ಏಪ್ರಿಲ್ ಮಧ್ಯದಲ್ಲಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ತರಹದ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಲಾಗುವುದೆಂದು ಖಚಿತವಾದಾಗ ಗೋಪಾಲ್ ಗುಪ್ತಾ ಒಂದು ವರ್ಷದಲ್ಲಿ ಎರಡನೇ ಬಾರಿಗೆ ಮುಂಬೈಯನ್ನು ತೊರೆಯಲು ನಿರ್ಧರಿಸಿದ್ದರು.
ಆದರೆ, ಮಾರ್ಚ್ ಅಂತ್ಯದಲ್ಲಿ, ಅವರ ಕುಟುಂಬವು ಅವರ ಚಿತಾಭಸ್ಮವಿದ್ದ ಸಣ್ಣ ಕೆಂಪು ಮಣ್ಣಿನ ಮಡಕೆಯೊಂದಿಗೆ ರೈಲನ್ನು ಹತ್ತಿದರು, ಅದನ್ನು ಉತ್ತರ ಪ್ರದೇಶದ ತಮ್ಮ ಗ್ರಾಮವಾದ ಕುಸೌರಾ ತಾಲೂಕು ಸಹತ್ವಾರ್ಗೆ ತೆಗೆದುಕೊಂಡುಗೋಗುವುದು ಅವರ ಉದ್ದೇಶವಾಗಿತ್ತು.
"ನನ್ನ ತಂದೆಯ ಸಾವಿಗೆ ನಾನು ಕರೋನಾವನ್ನು ಮಾತ್ರ ದೂಷಿಸಬಹುದೆಂದು ಭಾವಿಸುವುದಿಲ್ಲ... ಅವರು ಬದುಕಿದ್ದರೂ ಸಹ, ಒಂದು ಕಾಲಿಲ್ಲದೇ ಇರುತ್ತಿದ್ದರು" ಎಂದು ಗೋಪಾಲ್ ಅವರ 21 ವರ್ಷದ ಮಗಳು ಜ್ಯೋತಿ ಹೇಳುತ್ತಾರೆ.
ಕಲ್ಯಾಣ್ನಲ್ಲಿ ತರಕಾರಿ ಮಾರಾಟಗಾರರಾಗಿರುವ 56 ವರ್ಷದ ಗೋಪಾಲ್ಗೆ ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಕೆಮ್ಮು-ನೆಗಡಿ ಕಾಣಿಸಿಕೊಂಡಾಗ, ಪಲವಾನಿ ಪ್ರದೇಶದ ಬಸ್ತಿಯಲ್ಲಿದ್ದ ಚಿಕಿತ್ಸಾಲಯದಿಂದ ಕೆಲವು ಔಷಧಿಗಳನ್ನು ಪಡೆದ ನಂತರ ಆರೋಗ್ಯವು ಸುಧಾರಿಸಿತ್ತು. ಈ ಪ್ರದೇಶದಲ್ಲಿ ಅವರ ಕುಟುಂಬವು ಎರಡು ಬಾಡಿಗೆ ಕೋಣೆಗಳ ವಿಭಾಗವೊಂದರಲ್ಲಿ ವಾಸವಾಗಿತ್ತು.
ಅವರು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಬನ್ಸ್ದಿಹ್ ತಾಲ್ಲೂಕಿನ ತಮ್ಮ ಗ್ರಾಮದಿಂದ ಜನವರಿಯಲ್ಲಿ ಹಿಂದಿರುಗಿ ಕೇವಲ ಎರಡು ತಿಂಗಳಾಗಿತ್ತು. ಆದರೆ ಕೆಲಸ ಪ್ರಾರಂಭವಾಗುತ್ತಿದ್ದಂತೆ, ಎರಡನೇ ಕೋವಿಡ್ ಉಲ್ಬಣಗೊಳ್ಳತೊಡಗಿತು. "ನನ್ನ ತಂದೆ ಕಳೆದ ವರ್ಷದಂತೆ ಮತ್ತೆ ಕಾದು ನೋಡುವ ಅಪಾಯವನ್ನು ಬಯಸಲಿಲ್ಲ" ಎಂದರು ಜ್ಯೋತಿ. ಆದ್ದರಿಂದ ಕುಟುಂಬವು ಮತ್ತೆ ತಮ್ಮ ಹಳ್ಳಿಗೆ ಹೋಗಲು ತಯಾರಿ ನಡೆಸಿತು.
ಆದರೆ ಮಾರ್ಚ್ 10ರಂದು ಮುಂಜಾನೆ 5 ಗಂಟೆ ಸುಮಾರಿಗೆ ಗೋಪಾಲ್ ಅವರಿಗೆ ಉಸಿರುಗಟ್ಟಲು ಶುರುವಾಯಿತು. ಸ್ಥಳೀಯ ಚಿಕಿತ್ಸಾಲಯಕ್ಕೆ ಕರೆದೊಯ್ದಾಗ, ಅವರು ಕೋವಿಡ್-ಪಾಸಿಟಿವ್ ಎಂಬುದಾಗಿ ತಿಳಿದು ಬಂದಿತು. ಕುಟುಂಬವು ಅವರನ್ನು ತ್ವರಿತವಾಗಿ ಕೆಡಿಎಂಸಿ (ಕಲ್ಯಾಣ್ ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಗಷನ್) ಮೈದಾನಕ್ಕೆ ಕರೆದೊಯ್ದಿತು, ಅದನ್ನು 'ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ (ಕೋವಿಡ್ಗೆ ಮೀಸಲಿರಿಸಿದ ಆರೋಗ್ಯ ಕೇಂದ್ರ)' ಆಗಿ ಪರಿವರ್ತಿಸಲಾಗಿತ್ತು. (ಕಲ್ಯಾಣ್ ಮತ್ತು ಡೊಂಬಿವಲಿ ಮುಂಬೈ ಮಹಾನಗರ ಪ್ರದೇಶದ ನಗರಗಳು). ಆದರೆ ಅವರ ಸ್ಥಿತಿ ಹದಗೆಟ್ಟಿತು. ಆರೋಗ್ಯ ಕೇಂದ್ರದ ಸಿಬ್ಬಂದಿಯು ಉತ್ತಮ ಸುಸಜ್ಜಿತ ಸೌಲಭ್ಯಕ್ಕೆ ಅವರನ್ನು ಸ್ಥಳಾಂತರಿಸುವಂತೆ ಗೋಪಾಲ್ ಅವರ ಕುಟುಂಬಕ್ಕೆ ತಿಳಿಸಿದರು. ಅಂದು ಮಧ್ಯಾಹ್ನ ಅವರನ್ನು ಕಲ್ಯಾಣ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
"ಎಲ್ಲಿಗೆ ಹೋಗಬೇಕೆಂದು ನಮಗೆ ನಿಜವಾಗಿಯೂ ತಿಳಿದಿರಲಿಲ್ಲ. ನಮಗೆ ಯೋಚಿಸಲು ಸ್ವಲ್ಪವೂ ಸಮಯವಿರಲಿಲ್ಲ. ನನ್ನ ತಂದೆಯ ಹದಗೆಡುತ್ತಿದ್ದ ಆರೋಗ್ಯ ಮತ್ತು ಸಹೋದರನ ಪರಿಸ್ಥಿತಿಯಿಂದ ಭಯಭೀತರಾಗಿದ್ದೆವು,” ಎಂದು ಜ್ಯೋತಿ ವಿವರಿಸಿದರು. ಅವರ ಸಹೋದರ, 26ರ ವಿವೇಕ್ ಸಹ ಕೋವಿಡ್ ಪಾಸಿಟಿವ್ ಎಂಬುದಾಗಿ ತಿಳಿದುಬಂದಿದ್ದು, ಹತ್ತಿರದ ಭಿವಂಡಿಯ ಕೇಂದ್ರದಲ್ಲಿ 12 ದಿನಗಳ ಕಾಲ ಇತರರೊಂದಿಗೆ ಸಂಪರ್ಕರಹಿತವಾಗಿ ಇರುವಂತೆ ಅವರಿಗೆ ತಿಳಿಸಲಾಗಿತ್ತು.










