ರಾಜೇಶ್ ಅಂಧಾರೆಗೆ ಜೀವನದಲ್ಲಿ ಮೊಟ್ಟಮೊದಲನೇ ಬಾರಿಗೆ ಕೈಯಲ್ಲಿ ಒಂದು ಸ್ಮಾರ್ಟ್ಫೋನ್ ಹಿಡಿಯುವ ಸಲುವಾಗಿ ರೂ. 2500 ಡೌನ್ ಪೇಮೆಂಟ್ ಕಟ್ಟಬೇಕಾಗಿ ಬಂದಿತು. ಎರಡು ವರ್ಷ ಕಳೆದರೂ, ಅವರಿಗೆ ಅದನ್ನ ಬಳಸೋದಕ್ಕೆ ಬರೋದಿಲ್ಲ. “ಆಗಿನ್ನೂ ಸ್ಕೂಲಿನಿಂದ ಪಾಸ್ ಆಗಿದ್ದ ನನ್ನ ಹಿರೇ ಮಗ ದಿನೇಶನಿಗೆ ಗಿಫ್ಟ್ ಅದು,” ಅನ್ನತಾರೆ 43-ಹರೆಯದ ರಾಜೇಶ್. “ಬಾಕಿ ಮೊತ್ತ ರೂ. 1,000ದಂತೆ ಐದು ಕಂತಿನಲ್ಲಿ ಕಟ್ಟಿದೆವು. ಫೋನಿನ ಬೆಲೆ ಸರಿಸುಮಾರು ರೂ. 7,500.”
16ರ ಹರೆಯದ ದಿನೇಶ್ ಬಳಿ ಆ ಸ್ಮಾರ್ಟ್ಫೋನ್ ಇದೆ, ಆದರೆ ಮಹಾರಾಷ್ಟ್ರದ ಪಾಲಘರ್ ಜಿಲ್ಲೆಯ ಡೊಂಗರಿ ಎಂಬ ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ರಾಜೇಶ್ ಕೂಡ ಅದನ್ನ ಬಳಸೋ ಪ್ರಯತ್ನ ಪಟ್ಟರು – ಯಶಸ್ವಿಯಾಗಲಿಲ್ಲ.
ಆ ಫೋನಿನ ಬೆಲೆ ಕೂಲಿಕಾರ್ಮಿಕರಾದ ರಾಜೇಶ್ ದಿನಕ್ಕೆ ರೂ. 250-300ರಂತೆ ಅಂದಾಜು ಒಂದು ತಿಂಗಳಲ್ಲಿ ದುಡಿಯವಷ್ಟು. “ಅದನ್ನ ಬಳಸೋದನ್ನ ಕಲಿಯೋಕೆ ಪ್ರಯತ್ನ ಮಾಡಿದೆ,” ಎಂದು ಹೇಳತಾರೆ. “ಆದರೆ ಕೆಲ ದಿನಗಳ ನಂತರ ಬಿಟ್ಟುಬಿಟ್ಟೆ. ನನಗೆ ನನ್ನ ಹಳೆಯ ಫೋನೇ ಸರಿ, ಅದರಲ್ಲಿ ಸರಿಯಾದ ಕೀಪ್ಯಾಡ್ ಇದೆ.”
ಕಡಿಮೆ ಆದಾಯದ ಕುಟುಂಬಗಳನ್ನ ಹೊಂದಿರುವ, ಆದಿವಾಸಿಗಳೇ ಬಹುಸಂಖ್ಯಾತರಾಗಿರುವ ತಳಾಸರಿ ತಾಲೂಕಿನಲ್ಲಿ ಕಷ್ಟಕರವಾದ ಭೂ ಪ್ರದೇಶಗಳು ಹಾಗೂ ಪರಿಸ್ಥಿತಿಗಳಿದ್ದರೂ, ಅವರ ಮಗನ ತಲೆಮಾರಿಗೆ ಸ್ಮಾರ್ಟ್ಫೋನ್ ಬಳಸೋದರಲ್ಲಿ ಚಾಕಚಕ್ಯತೆ ಇದೆ. ಆದರೆ ಖರ್ಚು-ವೆಚ್ಚಗಳು ಹಾಗೂ ಸಂಪರ್ಕದ ಕೊರತೆಗಳು ಅಡ್ಡಗಾಲು ಹಾಕುತ್ತವೆ.
ಗುಜರಾತ್ ಗಡಿ ಪ್ರದೇಶದ ಬಳಿಯಿರುವ ಈ ಬುಡಕಟ್ಟು ಪ್ರದೇಶ ಮುಂಬಾಯಿ ಇಂದ ಕೇವಲ 130 ಕಿಲೋಮೀಟರ್ ದೂರದಲ್ಲಿದೆ – ಆದರೆ ಮಿಂಬಲೆ (ಇಂಟರ್ನೆಟ್) ಸಂಪರ್ಕ ಇಲ್ಲಿ ತೀರ ಕಳಪೆಯದಾಗಿದೆ. “ವಿದ್ಯುತ್ ಸರಬರಾಜು ಕೂಡ ಸ್ಥಿರವಾಗಿಲ್ಲ, ವಿಶೇಷವಾಗಿ ಮಳೆಗಾಲದಲ್ಲಿ” ಅನ್ನತಾರೆ ವರ್ಲಿ ಬುಡಕಟ್ಟಿಗೆ ಸೇರುವಂಥ ರಾಜೇಶ್.
ಹಾಗಾಗಿ ಡೊಂಗರಿ ಯ ಒಂದು ಮರದ ಕೆಳಗೆ ಹುಡುಗರ ಗುಂಪೇನಾದರೋ ಕಂಡು ಬಂದರೆ, ಆ ಜಾಗದಲ್ಲಿ ನೆಟ್ವರ್ಕ್ ಸಂಪರ್ಕ ಅಲ್ಪ ಸ್ವಲ್ಪ ಸಿಗತಿದೆ ಅಂತ ಕಣ್ಣು ಮುಚ್ಚಿ ಹೇಳಬಹುದು. ಆ ಗುಂಪಲ್ಲಿ ಒಬ್ಬ ಅಥವಾ ಇಬ್ಬರ ಹತ್ತಿರ ಸ್ಮಾರ್ಟ್ಫೋನ್ ಇರತದೆ, ಮಿಕ್ಕವರೆಲ್ಲರೂ ಸಡಗರದಿಂದ ಅದನ್ನೇ ದಿಟ್ಟಿಸಿ ನೋಡತಿರ್ತಾರೆ. ಅವರೆಲ್ಲರೂ ಹುಡುಗರೇ ಆಗಿರತಾರೆ, ನಿಜ. ಇಲ್ಲಿ ಸ್ಮಾರ್ಟ್ಫೋನ್ ಮಾಲೀಕರಾದ ಹುಡುಗಿಯರು ಕಂಡು ಬರೋದು ಕಷ್ಟ.









