…ಮೊನ್ಯುಲ್ ಚೋಕ್ಲೇ ಆಯಲ್ ಲೊ
ಮೊನ್ಯುಲ್ ಚೋಕ್ಲೇ ಆಯಲ್ ಲೊ
(ಮೊನ್ಪಾ ನೆಲಕ್ಕೆ ಜಯವಾಗಲಿ
ಮೊನ್ಯುಲ್ಗೆ ಜಯವಾಗಲಿ)
ಇದು ಶಾಲೆಯ ಅಸೆಂಬ್ಲಿಯಲ್ಲಿ ಹಾಡಲಾಗುವ ಕೊನೆಯ ಹಾಡು. ಈ ಹಾಡು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತದೆ. ಈ ಭಾಷೆ ನನಗೆ ಪರಿಚಿತವಲ್ಲ ಅಥವಾ ನನಗೆ ಅರ್ಥವಾಗದಿರುವ ಭಾಷೆ ಎನ್ನುವ ಕಾರಣಕ್ಕಾಗಿ ಈ ಪ್ರಶ್ನೆಗಳು ಹುಟ್ಟುವುದಲ್ಲ. ಈ ಹಾಡಿನಲ್ಲಿ ಬಳಸಲಾಗಿರುವ ಭಾಷೆ ಇಲ್ಲಿನ ಜನರ ಭಾಷೆಗಿಂತಲೂ ಭಿನ್ನವಾದದ್ದು. ಇಲ್ಲಿನ ಜನರು ಆಡುವ ಮಾತು ನನಗೆ ಪರಿಚಿತ. ಆದರೆ ಈ ಹಾಡಿನಲ್ಲಿ ಬಳಸಲಾಗಿರುವ ಪದಗಳು ಆ ಭಾಷೆಯ ಪದಗಳಲ್ಲ. ನಾನು ಈ ಹಿಮಾಲಯನ್ ಕಣಿವೆಯಲ್ಲಿ ಸ್ಥಳೀಯ ಜನರು ಮಾತನಾಡುವುದನ್ನು ಕೇಳಿದ್ದೇನೆ. ಪಶ್ಚಿಮ ಕಾಮೆಂಗ್ ಜಿಲ್ಲೆಯ ಚುಗ್ ಗ್ರಾಮದಲ್ಲಿ ಸ್ವಲ್ಪ ಸಮಯದಿಂದ ಮೊನ್ಪಾ ಜನರ ಜೀವನವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದೇನೆ.
ಅದು ಜುಲೈ ತಿಂಗಳ ಕೊನೆಯ ಗುರುವಾರದ ಮುಂಜಾನೆಯಾಗಿತ್ತು. ಅರುಣಾಚಲ ಪ್ರದೇಶದ ಅತ್ಯಂತ ರಮಣೀಯ ಹಳ್ಳಿ ಎಂದು ಗುರುತಿಸಿಕೊಂಡಿರುವ ಪ್ರದೇಶದಲ್ಲಿ ನಾನಿದ್ದೆ. ನವಾಂಗ್ ತ್ಸೆರಿಂಗ್ ಅವರ ಬೈಕಿನ ಹಿಂಭಾಗದ ಸೀಟಿನಲ್ಲಿ ಕುಳಿತು - ಅವರು ಸರ್ಕಾರಿ ಶಾಲಾ ಶಿಕ್ಷಕ – ಚುಗ್ ಪ್ರದೇಶದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ರಾಮಾ ಕ್ಯಾಂಪ್ ಎನ್ನುವಲ್ಲಿನ ಪಿಎಂ ಶ್ರೀ ಸರ್ಕಾರಿ ಮಾಧ್ಯಮಿಕ ಶಾಲೆಗೆ ತಲುಪಿಕೊಂಡಿದ್ದೆ. ಹತ್ತಿರದ ಹಳ್ಳಿಗಳ ಮಕ್ಕಳು ಈ ಶಾಲೆಗೆ ನಡಿಗೆಯ ಮೂಲಕ ತಲುಪಿಕೊಳ್ಳುತ್ತಾರೆ.
ಆಗ ಸಮಯ ಬೆಳಗಿನ 9:00 ಗಂಟೆ. ಅದು ಪ್ರಾರ್ಥನೆಯ ಸಮಯ. ನಾನು ವೇದಿಕೆಯ ಮೇಲೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕೆಲವು ವಿದ್ಯಾರ್ಥಿಗಳ ಹಿಂದೆ, ಸಾಧ್ಯವಿರುವಷ್ಟು ಗೋಡೆಗೆ ಹತ್ತಿರವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದೆ. ನನ್ನ ಎದುರಿಗೆ ಸೊಂಪಾದ ಹಸಿರು ಪರ್ವತದ ಸಾಲುಗಳ ಮೇಲೆ ತಿಳಿ ನೀಲಿ ಆಕಾಶ ಶುಭ್ರ ಬಿಳಿ ಬಣ್ಣದ ಮೋಡಗಳನ್ನು ತೊಟ್ಟು ವಿದ್ಯಾರ್ಥಿಗಳ ಸಮವಸ್ತ್ರದ ಜೊತೆ ಪೈಪೋಟಿಗೆ ಇಳಿದಂತೆ ಕಾಣುತ್ತಿತ್ತು. ಇತ್ತ ಮೈದಾನದಲ್ಲಿ 260 ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಸಾಲುಗಟ್ಟಿ ನಿಂತಿದ್ದರು.





