ಗುಜ್ಜರ್ ಪಶುಪಾಲಕ ಸಮುದಾಯಕ್ಕೆ ಸೇರಿದವರಾದ ಅಬ್ದುಲ್ ರಶೀದ್ ಶೇಖ್ ಅವರು ಪಡಿತರ ವಿತರಣೆಯಿಂದ ಹಿಡಿದು ಸರ್ಕಾರಿ ಯೋಜನೆಗಳಲ್ಲಿನ ಪಾರದರ್ಶಕತೆ ಕೊರತೆಯವರೆಗಿನ ಹಲವು ವಿಷಯಗಳ ಕುರಿತು ಆರ್ಟಿಐ (ಮಾಹಿತಿ ಹಕ್ಕು) ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಕಾಶ್ಮೀರದ ಹಿಮಾಲಯದ ತಪ್ಪಲುಗಳ ನಡುವೆ ವಾರ್ಷಿಕ ಸುಮಾರು 50ಕ್ಕೂ ಹೆಚ್ಚು ಕುರಿಗಳು ಹಾಗೂ ಸುಮಾರು 20 ಮೇಕೆಗಳ ಹಿಂಡಿನೊಂದಿಗೆ ತಿರುಗಾಡುವ 50 ವರ್ಷದ ಈ ಹಿರಿಯ ಪಶುಪಾಲಕ ಕಳೆದೊಂದು ದಶಕದಲ್ಲಿ ಇಪ್ಪತ್ತನಾಲ್ಕಕ್ಕೂ ಹೆಚ್ಚು ಅರ್ಜಿಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಿದ್ದಾರೆ.
“ಈ ಹಿಂದೆ ಅಧಿಕಾರಿಗಳಿಗೆ ಜನರಿಗಾಗಿ ಪರಿಚಯಿಸಲಾಗಿರುವ ಯೋಜನೆಗಳ ಕುರಿತು ತಿಳಿದಿರುತ್ತಿರಲಿಲ್ಲ, ಜೊತೆಗೆ ನಮಗೂ ನಮ್ಮ ಹಕ್ಕುಗಳ ಕುರಿತು ತಿಳಿದಿರುತ್ತಿರಲಿಲ್ಲ” ಎನ್ನುತ್ತಾರೆ ಅಬ್ದುಲ್. ಅವರು ದೂಧ್ ಪಾತ್ರಿ ಎನ್ನುವಲ್ಲಿರುವ ತಮ್ಮ ಕೋಠಾ (ಮಣ್ಣು, ಕಲ್ಲು ಮತ್ತು ಮರದಿಂದ ಮಾಡಿದ ಸಾಂಪ್ರದಾಯಿಕ ಮನೆ) ಎದುರು ನಿಂತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಪ್ರತಿ ವರ್ಷದ ಬೇಸಗೆಯಲ್ಲಿ ಅವರ ಕುಟುಂಬ ಇಲ್ಲಿಗೆ ವಲಸೆ ಬರುತ್ತದೆ. ಅವರು ಮೂಲತಃ ಬದ್ಗಾಮ್ ಜಿಲ್ಲೆಯ ಖಾನ್ ಸಾಹಿಬ್ ವಿಭಾಗದ ಮುಜ್ಪತ್ರಿ ಗ್ರಾಮದವರು.
"ಕಾನೂನುಗಳು ಮತ್ತು ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಆರ್ಟಿಐ ದೊಡ್ಡ ಪಾತ್ರ ವಹಿಸಿದೆ; ಅಧಿಕಾರಿಗಳೊಂದಿಗೆ ಹೇಗೆ ವ್ಯವಹರಿಸಬೇಕೆನ್ನುವುದನ್ನು ನಾವು ಇದರ ಮೂಲಕ ಕಲಿತಿದ್ದೇವೆ" ಎಂದು ಅಬ್ದುಲ್ ಹೇಳುತ್ತಾರೆ. ಮೊದಮೊದಲು ಸ್ವತಃ ಅಧಿಕಾರಿಗಳಿಗೂ ಆರ್ಟಿಐ ಕಾಯ್ದೆಯ ಬಗ್ಗೆ ತಿಳಿದಿರಲಿಲ್ಲ ಜೊತೆಗೆ "ಸಂಬಂಧಿತ ಯೋಜನೆಗಳು ಮತ್ತು ನಿಧಿ ವಿತರಣೆಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರೆ ಅವರು ಕಣ್ಣು ಕಣ್ಣು ಬಿಡುತ್ತಿದ್ದರು."
ಹೀಗೆ ಮಾಹಿತಿ ಕೇಳುವುದು ಊರಿನ ಜನರಿಗೆ ತೊಂದರೆ ಕೊಡುವುದಕ್ಕೆ ಕಾರಣವಾಯಿತು. ಬ್ಲಾಕ್ ಅಧಿಕಾರಿಗಳೊಡನೆ ಶಾಮೀಲಾಗಿ ಪೊಲೀಸರು ಸುಳ್ಳು ಎಫ್ಐಆರ್ ಪ್ರಥಮ ಮಾಹಿತಿ ವರದಿ) ಗಳನ್ನು ದಾಖಲಿಸಿದ್ದರು. ಅಬ್ದುಲ್ ಅವರಂತಹ ಆರ್ಟಿಐ ಚಳುವಳಿಯಲ್ಲಿ ಸಕ್ರಿಯವಾಗಿರುವ ನಾಗರಿಕರನ್ನು ಈ ವಿಷಯದಲ್ಲಿ ಗುರಿ ಮಾಡಲಾಗಿತ್ತು.
“ಅಧಿಕಾರಿಗಳು ಭ್ರಷ್ಟರಾಗಿದ್ದರು. ಅವರು ಮಾಡಿರುವ ಆಸ್ತಿಯನ್ನು ಒಮ್ಮೆ ನೋಡಿ” ಎನ್ನುತ್ತಾ ಅವರು ತಮ್ಮ ಮಾತಿಗೆ ಸಾಕ್ಷ್ಯ ಒದಗಿಸಲು ಪ್ರಯತ್ನಿಸಿದರು. ಅಬ್ದುಲ್ ಆರ್ಟಿಐ ಅರ್ಜಿ ಸಲ್ಲಿಸುವುದರ ಜೊತೆಜೊತೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ (ಎಫ್ಸಿಎಸ್ಸಿಎ ಇಲಾಖೆ) ಮುಜ್ಪತ್ರಿ ಗ್ರಾಮದ ಸುಮಾರು 50 ಜನರಿಗೆ ಪಡಿತರ ಚೀಟಿಯನ್ನು ನೀಡಬೇಕೆನ್ನುವ ಬೇಡಿಕೆಯನ್ನೂ ಇಟ್ಟಿದ್ದರು.











