ಮೇಜಿನ ಮೇಲಿದ್ದ ಸಿಹಿತಿಂಡಿಯ ಪೆಟ್ಟಿಗೆಯೊಂದನ್ನು ತೆರೆಯುತ್ತಿದ್ದ ಹಾಗೆ ಹಳೆಯ ಪರಿಚಿತ ಕೂಗೊಂದು ನನ್ನ ಕಿವಿಯಲ್ಲಿ ಪ್ರತಿಧ್ವನಿಸಿತು: ರಾಮ್ದಾನಾ ಲೇ ಬಾ, ಬವುವಾ ಕೆ ಮಿಠಾಯಿ ಬಾ (ರಾಮ್ದಾನಾ ಸಿಹಿತಿಂಡಿ... ಪುಟ್ಟ ಕಂದಮ್ಮಗಳಿಗಾಗಿ ಸಿಹಿತಿಂಡಿ...)
ಅದು ಬಿಹಾರದ ರಾಜಧಾನಿ ಪಾಟ್ನಾದ ಚಾಂದ್ಪುರ್ ಬೇಲಾ ಮೊಹಲ್ಲಾದ ಒಂದು ಬೇಸಗೆಯ ಆಲಸಿ ಮಧ್ಯಾಹ್ನದ ಹೊತ್ತು. ಆಗ ನನಗೆ ಸುಮಾರು 12 ವರ್ಷ ವಯಸ್ಸು. ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದ ವ್ಯಾಪಾರಿಯೊಬ್ಬರು ತನ್ನ ಹೆಗಲ ಮೇಲೆ ದೊಡ್ಡ ಗಾಜಿನ ಭರಣಿಯನ್ನು ಹೊತ್ತು ಅಲೆಯುತ್ತಿದ್ದರು; ಅದರ ಅಗಲವಾದ ಬಾಯಿಯಿಂದ ರಾಮ್ದಾನಾ ಲಡ್ಡುಗಳು (ರಾಜಗಿರಿ ಬೀಜಗಳಿಂದ ತಯಾರಿಸಿದ ಸಿಹಿ ಉಂಡೆಗಳು) ಹೊರಬರುತ್ತಿರುವಂತೆ ಕಾಣುತ್ತಿದ್ದವು.
ಅವರ ಆ ಕೂಗು ಅವರು ಮಾರುತ್ತಿದ್ದ ಸಿಹಿತಿಂಡಿಗಳಿಗಿಂತಲೂ ಸವಿಯಾಗಿತ್ತು. ಅದರಲ್ಲಿ ಒಂದು ಆತ್ಮೀಯತೆ ಇತ್ತು. ನಾವು ಅವರ ಪಾಲಿಗೆ ಕೇವಲ ಗ್ರಾಹಕರಾಗಿರಲಿಲ್ಲ, ಬವುವಾ (ಕಂದಮ್ಮಗಳು) ಆಗಿದ್ದೆವು. ಅವರು ನಮ್ಮನ್ನು ಮಾತನಾಡಿಸುತ್ತಿದ್ದ ರೀತಿ ನಾವು ಅವರಿಗೆ ಸಂಬಂಧಿಕರೇನೊ ಎನ್ನುವಂತಿರುತ್ತಿತ್ತು; ಇದು ಕೊಳ್ಳುವವರು ಮತ್ತು ಮಾರುವವರ ನಡುವಿನ ಗೋಡೆಯನ್ನೇ ಅಳಿಸಿಹಾಕುತ್ತಿತ್ತು.
ಇಂದು ನನಗೆ ಅನ್ನಿಸುತ್ತದೆ, ಬಾಲ್ಯದಲ್ಲಿ ಭಾಷೆ ಕೇವಲ ಮನೆ ಅಥವಾ ಶಾಲೆಯ ವ್ಯಾಪ್ತಿಗೆ ಸೀಮಿತವಾಗಿರಲಿಲ್ಲ; ಅದು ಬೀದಿ ವ್ಯಾಪಾರಿಗಳ ಧ್ವನಿಯಲ್ಲಿ ಬೀದಿಗಳಲ್ಲಿ ಮೊಳಗುತ್ತಿತ್ತು.







