಲಿಗೆ ಬರಮಾಡಿಕೊಂಡಿತು. ಅನೇಕ ಉದ್ಯೋಗೀಗಳು, ಕಾರ್ಮಿಕರು ಮತ್ತು ಜನರು ಸ್ಟೆರ್ಲೈಟ್ನ ಹೊಸ ತಾಮ್ರ ಸ್ಮೆಲ್ಟರ್ ಸಂಕೀರ್ಣದ ನಿರ್ಮಾಣವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಅಸ್ತಿತ್ವದಲ್ಲಿರುವ ಸ್ಟೆರ್ಲೈಟ್ ಸ್ಥಾವರವು ಅವರ ನೀರು ಮತ್ತು ಪರಿಸರವನ್ನು ವಿಷಪೂರಿತಗೊಳಿಸಿದೆ ಮತ್ತು ಅವರ ಜೀವನೋಪಾಯವನ್ನು ನಾಶಪಡಿಸಿದೆ ಎಂದು ಅವರು ಹೇಳಿದರು.







