“ನನ್ನಮ್ಮ ಅವರನ್ನು ಒಮ್ಮೆ ಭೇಟಿಯಾಗಿದ್ದರು.”
ಶಾಂತಿನಿಕೇತನದ ಬಳಿಯ ಎಲ್ಲರಿಗೂ ಆ “ಅವರು ಯಾರೆನ್ನುವುದು ಗೊತ್ತು.
ಬಿಪಿನ್ ಕರ್ಮಾಕರ್ ಅವರ ಪಳಗಿದ ಕೈಗಳು ರವೀಂದ್ರನಾಥ ಟ್ಯಾಗೋರರ ಪುಟ್ಟ ಮೂರ್ತಿಯೊಂದನ್ನು ರೂಪಿಸುತ್ತಿದ್ದವು. "ನಾವು ಪುರಿಗೆ ಹೋದಾಗ ಜಗನ್ನಾಥನ ಮೂರ್ತಿಯನ್ನು ಖರೀದಿಸುವಂತೆ, ಶಾಂತಿನಿಕೇತನಕ್ಕೆ ಬರುವ ಪ್ರವಾಸಿಗರು ರವೀಂದ್ರನಾಥರ ಪ್ರತಿಮೆ ಅಥವಾ ವರ್ಣಚಿತ್ರ ಹೀಗೆ ಏನಾದರೂ ಒಂದನ್ನು ಕೊಂಡೊಯ್ಯದೆ ಇರುವುದಿಲ್ಲ" ಎಂದು 20ನೇ ಶತಮಾನದ ಈ ಖ್ಯಾತ ಸಾಹಿತ್ಯ ದಿಗ್ಗಜನನ್ನು ದೇವರಿಗೆ ಹೋಲಿಸುತ್ತಾ, ಭಕ್ತಿಯಿಂದ ಹೇಳಿದರು. ಕಾಕತಾಳೀಯವೆಂಬಂತೆ, ಅವರು ಮತ್ತು ಸಂಗೀತವೆರಡನ್ನೂ ಸೃಷ್ಟಿಸಿದ ಬಂಗಾಳಿ ಭಾಷೆಯಲ್ಲಿ ಠಾಕೂರ್ ಎನ್ನುವ ಪದಕ್ಕೆ ʼದೈವಿಕʼ ಎನ್ನುವ ಅರ್ಥವೂ ಇದೆ.
ಟ್ಯಾಗೋರ್ ಆ ಕಾಲದಲ್ಲಿ ಹಳ್ಳಿಯಾಗಿದ್ದ ಸ್ಥಳದಲ್ಲಿ ತಮ್ಮ ಆಶ್ರಮ ಶಾಲೆ ಮತ್ತು ವಿಶ್ವವಿದ್ಯಾಲಯವನ್ನು (ವಿಶ್ವಭಾರತಿ) ಸ್ಥಾಪಿಸಿ ಶತಮಾನಕ್ಕೂ ಹೆಚ್ಚು ಕಾಲವೇ ಸಂದಿದೆ. ಅಂದಿನ ಆ ಶಾಂತಿನಿಕೇತನ ಈಗ ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಜನನಿಬಿಡ ಪಟ್ಟಣ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ; ಕೋಲ್ಕತ್ತಾದಿಂದ ಎಕ್ಸ್ಪ್ರೆಸ್ ರೈಲಿನಲ್ಲಿ ಹೊರಟರೆ ಇಲ್ಲಿಗೆ ತಲುಪಲು ಮೂರು ಗಂಟೆಗಿಂತಲೂ ಕಡಿಮೆ ಸಮಯ ಹಿಡಿಯುತ್ತದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರರು ಇಂದಿಗೂ ಶಾಂತಿನಿಕೇತನದ ಮೂಲೆ ಮೂಲೆಯಲ್ಲೂ ಹಾಸುಹೊಕ್ಕಾಗಿದ್ದಾರೆ. ಅಂಗಡಿಗಳ ಬೋರ್ಡು, ಗೋಡೆ ಚಿತ್ರಗಳು, ಪುಟ್ಟ ಮೂರ್ತಿಗಳು, ಉಡುಪುಗಳು, ಚಿತ್ರಮಂದಿರಗಳು ಹಾಗೂ ಎಲ್ಲ ಬಗೆಯ ಸ್ಮರಣಿಕೆಗಳಲ್ಲೂ ಅವರ ಉಪಸ್ಥಿತಿ ಎದ್ದು ಕಾಣುತ್ತದೆ. ಶಾಂತಿನಿಕೇತನದಲ್ಲಿ ಟ್ಯಾಗೋರ್ ಅವರ ನೆನಪುಗಳನ್ನು ಎದುರುಗೊಳ್ಳದೆ ಒಂದೇ ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಿಲ್ಲ.

























