ದಕ್ಷಿಣ ಕೋಲ್ಕತ್ತಾದ ಜಾದವ್ಪುರ್ ರೈಲು ನಿಲ್ದಾಣದ ಜನನಿಬಿಡ ಪ್ಲ್ಯಾಟ್ಫಾ಼ರಂನಲ್ಲಿ ನಿಂತಿದ್ದ ಬ್ರೇಶ್ಪತಿ ಸರ್ದಾರ್ ಜೋರುದನಿಯಲ್ಲಿ, “ಇಂದು ರೈಲಿನ ಒಳಗಡೆ ಕುಳಿತುಕೊಳ್ಳಲು ಜಾಗವಿರುತ್ತದೆಂದು ನಿಮಗೆ ಅನಿಸುತ್ತಿದೆಯೇ?” ಎಂದರು. ಅವರ ಪಕ್ಕದಲ್ಲಿ ಕಾಯುತ್ತಿದ್ದ ಮಹಿಳೆಯರು ಈ ಪ್ರಶ್ನೆಗೆ ನಗುತ್ತಾ, ನಿರಾಶೆಯ ಭಾವದಲ್ಲಿ ತಲೆಯಲ್ಲಾಡಿಸಿದರು.
ಬ್ರೇಶ್ಪತಿಯವರು ಕ್ಯಾನಿಂಗ್ಗೆ ತೆರಳುವ 4:35ರ ರೈಲಿಗೆ ಕಾಯುತ್ತಿದ್ದಾರೆ. ರೈಲು ಜಾದವ್ಪುರ್ ನಿಲ್ದಾಣಕ್ಕೆ ಧಾವಿಸುತ್ತದೆ. ಈಗಾಗಲೇ ತುಂಬಿತುಳುಕುತ್ತಿರುವ ಹೆಂಗಸರ ಎರಡು ಬೋಗಿಗಳಲ್ಲಿ ಒಂದಕ್ಕೆ ಹತ್ತಲು ಕಿಕ್ಕಿರಿದ ಜನಸಂದಣಿಯಲ್ಲೇ ಆ ಮಹಿಳೆಯರು ಮುನ್ನುಗ್ಗುತ್ತಾರೆ.
ಉತ್ತರ ಕೋಲ್ಕತ್ತಾದ ಸಿಅಲ್ದದಿಂದ ಬಂದ ರೈಲು, ಪಾರ್ಕ್ ಸರ್ಕಸ್, ಬಾಲಿಗಂಜ್ ಜಂಕ್ಷನ್ ಮತ್ತು ಧಕುರಿಯಾದಲ್ಲಿ ನಿಲ್ಲುತ್ತದೆ. ಜಾಧವ್ಪುರ್ ನಂತರದಲ್ಲಿ ಈ ರೈಲು, ದಕ್ಷಿಣ ಕೋಲ್ಕತ್ತಾದ, ಪ್ರಮುಖವಾಗಿ ಮಧ್ಯಮ ವರ್ಗ ಮತ್ತು ಶ್ರೀಮಂತ ಪ್ರದೇಶಗಳೆನಿಸಿದ ಬಾಘಾ ಜತಿನ್, ನ್ಯೂ ಗರಿಯಾ ಮತ್ತು ಗರಿಯಾಗಳಲ್ಲಿ ನಿಲ್ಲುತ್ತದೆ. ಜಾಧವ್ಪುರ್ ಮತ್ತು ಮಾರ್ಗದುದ್ದಕ್ಕೂ ಇರುವ ಇತರೆ ನಿಲ್ದಾಣಗಳಲ್ಲಿ ಕಾಯುತ್ತಿರುವ ಹೆಂಗಸರು ದಕ್ಷಿಣ ಕೋಲ್ಕತ್ತಾದ ಈ ಪ್ರದೇಶಗಳಲ್ಲಿ ಮನೆಕೆಲಸಗಾರರಾಗಿದ್ದಾರೆ.
ಇವರಲ್ಲಿನ ಅನೇಕರು 45 ಕಿ.ಮೀ.ಗಳ ಸಿಅಲ್ದ-ಕ್ಯಾನಿಂಗ್ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. ಇದು 16 ನಿಲ್ದಾಣಗಳಲ್ಲಿ ನಿಲ್ಲುತ್ತದೆ. 25 ನಿಲ್ದಾಣಗಳಲ್ಲಿ ನಿಲ್ಲುವ 65 ಕಿ.ಮೀ.ಗಳ ಸಿಅಲ್ದ-ಲಕ್ಷ್ಮಿಕಾಂತಪುರ್ ರೈಲಿನಲ್ಲಿ ಅಥವಾ ಮತ್ತಷ್ಟು ದಕ್ಷಿಣಕ್ಕೆ ಸಾಗುವ ಸಿಅಲ್ದ-ನಮ್ಖಾನಾ ರೈಲಿನಲ್ಲಿಯೂ ಇವರು ಪ್ರಯಾಣಿಸುತ್ತಾರೆ. ಆದ್ದರಿಂದ, ಕೋಲ್ಕತ್ತಾದಲ್ಲಿನ ಕೆಲವರು ಪೂರ್ವ ದಿಕ್ಕಿನತ್ತ ಸಾಗುವ ಈ ರೈಲುಗಳನ್ನು ʼಝಿ ಸ್ಪೆಷಲ್ʼ ಎನ್ನುತ್ತಾರೆ. ಝಿ ಎಂಬುದು ಮಹಿಳಾ ಮನೆಕೆಲಸಗಾರರಿಗೆ ಬಳಸುವ ಬಂಗಾಳಿ ಭಾಷೆಯ ಅವಮಾನಕರ ಪದ.









