ಕಾಟ್ಟಿಲೆ ಕಡಾ ಹೊಟೇಲಿಗೆ ಗಿರಾಕಿಗಳು ಬರುವ ಮೊದಲು ಕಾಡಿಗೆ ಹೋಗಿ ಕಟ್ಟಿಗೆ ತರಬೇಕು.
ತಿರುವನಂತಪುರ ಜಿಲ್ಲೆಯ ವಿದುರಾ-ಪೇಪ್ಪಾರ ಅಣೆಕಟ್ಟಿಗೆ ಹೋಗುವ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸಸಿಕುಮಾರಿ ಕಾಣಿ ಮತ್ತು ಕೆಲವು ಹೆಂಗಸರು ಕಾಡಿನ ಕಡೆಗೆ ಹೆಜ್ಜೆಹಾಕುತ್ತಿದ್ದರು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಈ ರಸ್ತೆಯು ಪೇಪ್ಪಾರ ಜಲಾಶಯವನ್ನು ಸುತ್ತುವರಿದಿದೆ. ಇಲ್ಲೆಲ್ಲಾ ಆದಿವಾಸಿಗಳ ಹಾಡಿಗಳಿವೆ. ಇಲ್ಲಿಗೆ ಅಡುಗೆ ಇಂಧನವನ್ನು ಯಾರೂ ತಂದುಕೊಡಲಾಗುವುದಿಲ್ಲ, ಕಾಡಿಗೆ ಹೋಗಿ ಸಂಗ್ರಹಿಸಲಾಗುತ್ತದೆ.
ಕಾಡಿಗೆ ಹೋಗಿ ಕಟ್ಟಿಗೆ ಸಂಗ್ರಹಿಸಿ ತಲೆಯ ಮೇಲೆ ಹೊತ್ತುಕೊಂಡು ಬಂದರೆ ಮಾತ್ರ ಅಡುಗೆ ಮನೆಯಲ್ಲಿ ಒಲೆ ಉರಿಯುತ್ತದೆ. ಕಾಟ್ಟಿಲೆ ಕಡಾ ಅಂದರೆ ‘ಕಾಡಿನಲ್ಲಿರುವ ಅಂಗಡಿ.ʼ
ರಸ್ತೆಬದಿಯಲ್ಲಿ ಇರುವ ಈ ಸಣ್ಣ ಚಹಾದ ಹೊಟೇಲಿನ ಒಳಗೆ ದಟ್ಟ ಹೊಗೆ ತುಂಬಿತ್ತು, ಮಸಿ ಹಿಡಿದ ಪಾತ್ರಗಳು ನೇತಾಡುತ್ತಿದ್ದವು. ಖಾಲಿ ಎಲ್ಪಿಜಿ ಸಿಲಿಂಡರ್ ಒಂದು ಮೂಲೆಯಲ್ಲಿ ತೆಪ್ಪಗೆ ಮಲಗಿತ್ತು. ಸದ್ಯ ಈ ಸಿಲಿಂಡರ್ನ ಬೆಲೆ ಏರಿ, ತುಂಬಿಸಲು ಸಾಧ್ಯವಿಲ್ಲ. ಸಿಲಿಂಡರ್ ಸಿಗುವುದೂ ಕಷ್ಟ.
“ಇನ್ನು ಈ ಗ್ಯಾಸನ್ನು ನಂಬಿ ಪ್ರಯೋಜನವಿಲ್ಲ. ಹಾಗಾಗಿ ಹಿಂದಿನಂತೆ ಕಾಡಿಗೆ ಹೋಗಿ ಕಟ್ಟಿಗೆ ತರುತ್ತಿದ್ದೇವೆ,” ಎಂದು 59 ವರ್ಷ ಪ್ರಾಯದ ಸಸಿಕುಮಾರಿ ಹೇಳುತ್ತಾರೆ.
ಇರಾನ್ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ಯುದ್ಧ ನಡೆಸುತ್ತಿರುವ ಕಾರಣದಿಂದ ಇಡೀ ಕೇರಳದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್ಪಿಜಿ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಸಣ್ಣ ಸಣ್ಣ ಹೊಟೇಲುಗಳಿಗೆ ಕಷ್ಟವಾಗಿದೆ. ಏರಿದ ದರ ಮತ್ತು ಅಸಮರ್ಪಕ ಪೂರೈಕೆಯಿಂದಾಗಿ ಗ್ಯಾಸನ್ನು ಕೈಬಿಟ್ಟು ಕಟ್ಟಿಗೆ ಬಳಸಲು ಆರಂಭಿಸಿದ್ದಾರೆ.
ಇದು ಈ ಕಾಟ್ಟಿಲೆ ಕಡಾದ ದೈನಂದಿನ ಚಟುವಟಿಕೆಯನ್ನೇ ಬದಲಾಯಿಸಿದೆ.
ನಾಲ್ಕು ವರ್ಷಗಳ ಹಿಂದೆ ಸಸಿಕುಮಾರಿಯವರ ಗಂಡ ಮಣಿಯನ್ (58) ಅವರಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತು. ದೈಹಿಕ ದುಡಿಮೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ಹೊಟೇಲನ್ನು ಶುರುಮಾಡಿದರು. ನೈಋತ್ಯ ಘಟ್ಟಗಳಲ್ಲಿ ವಾಸಿಸುವ ಕಾಣಿಯರು ಎಂಬ ಸಣ್ಣ ಆದಿವಾಸಿ ಸಮುದಾಯಕ್ಕೆ ಸೇರಿದ ಸಸಿಕುಮಾರಿಯವರು ತಮ್ಮ ಅಡುಗೆಯ ಕೌಶಲ್ಯವನ್ನು ಈ ಸಣ್ಣ ಉದ್ಯಮದಲ್ಲಿ ಬಳಸಿದರು. ಈ ನೆಲದ ಸಾಂಸ್ಕೃತಿಕ ಆಹಾರವನ್ನು ಜನರಿಗೆ ಉಣಬಡಿಸಿದರು.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಬೆಂಬಲ ಮತ್ತು ಕುಡುಂಬಶ್ರೀಯಲ್ಲಿ ಸಾಲವನ್ನು ಪಡೆದು, ಇವರು ತಮ್ಮ ಮನೆ ನಡೆಸಲು ರಸ್ತೆಬದಿಯಲ್ಲಿ ಸಣ್ಣ ಹೊಟೇಲನ್ನು ಆರಂಭಿಸಿದರು. ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಕುಡುಂಬಶ್ರೀ ‘ಹೊಟೇಲುಗಳುʼ ಅನೇಕರ ಬದುಕನ್ನು ಉಳಿಸಿದ್ದವು.






