ಇರ್ಷಾದ್ ಹುಸೇನ್ ಲೋಹದ ಪಾತ್ರೆಯ ಮೇಲೆ ಗುಲಾಬಿ ಎಸಳು, ಎಲೆಗಳ ಮೇಲಿನ ನಾರು ಮತ್ತು ಇನ್ನೂ ಹಲವು ಚಿತ್ತಾರಗಳನ್ನು ಮೂಡಿಸಬಲ್ಲರು. ಅವರೋರ್ವ ಕಲಾವಿದ ಮತ್ತು ಅವರು ಅಭ್ಯಾಸ ಮಾಡುವ ಕಲೆಯ ಹೆಸರು ಸಿಯಾ ಕಲಂ. ಇದನ್ನು ಉತ್ತರ ಪ್ರದೇಶದ ಮೊರಾದಾಬಾದ್ ಪ್ರದೇಶದಲ್ಲಿ ನೀವು ಕಾಣಬಹುದು. ಈ ಊರನ್ನು ಪಿತಲ್ ನಗರೀ (ಹಿತ್ತಾಳೆ ನಗರ) ಎಂದೂ ಕರೆಯಲಾಗುತ್ತದೆ.
ಆ ದಿನ ಅವರು ಕೆತ್ತಿದ ಹಲವು ಹಿತ್ತಾಳೆ ವಸ್ತುಗಳು ಪೀರ್ಜಾ಼ದಾ ಎನ್ನುವಲ್ಲಿರುವ ಅವರ ವರ್ಕ್ಶಾಪಿನಲ್ಲಿ ಸುತ್ತ ಬಿದ್ದಿದ್ದವು: ನವಿಲು, ದೀಪ, ಸ್ವಸ್ತಿಕಾ ಚಿಹ್ನೆಯನ್ನು ಕೆತ್ತಿರುವ ಬಟ್ಟಲುಗಳು, ಪೂಜೆಗೆ ಬಳಸುವ ಗಂಟೆ ಮತ್ತು ಸಿಂಹದ ತಲೆಯನ್ನು ಹೊಂದಿರುವ ಖಡ್ಗದ ಹಿಡಿ.
ಹುಸೇನ್ ಸಿಯಾ ಕಲಂ ಪರಂಪರೆಗೆ ಸೇರಿದವರು. ಅವರು ತನ್ನ 10ನೇ ವರ್ಷಕ್ಕೆಲ್ಲ ಈ ಕೆಲಸದಲ್ಲಿ ತೊಡಗಿದ್ದರು. ಟೀಪಾಯ್ ಒಂದರ ಮೇಲೆ ಎರಡು ಕಲ್ಲುಗಳನ್ನು ಇರಿಸಿ ಅವುಗಳ ನಡುವೆ ದೀಪವೊಂದನ್ನು ಇಟ್ಟುಕೊಂಡು ಅವರು ಕೆತ್ತನೆ ಕೆಲಸ ಮಾಡುತ್ತಿದ್ದರು. ದೀಪಕ್ಕೆ ಒಂದು ದಾರ ಕಟ್ಟಲಾಗಿದ್ದು ಆ ದಾರವನ್ನು ಅವರು ಬಲಗಾಲಿನಿಂದ ಮೆಟ್ಟಿಕೊಂಡಿದ್ದರು. ಹುಸೇನ್ ಪೆನ್ ಆಕಾರದಲ್ಲಿರುವ ಉಳಿಯ ಮೇಲೆ ಮರದ ಸುತ್ತಿಯಿಂದ ಬಡಿಯತೊಡಗಿದಂತೆ ದೀಪದ ಮೇಲೆ ಆಕೃತಿ ಮೂಡತೊಡಗಿತು.
“ಗ್ರಾಹಕರು ಕೆಲವೊಮ್ಮೆ ಉಡುಗೊರೆಗಳ ಮೇಲೆ ತಮ್ಮಿಷ್ಟದ ಆಕೃತಿಗಳನ್ನು ಕೆತ್ತುವಂತೆ ಕೇಳುತ್ತಾರೆ – ಹಿಂದಿ, ಉರ್ದು, ಇಂಗ್ಲಿಷ್ ಭಾಷೆಯಲ್ಲಿ ಜೋಡಿಯ ಹೆಸರು, ಕುರಾನ್ ಸುರಾಹ್, ಗೋಡೆಯ ಮೇಲೆ ನೇತುಹಾಕಲು ವಿನ್ಯಾಸಗಳು. ನಾನು ಅವುಗಳನ್ನು ಹೂಗಳಿಂದ ಅಲಂಕರಿಸುತ್ತೇನೆ, ಅದು ಜನರಿಗೆ ಬಹಳ ಇಷ್ಟವಾಗುತ್ತದೆ. ಗುಲಾಬಿ ನನ್ನಿಷ್ಟದ ಹೂವು” ಎಂದು ಅವರು ಪರಿಗೆ ಹೇಳಿದರು.
ಈ ಪರಿಣಿತ ಕಲಾವಿದ 10 ಚದರ ಅಡಿ ಕೋಣೆಯ ಬಾಗಿಲಿನಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಇದೇ ಕೋಣೆಯಲ್ಲಿ ಇನ್ನೊಬ್ಬ ಕಲಾವಿದ ಕೂಡಾ ಕೆಲಸ ಮಾಡುತ್ತಾರೆ. “ಸೀಖ್ನೇ ಕೇ ವಕ್ತ್ ಯೇ ಕಲಾಕಾರಿ ಲಗ್ತಾ ಥಾ, ಅಬ್ ಬಸ್ ಕಾಮ್ [ಕಲಿಯೋ ಸಮಯದಲ್ಲಿ ಇದೊಂದು ಕಲೆಯಾಗಿ ಕಂಡಿತ್ತು, ಈಗೇನಿದ್ದರೂ ಇದೊಂದು ಕೆಲಸ ಮಾತ್ರ]” ಎಂದು ಅವರು ತನ್ನ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.




















