ನನ್ನೊಂದಿಗೆ ಉದಾರಪೂರ್ವಕವಾಗಿ ಸಮಯವನ್ನು ಕಳೆದ ತಮಿಳುನಾಡಿನ ತೃತೀಯ ಲಿಂಗಿ ಸಮುದಾಯದ ಸದಸ್ಯರು ತಮ್ಮನ್ನು ʼಅರವಣಿʼಗಳೆಂದು ವಿವರಿಸಿಕೊಂಡರು. ಇವರ ಸಮುದಾಯದಲ್ಲಿನ ಇತರೆ ಅನೇಕರು ಈ ಪದವನ್ನು ತಿರಸ್ಕರಿಸಿ, ತಮ್ಮನ್ನು ತಿರುನಂಗೈ ಎಂಬುದಾಗಿ ವಿವರಿಸುತ್ತಾರೆಂಬುದು ಬಹಳ ಸಮಯದ ನಂತರ ನನಗೆ ತಿಳಿದುಬಂದಿತು. ಆದಾಗ್ಯೂ ನಾನು ಮಾತನಾಡಿದವರು, ತಮ್ಮನ್ನು ಗುರುತಿಸಿಕೊಳ್ಳಲು ಬಳಸಿದ ಪದವನ್ನು ಗೌರವಪೂರ್ವಕವಾಗಿ ಉಳಿಸಿಕೊಂಡಿದ್ದೇನೆ.
2014ರಲ್ಲಿ, ವಿಲುಪ್ಪುರಂ ಜಿಲ್ಲೆಯ ಕೂವಗಂ ಹಳ್ಳಿಯಲ್ಲಿ ನಾನು ಭೇಟಿಯಾದ 26ರ ಅರವಣಿ, ಜಯಮಾಲ ಹೀಗೆಂದರು: “ಇದು ನಮ್ಮ ಹಬ್ಬ. ಹತ್ತು ದಿನಗಳವರೆಗೆ ನಾವು ಬೇರೆಯದೇ ಆದ ಜಗತ್ತಿನಲ್ಲಿರುತ್ತೇವೆ. ಕಳೆದ ಕೆಲವು ದಿನಗಳಿಂದ ನಾನು ಸಮ್ಮೋಹನದಲ್ಲಿದ್ದು, ಅದರಿಂದ ಹೊರಬರಲಿಚ್ಛಿಸುವುದಿಲ್ಲ.” ತಮಿಳು ಕ್ಯಾಲೆಂಡರ್ನ ಚಿತ್ರೈ ತಿಂಗಳಿನಲ್ಲಿ (ಸುಮಾರು ಏಪ್ರಿಲ್ ತಿಂಗಳ ಮಧ್ಯಭಾಗದಿಂದ ಮೇ ಮಧ್ಯಭಾಗದವರೆಗೆ) 18 ದಿನಗಳವರೆಗೆ ನಡೆಯುವ ವಾರ್ಷಿಕ ಹಬ್ಬಕ್ಕಾಗಿ ಅವರು ಇಲ್ಲಿದ್ದಾರೆ.
ಸೌಂದರ್ಯ ಸ್ಫರ್ಧೆಗಳು, ಸಂಗೀತ ಮತ್ತು ನೃತ್ಯ ಹಾಗೂ ಇತರೆ ಸ್ಪರ್ಧೆಗಳಿಗಾಗಿ ದೇಶಾದ್ಯಂತದ ಅನೇಕ ತೃತೀಯ ಲಿಂಗಿಗಳು ಕೂವಗಂಗೆ ಬರುತ್ತಾರೆ. ಅನೇಕರು ಅರವಣ ದೇವರೊಂದಿಗೆ ʼವಿವಾಹವಾಗಲುʼ ಬರುತ್ತಾರೆ. ಕೂಥಂಡವರ್ (ಸ್ಥಳೀಯವಾಗಿ ಅರವಣವೆಂಬ)ಗೆ ಮೀಸಲಾದ ದೇವಸ್ಥಾನದಲ್ಲಿ ಈ ʼವಿವಾಹʼವು ನಡೆಯುತ್ತದೆಯಲ್ಲದೆ, ಅದು ಮಹಾಭಾರತದ ಕಥೆಯೊಂದರ ಪ್ರದರ್ಶನವೆನಿಸಿದೆ.
ಕಥೆಯು ಹೀಗಿದೆ: ಅರ್ಜುನ ಮತ್ತು ನಾಗ ರಾಜಕುಮಾರಿ ಉಲುಪಿಯ ಮಗ ಅರವಣನು ಕೌರವರ ವಿರುದ್ಧ ಪಾಂಡವರ ಗೆಲುವಿಗಾಗಿ ಕಾಳಿ ದೇವತೆಗೆ ಬಲಿಯಾಗಲು ಒಪ್ಪುತ್ತಾನೆ. ವಿವಾಹಿತನಾಗಬೇಕೆಂಬುದು ಆತನ ಅಂತಿಮ ಇಚ್ಛೆಯಾಗಿರುತ್ತದೆ. ಆದಾಗ್ಯೂ, ಮದುವೆಯ ಮರುದಿನದ ಮುಂಜಾನೆ ಆತನನ್ನು ಬಲಿಕೊಡುವ ಕಾರಣದಿಂದಾಗಿ ಯಾರೂ ಆತನೊಂದಿಗೆ ವಿವಾಹಕ್ಕೆ ಒಪ್ಪುವುದಿಲ್ಲ. ಆದ್ದರಿಂದ ಕೃಷ್ಣನು ಮೋಹಿನಿ ಎಂಬ ಸ್ತ್ರೀ ರೂಪದೊಂದಿಗೆ ಅರವಣನನ್ನು ಮದುವೆಯಾಗಿ, ಮರುದಿನ ಮುಂಜಾನೆ ಮೋಹಿನಿಯು ವಿಧವೆಯಾಗುತ್ತಾಳೆ.
ಕೂವಗಂ ಹಬ್ಬದಲ್ಲಿ ಅರವಣಿಗಳು ಮದುವೆ, ತ್ಯಾಗ ಮತ್ತು ವೈಧವ್ಯದ ಈ ಆಚರಣೆಗಳನ್ನು ಆಚರಿಸುತ್ತಾರೆ. ನಾನು ಅಲ್ಲಿಗೆ ಹೋದಾಗ, ಮದುವೆಯ ಸಮಾರೋಹವು ಆರಂಭವಾಗಿತ್ತು, ದೇವಸ್ಥಾನದೊಳಗೆ ಪೂಜಾರಿಯು ಒಬ್ಬರ ನಂತರ ಮತ್ತೊಬ್ಬ ಅರವಣಿಗೆ ವಿವಾಹದ ವಿಧಿಗಳನ್ನು ನಿರ್ವಹಿಸುತ್ತಿದ್ದರು. ಹೊರಗೆ, ಅರವಣಿಗಳು ನರ್ತಿಸುತ್ತಿದ್ದರಲ್ಲದೆ, ಮಾಲೆಗಳು, ತಾಳಿ ಮತ್ತು ಬಳೆಗಳನ್ನು ಕೊಳ್ಳುತ್ತಿದ್ದರು.
ಬೆಂಗಳೂರಿನ ಅರವಣಿಗಳ ಗುಂಪೊಂದನ್ನು ನಾನು ಭೇಟಿಯಾದೆ; ಗುಂಪಿನ ನಾಯಕಿ ಪ್ರಜ್ವಲ, ನನ್ನೊಂದಿಗೆ ಹೀಗೆಂದರು, “12 ವರ್ಷಗಳಿಂದಲೂ ನಾನಿಲ್ಲಿಗೆ ಬರುತ್ತಿದ್ದೇನೆ. ಈ ಸಮಾಜದಲ್ಲಿ ಬದುಕುವುದು ನಮಗೆ ಕಷ್ಟ. ಆದರೆ ಈ ಜಾಗವು, ಒಂದಲ್ಲ ಒಂದುದಿನ ನಾವು ಸ್ವೀಕೃತಗೊಳ್ಳುತ್ತೇವೆಂಬ ಭರವಸೆಯನ್ನು ನನಗೆ ನೀಡುತ್ತದೆ. ದೇವರ ಹೆಂಡತಿಯಾಗುವುದು ನಮಗೆ ಮನ್ನಣೆಯೇ ಸರಿ.”
ಈ ಹಬ್ಬವು ಸಂತೋಷದಾಯಕ ಸಂದರ್ಭವಾಗಿದ್ದಾಗ್ಯೂ, ಅದಕ್ಕೆ ಕರಾಳ ಮುಖವೂ ಇದೆ. ಜನಜಂಗುಳಿಯಲ್ಲಿನ ಗಂಡಸರ ಲೈಂಗಿಕ ಕಿರುಕುಳ ಮತ್ತು ಪೊಲೀಸರಿಂದ ಮೌಖಿಕ ನಿಂದನೆಯ ಬಗ್ಗೆ ಅರವಣಿಗಳು ತಿಳಿಸುತ್ತಾರೆ. 37ರ ಅರವಣಿ, ಐವಿ ಹೀಗೆನ್ನುತ್ತಾರೆ: “ಆದರೂ ನಾನಿಲ್ಲಿಗೆ ಬರುತ್ತೇನೆ, ಬರುವುದನ್ನು ಮುಂದುವರಿಸುತ್ತೇನೆ.” ಜನಜಂಗುಳಿಯ ಮಧ್ಯೆ ಆಕೆ ಕಾಣೆಯಾದರು. ಪ್ರತಿ ವರ್ಷ ಆಕೆಯನ್ನು ಮರಳಿ ಬರುವಂತೆ ಮಾಡುವುದು ಯಾವುದು ಎಂಬುದನ್ನು ನಾನು ಕೇಳಬಯಸಿದ್ದೆ. ಆದರೆ ಉತ್ತರವು ಸ್ಪಷ್ಟ: ಇದು ಅವರ ಹಬ್ಬ. ಅವರನ್ನು ಅವರಿದ್ದ ಹಾಗೆಯೇ ಸ್ವಾಗತಿಸುವ ಸ್ಥಳ.

















