ಅದು 2026ರ ಮೇ ತಿಂಗಳ ಒಂದು ಭಾನುವಾರ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್ಬಾರಿಯ ಮತುವಾ ಸಮುದಾಯಕ್ಕೆ ಸೇರಿದ ದೇವಸ್ಥಾನದ ಬಳಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದರೆ ಅಲ್ಲಿದ್ದ ಹೆಚ್ಚಿನವರು ದೇವರಿಗೆ ಕೈ ಮುಗಿಯಲೆಂದು ಅಲ್ಲಿ ಸೇರಿರಲಿಲ್ಲ. ಬೇಸಗೆ ಕಾಲದ ಉರಿಬಿಸಿಲಿನಲ್ಲಿ ಉದ್ದನೆಯ ಸರತಿಯಲ್ಲಿ ಕಾಯುತ್ತಿದ್ದ ಅವರೆಲ್ಲ ತಮ್ಮ ಪೌರತ್ವ ಸಾಬೀತುಪಡಿಸಬಹುದಾದ ದಾಖಲೆಯೊಂದು ಸಿಗಬಹುದೆನ್ನುವ ನಿರೀಕ್ಷೆಯಲ್ಲಿದ್ದರು.
ಈ ಬಾರಿ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಸಮಯದಲ್ಲಿ 90 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಯಿತು. ಹೀಗೆ ಹೆಸರು ಕೈಬಿಡಲಾದ ಜನರಲ್ಲಿ ಇವರೂ ಸೇರಿದ್ದರು. 2026ರ ವಿಧಾನಸಭಾ ಚುನಾವಣೆಯಲ್ಲೂ ಇವರಿಗೆ ಮತ ಚಲಾಯಿಸುವ ಹಕ್ಕು ಸಿಕ್ಕಿರಲಿಲ್ಲ.
ಮತುವಾ ಜನರ ಪ್ರಾಬಲ್ಯವಿರುವ ಇಲ್ಲಿನ 15 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಜನರ ಹೆಸರುಗಳನ್ನು ದೊಡ್ಡ ಮಟ್ಟದಲ್ಲಿ ತೆಗೆದುಹಾಕಲಾಗಿದೆ.
ಠಾಕೂರ್ಬಾರಿಯ ಸರತಿಯಲ್ಲಿ ನಿಂತಿದ್ದವರಲ್ಲಿ ಲಲಿತಾ ಧಾಲಿ ಕೂಡ ಒಬ್ಬರಾಗಿದ್ದರು. ಅವರು ತಮ್ಮ 'ಹಿಂದೂ ಕಾರ್ಡ್' ಪಡೆಯಲು ಗಂಡ ಕಾರ್ತಿಕ್ ಅವರೊಂದಿಗೆ ಸ್ಕೂಟಿಯಲ್ಲಿ ಸುಮಾರು 30 ಕಿಲೋಮೀಟರ್ ಪ್ರಯಾಣಿಸಿ ಕಬಿಲಾಶ್ಪುರದಿಂದ ಇಲ್ಲಿಗೆ ಬಂದಿದ್ದರು. 43 ವರ್ಷದ ಲಲಿತಾ ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಬಂದಿರಲಿಲ್ಲ, ಆದರೆ ಕಾರ್ತಿಕ್ ಅವರ ಹೆಸರು ಸೇರ್ಪಡೆಯಾಗಿತ್ತು.
1950ರ ದಶಕದಲ್ಲಿ ಭಾರತಕ್ಕೆ ಬಂದಿದ್ದ ಲಲಿತಾ ಅವರ ಅಜ್ಜ ಮತ್ತು ತಂದೆ 1984ರಲ್ಲಿ ಬಾಂಗ್ಲಾದೇಶಕ್ಕೆ ಹಿಂತಿರುಗಿದ್ದರು. ಕೆಲವೇ ವರ್ಷಗಳಲ್ಲಿ ಅವರು ಮತ್ತೆ ಭಾರತಕ್ಕೆ ಬಂದರು. "ಅವರ ಅಪ್ಪ ಆಚೆ ಈಚೆ ಓಡಾಡಿಕೊಂಡಿದ್ದರು. “ಓರ್ ಬಾಬಾ ಏಪಾರ್ ಓಪಾರ್ ಕೊರ್ತೋ. ಕೇ ಜಾನೇ ಕೋನ್ ಪಾರೆ ಜೊನೋಮ್ಚೇ [ಅವಳ ಯಾವ ಕಡೆ ಹುಟ್ಟಿದರು ಎನ್ನುವುದು ಯಾರಿಗೂ ಗೊತ್ತಿಲ್ಲ]" ಎನ್ನುತ್ತಾರೆ 53 ವರ್ಷದ ಕಾರ್ತಿಕ್.
ಮತುವಾ ಸಮುದಾಯವು 19ನೇ ಶತಮಾನದ ಕೊನೆಯಲ್ಲಿ ಬ್ರಾಹ್ಮಣಶಾಹಿ ಪದ್ಧತಿಯನ್ನು ವಿರೋಧಿಸಿ ರೂಪುಗೊಂಡ ಒಂದು ಸಾಮಾಜಿಕ-ಧಾರ್ಮಿಕ ಪಂಥ. ನಾಮ ಶೂದ್ರರನ್ನು ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ. ಅವಿಭಜಿತ ಬಂಗಾಳದ ಪೂರ್ವ ಭಾಗದಲ್ಲಿ ಹರಿಚಂದ್ ಠಾಕೂರ್ ಅವರು ಕೆಳಜಾತಿಯ ಜನರನ್ನು, ಮುಖ್ಯವಾಗಿ ನಾಮಶೂದ್ರ ಜಾತಿಯ ಜನರನ್ನು ಸಂಘಟಿಸುವುದರೊಂದಿಗೆ ಈ ಸಮುದಾಯ ಹುಟ್ಟಿಕೊಂಡಿತು. “ದೇಶ ವಿಭಜನೆಯ ನಂತರ ಪೂರ್ವ ಪಾಕಿಸ್ತಾನ/ಈಗಿನ ಬಾಂಗ್ಲಾದೇಶದಲ್ಲಿ ನಾಮಶೂದ್ರರು ತೀವ್ರ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿದ್ದರು. ಇದರಿಂದಾಗಿ ತಮ್ಮ ಜೀವ ಉಳಿಸಿಕೊಳ್ಳಲು ಅನೇಕ ಮತುವಾ ಜನರು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಂಕಷ್ಟದ ಸ್ಥಿತಿಯಲ್ಲಿ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದರು” ಎಂದು ಪಶ್ಚಿಮ ಬಂಗಾಳದ ಜಾತಿ ರಾಜಕೀಯದ ಕುರಿತು ಅಧ್ಯಯನ ನಡೆಸಿರುವ ಬ್ರಿಟನ್ನ ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕ ಅಯಾನ್ ಗುಹಾ ಹೇಳುತ್ತಾರೆ.












