"ರಾತ್ರಿ ಬೇಗ ಕಳೆಯಲಿ ಎಂದು ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ಗ್ರಾಮದಲ್ಲಿ ಈಗ ಯಾರೂ ವಾಸಿಸುವುದಿಲ್ಲ, ಹಾವುಗಳು ಓಡಾಡುತ್ತಲೇ ಇರುತ್ತವೆ" ಎಂದು ಕವಲ ಶ್ರೀದೇವಿ ಹೇಳುತ್ತಾರೆ. ಮೇ 2016ರಲ್ಲಿ ಸರ್ಕಾರ ಗ್ರಾಮದಲ್ಲಿ ವಿದ್ಯುತ್ ಸರಬರಾಜು ನಿಲ್ಲಿಸಿದ ನಂತರ ಅವರು ಮತ್ತು ಅವರ ಕುಟುಂಬದವರು ರಾತ್ರಿಗಳನ್ನು ಕತ್ತಲೆಯಲ್ಲಿ ಕಳೆಯುತ್ತಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಪೋಲವರಂ ಮಂಡಲದ ಪೈಡಿಪಾಕ ಗ್ರಾಮದಲ್ಲಿ ಗೋದಾವರಿ ನದಿಯ ಪಕ್ಕದಲ್ಲಿಯೇ ಉಳಿದುಕೊಂಡಿರುವ ಕೇವಲ 10 ಕುಟುಂಬಗಳಲ್ಲಿ ಶ್ರೀದೇವಿಯವರ ಕುಟುಂಬವೂ ಒಂದು. ನೀರಾವರಿ ಯೋಜನೆಗಾಗಿ ಸರ್ಕಾರವು ಜೂನ್ 2016 ರಲ್ಲಿ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಸುಮಾರು 429 ಕುಟುಂಬಗಳು ಇಲ್ಲಿಂದ ಸ್ಥಳಾಂತರಗೊಳ್ಳಬೇಕಾಯಿತು. ಜಲಯಜ್ಞಂ ಎಂಬ ಬೃಹತ್ ಯೋಜನೆಯ ಭಾಗವಾಗಿ, ಈ ಯೋಜನೆಯು 2004 ರಲ್ಲಿ ಉದ್ಘಾಟಿಸಲ್ಪಟ್ಟು 2018ರಲ್ಲಿ ಪೂರ್ಣಗೊಳ್ಳಬೇಕಿತ್ತು, ಆದರೆ ಪ್ರಸ್ತುತ ಸುಮಾರು 60 ಪ್ರತಿಶತದಷ್ಟು ಮಾತ್ರ ನಿರ್ಮಾಣವಾಗಿದೆ.
"ವಿದ್ಯುತ್ ಸರಬರಾಜು ನಿಲ್ಲಿಸಿದ ಒಂದು ತಿಂಗಳ ನಂತರ, ಕುಡಿಯುವ ನೀರನ್ನೂ ಸಹ ಸ್ಥಗಿತಗೊಳಿಸಿದರು" ಎಂದು ಶ್ರೀದೇವಿ ಹೇಳುತ್ತಾರೆ, ಈಗ ಅವರು ಅವರ ಪತಿಯಾದ ಸೂರ್ಯಚಂದ್ರಮ್ ಅರವರೊಂದಿಗೆ ಆಟೋರಿಕ್ಷಾದಲ್ಲಿ ಎಂಟು ಕಿಲೋಮೀಟರ್ ದೂರದಲ್ಲಿರುವ ಪೋಲವರಂ ಪಟ್ಟಣದಿಂದ 20 ರೂ.ಗೆ 20 ಲೀಟರ್ ನೀರಿನ ಕ್ಯಾನ್ ತರುತ್ತಾರೆ.
ಸ್ವಲ್ಪ ಸಮಯದವರೆಗೆ, ದಂಪತಿಗಳು ಮತ್ತು ಅವರ ಮೂವರು ಮಕ್ಕಳು (ಮೇಲಿನ ಮುಖಪುಟ ಚಿತ್ರವನ್ನು ನೋಡಿ) ಗೋಪಾಲಪುರಂ ಮಂಡಲದ ಹುಕುಂಪೇಟದಲ್ಲಿರುವ ಪುನರ್ವಸತಿ ಕಾಲೋನಿಗೆ ಅನೇಕ ಕುಟುಂಬಗಳ ಜೊತೆಗೆ ಸ್ಥಳಾಂತರಗೊಂಡರು. ಆದರೆ ಸುಮಾರು ಒಂದು ತಿಂಗಳ ನಂತರ ಅವರು ಪೈಡಿಪಾಕಕ್ಕೆ ಮರಳಿದರು. "ನಾವು ಅಧಿಕಾರಿಗಳನ್ನು ನಂಬಿದ್ದೆವು, ಆದರೆ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡ ನಂತರ ಹಿಂತಿರುಗಿದೆವು" ಎಂದು ಶ್ರೀದೇವಿ ಕಣ್ಣೀರ ಧಾರೆಯನ್ನು ತಡೆಯುತ್ತ ಹೇಳುತ್ತಾರೆ.









