"ಬನ್ನಿ, ಬನ್ನಿ! ಇಲ್ಲಿ ಕುಳಿತುಕೊಳ್ಳಿ" ಎಂದು ಕುರಿ ಉಣ್ಣೆಯ ಬಿಳಿ ಕಂಬಳಿ ಹಾಸುತ್ತಾ ಪ್ರೀತಿಯಿಂದ ಆಹ್ವಾನಿಸಿದರು ನಂದೂ ಪಾಲ್ (45). ಗದೇರಿ ಸಮುದಾಯಕ್ಕೆ ಸೇರಿದವರಾದ ಇವರು ಸಾಂಪ್ರದಾಯಿಕ ಕುರಿ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ ಇವರ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳಡಿ ಪಟ್ಟಿ ಮಾಡಲಾಗಿದೆ. ಅವರು ಹೇಳುವಂತೆ ಈ ಕಂಬಳಿ "ಬೇಸಗೆಯಲ್ಲಿ ತಣ್ಣಗಿರಿಸುತ್ತದೆ, ಚಳಿಗಾಲದಲ್ಲಿ ಬೆಚ್ಚಗಿರುತ್ತದೆ ಮತ್ತು ಮಳೆಯಿಂದಲೂ ರಕ್ಷಣೆ ನೀಡುತ್ತದೆ."
ಕಂಬಳಿಯ ಪ್ರಾಯೋಗಿಕ ಉಪಯೋಗಗಳನ್ನು ಹೇಳಿದ ಅವರಿಗೆ ಅಷ್ಟಕ್ಕೇ ಸಮಾಧಾನವಾಗಲಿಲ್ಲ. ತನ್ನ ಮಾತು ಮುಂದುವರೆಸಿದ ಅವರು, "ಇದನ್ನು ರಾಜರು ಮತ್ತು ಚಕ್ರವರ್ತಿಗಳು ಗೌರವಿಸಿದ್ದಾರೆ. ಧರ್ಮಗುರುಗಳ ಆಸನವೂ ಹೌದು. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗೀಗ ಆ ಸಂಪ್ರದಾಯ ಇಲ್ಲವಾಗಿದೆ" ಎಂದರು.
ನಂದೂ ಪಾಲ್ ಅವರ ಛೋಟಾನಾಗಪುರಿ ತಳಿಯ 650 ಕುರಿಗಳು ಶಿಯೋಪುರ್ ಗ್ರಾಮದಲ್ಲಿ ನಾವು ಕುಳಿತಿದ್ದ ಸ್ಥಳದ ಸುತ್ತಮುತ್ತ ಮೇಯುತ್ತಿದ್ದವು. ನಂದೂ ಪಾಲ್ ಕಳೆದ ಐದು ತಲೆಮಾರುಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪಾಲಿಗೆ ಈ ಕೆಲಸ ಎಂದೂ ಸುಲಭವೆಂದು ಎನ್ನಿಸಿದ್ದಿಲ್ಲ. "ಒಂದು ನಿಮಿಷವೂ ಅವುಗಳನ್ನು ಅವುಗಳ ಪಾಡಿಗೆ ಬಿಡಲು ಸಾಧ್ಯವಿಲ್ಲ" ಎಂದು ದಾತ್ನ್ (ಹಲ್ಲುಜ್ಜುವ ಕಡ್ಡಿ) ಕಡ್ಡಿ ಜಗಿಯುತ್ತಾ ಅವರು ಹೇಳಿದರು. "ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಒಂದೋ ಅವುಗಳ ಮೇಲೆ ನಾಯಿಗಳು ದಾಳಿ ಮಾಡುತ್ತವೆ ಅಥವಾ ಕುರಿಗಳು ಯಾರದ್ದಾದರೂ ಗದ್ದೆಗೆ ನುಗ್ಗುತ್ತವೆ."


















