ಸಂಜೆಯಾಗಿತ್ತು! ದುರ್ಗಾ ಮತ್ತು ನಾರಾಯಣಸ್ವಾಮಿ ‘ಗಂಗಮ್ಮ ನೀರಿನಾಗ ಜಡೆ ಹೆಣಿತಾ ಅವ್ಳೆʼ ನಾಟಕ ಮುಗಿಸಿ ತೆರೆಯೆಳೆದರು. ಅದು ನೆಲ ಮತ್ತು ನೀರಿನ ಸಾಂವಿಧಾನಿಕ ಹಕ್ಕಿನ ಬಗ್ಗೆ ಕೋಟಿಗಾನ ಹಳ್ಳಿ ರಾಮಯ್ಯನವರು ಬರೆದಿರುವ ನಾಟಕ. ಅಸ್ಪೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸಲು ಈ ನಾಟಕವನ್ನು ರಾಜ್ಯದಾದ್ಯಂತ ಆಡಿ ತೋರಿಸಲಾಗುತ್ತದೆ.
ನಾಟಕದ ಕೊನೆಯ ಹಾಡು ಮುಗಿಸಿದಂತೆ, ನಾಟಕ ನಡೆಯುತ್ತಿದ್ದ ಬೀದಿ ಬದಿಯ ವೇದಿಕೆಯ ಮೇಲೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ತಂದಿಟ್ಟರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ವಿದ್ವಾಂಸರು, ಸಮಾಜ ಸುಧಾರಕರು ಮತ್ತು ಸಮಾನತೆಯ ಪ್ರತಿಪಾದಕರು. ದಲಿತರ ಹಕ್ಕುಗಳಿಗಾಗಿ ಹೋರಾಡಿದವರು.
ಜನರು ಅಷ್ಟೂ ಹೊತ್ತು ಎವೆಯಿಕ್ಕದೆ ನಾಟಕ ನೋಡಿದರು. ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಅಂಬೇಡ್ಕರ್ ಅವರ ಪೋಟೋವನ್ನು ತಂದಾಗ ಕರ್ನಾಟಕದ ಆ ಸಣ್ಣ ಹಳ್ಳಿಯ ವಾತಾವರಣವೇ ಬದಲಾಯಿತು.
“ಈ ಫೋಟೋವನ್ನು ಹೀಗೆ ತಂದಿಟ್ಟರೆ, ಜನರು ನಮ್ಮ ಜಾತಿ ಯಾವುದು ಎಂದು ಕೇಳುತ್ತಾರೆ. ನಮಗೆ ನೀರೂ ಕೊಡುವುದಿಲ್ಲ. ಅವರ ಮನೆಗೆ ಹೋದರೆ, ಜಗಳಿಯಲ್ಲಿ ಕೂರಿಸುತ್ತಾರೆ. ಕೆಲವು ಊರುಗಳಲ್ಲಂತೂ ನಾಟಕ ಆಯೋಜಿಸಿದವರು ನಮ್ಮ ಶೋವನ್ನೇ ಕ್ಯಾನ್ಸಲ್ ಮಾಡುತ್ತಾರೆ,” ಎಂದು ನಾರಾಯಣಸ್ವಾಮಿ ಹೇಳಿದರು.
31 ವರ್ಷ ಪ್ರಾಯದ ದುರ್ಗಾ ಅವರ ಬಳಿ ಜನರು ಅವರ ಪ್ರಾಯ ಎಷ್ಟು, ಮದುವೆ ಆಗಿದ್ಯಾ..ಎಂಬೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ. “ಈ ರೀತಿ ನಾಟಕ ಮಾಡಲು ನಿನ್ನ ಅಪ್ಪ-ಅಮ್ಮ, ಮನೆಯವರು ಬಿಡುತ್ತಾರಾ?” ಎಂದು ಕೇಳುತ್ತಾರೆ.



























