ನಾನು ನನ್ನ ಇಡೀ ಬದುಕನ್ನು ಜಾನುವಾರುಗಳನ್ನು ನೋಡಿಕೊಂಡು ಕಳೆದಿದ್ದೇನೆ. ರಾಯಿಕಗಳಾಗಿ ಜಾನುವಾರುಗಳನ್ನು ನೋಡಿಕೊಳ್ಳುವುದು ನಮ್ಮ ಕೆಲಸ.
ನನ್ನ ಹೆಸರು ಸೀತಾದೇವಿ. ನನಗೀಗ 40 ವರ್ಷ. ನಮ್ಮ ಸಮುದಾಯದ ಕೆಲಸ ಹಿಂದಿನಿಂದಲೂ ಜಾನುವಾರುಗಳನ್ನು ನೋಡಿಕೊಳ್ಳುವುದು. ಅವುಗಳಲ್ಲಿ ಮುಖ್ಯವಾಗಿ ಒಂಟೆ. ಇತ್ತೀಚಿನ ದಿನಗಳಲ್ಲಿ ಕುರಿ, ಮೇಕೆ, ದನ ಮತ್ತು ಎಮ್ಮೆಗಳನ್ನು ಸಹ ಸಾಕುತ್ತಿದ್ದೇವೆ. ನಮ್ಮ ಈ ಕೇರಿಯ ಹೆಸರು ತಾರಮಗರಿ ಇದು ರಾಜಸ್ಥಾನದ ಪಾಲಿ ಜಿಲ್ಲೆಯ ಜೇಟರಾಮ್ ಬ್ಲಾಕಿನ ಕುರ್ಕಿ ಗ್ರಾಮದಿಂದ ಒಂದು ಕಿಲೋಮೀಟರ ದೂರದಲ್ಲಿದೆ.
ನನ್ನ ಪತಿಯ ಹೆಸರು ಹರಿ ರಾಮ್ ದೇವಸಿ [46] ನಮಗೆ ಸವಾಯಿ ರಾಮ್ ದೇವಸಿ ಮತ್ತು ಜಾಮ್ತಾ ರಾಮ್ ದೇವಸಿ ಎನ್ನುವ ಮಕ್ಕಳಿದ್ದಾರೆ. ಅವರು ತಮ್ಮ ಪತ್ನಿಯರಾದ ಆಚು ದೇವಿ ಮತ್ತು ಸಂಜು ದೇವಿಯ ಜೊತೆಗೆ ನಮ್ಮೊಂದಿಗೆ ಬದುಕುತ್ತಿದ್ದಾರೆ. ಆಚು ಮತ್ತು ಸವಾಯಿಗೆ 10 ತಿಂಗಳ ಗಂಡು ಮಗುವಿದೆ. ಇವರೆಲ್ಲರ ಜತೆಗೆ ನನ್ನಮ್ಮ 64 ವರ್ಷದ ಶಾಯರಿ ದೇವಿ ಕೂಡಾ ನಮ್ಮೊಂದಿಗೆ ಇರುತ್ತಾರೆ.
ನನ್ನ ದಿನಚರಿ ಬೆಳಗಿನ 6 ಗಂಟೆಗೆ ಆರಂಭಗೊಳ್ಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ನನ್ನ ಸೊಸೆ ಅಥವಾ ನಾನೇ ಮಾಡಿದ ಮೇಕೆ ಹಾಲಿನ ಚಹಾವನ್ನು ಕುಡಿಯುತ್ತೇನೆ. ನಂತರ ಅಡುಗೆ ಮಾಡಿ ಬಾಡ [ಕೊಟ್ಟಿಗೆ] ಕಡೆ ನಡೆಯುತ್ತೇವೆ. ಅಲ್ಲಿ ಹೋಗಿ ನಂತರದ ಬಳಕೆಗಾಗಿ ಕುರಿ ಮತ್ತು ಮೇಕೆಗಳ ಹಿಕ್ಕೆಯನ್ನು ನೆಲದಿಂದ ಎತ್ತಿ ಪಕ್ಕಕ್ಕಿಡುತ್ತೇವೆ.
ಬಾಡಾ ನಮ್ಮ ಮನೆಯ ಹಿಂದೆಯೇ ಇದ್ದು ಅಲ್ಲಿ ಸುಮಾರು 60 ಕುರಿ ಮತ್ತು ಆಡುಗಳಿವೆ. ಅದರಲ್ಲೇ ಒಂದು ಸಣ್ಣ ವಿಭಾಗವಿದ್ದು ಅಲ್ಲಿ ಕುರಿ ಮತ್ತು ಆಡುಗಳ ಮರಿಗಳನ್ನು ಬಿಡಲಾಗಿದೆ. ಬಾಡದ ಒಂದು ತುದಿಯಲ್ಲಿ ಅವುಗಳಿಗೆ ಹಾಕುವ ಒಣ ಮೇವು ಇರಿಸಿದ್ದೇವೆ. ಮೇವಿಗೆ ಸಾಮಾನ್ಯವಾಗಿ ಒಣ ಹುಲ್ಲನ್ನು ಬಳಸಲಾಗುತ್ತದೆ. ನಮ್ಮಲ್ಲಿ ಕುರಿ, ಮೇಕೆಗಳಲ್ಲದೆ ಎರಡು ದನಗಳೂ ಇದ್ದು ಅವುಗಳನ್ನು ಮನೆಯ ಮುಂದಿನ ಕೊಟ್ಟಿಗೆಯಲ್ಲಿ ಕಟ್ಟುತ್ತೇವೆ.










