ಗ್ಯಾ ಹಳ್ಳಿಯ ಪಶುಪಾಲಕರಾದ ತಾಶಿ ಫುಂಟ್ಸೊಗ್ ಮತ್ತು ಟುಂದುಪ್ ಚೋಸ್ಗೈಲ್ ಅವರು ಹೇಳುವಂತೆ, “ತೋಳಗಳು ಸಂತಾನೋತ್ಪತ್ತಿಯ ಅವಧಿಯಲ್ಲಿ, ತಮ್ಮ ಮರಿಗಳಿಗೆ ಆಹಾರವನ್ನು ಒದಗಿಸುವ ಸಲುವಾಗಿ, ನಮ್ಮ ಉಪಸ್ಥಿತಿಯ ಹೊರತಾಗಿಯೂ, ಅಪಾಯವನ್ನೂ ಲೆಕ್ಕಿಸದೆ, ನಮ್ಮ ಜಾನುವಾರುಗಳ ಮೇಲೆ ದಾಳಿಮಾಡುತ್ತವೆ.” ತೋಳಗಳನ್ನು ಕುರಿತ ಇವರ ದೃಷ್ಟಿಕೋನವು ಪಶುಪಾಲಕ ಸಮುದಾಯಗಳು ತಮ್ಮ ನೆಲೆಯನ್ನು ಹಂಚಿಕೊಂಡಿರುವಂತಹ ಕಾಡಿನ ಪರಭಕ್ಷಕ ಪ್ರಾಣಿಗಳ ಬಗೆಗಿನ ಅವರ ಗ್ರಹಿಕೆಯನ್ನು ತಿಳಿಸುತ್ತದೆ. ಆದರೆ, ತಮ್ಮ ಜೀವನೋಪಾಯದ ಏಕೈಕ ಮೂಲವೆನಿಸಿದ ಜಾನುವಾರುಗಳ ನಷ್ಟದಿಂದಾಗಿ ಸಮುದಾಯವು ಎದುರಿಸುವ ಭಾವನಾತ್ಮಕ ಒತ್ತಡ ಮತ್ತು ಆರ್ಥಿಕ ವೆಚ್ಚದಿಂದಾಗಿ ಆಗಾಗ್ಗೆ ಈ ಸಹಬಾಳ್ವೆಗೆ ಮಂಕುಕವಿಯುತ್ತದೆ.
ತಮ್ಮ ಪ್ರಾಣಿಗಳ ಸಂರಕ್ಷಣೆ ಮತ್ತು ಮಾಂಸಾಹಾರಿಗಳ ಸಂಖ್ಯೆಯನ್ನು ಕಡಿಮೆಮಾಡಲು ಈ ಸಮುದಾಯಗಳು ಶಾಂಗ್ಡಾಂಗ್ಸ್ ಎಂಬ ಪಾರಂಪರಿಕ ವಿಧಾನವನ್ನು ಬಳಸುತ್ತವೆ. ತಾಶಿ ಫುಂಟ್ಸೊಗ್ ಮತ್ತು ಟುಂದುಪ್ ಚೋಸ್ಗೈಲ್ ಹೀಗೆನ್ನುತ್ತಾರೆ: “ನನ್ನ ಬಾಲ್ಯದಲ್ಲಿ ಕಂಡುಬರುತ್ತಿದ್ದ ರೂಢಿಯೊಂದನ್ನು ನೆನಪಿಸಿಕೊಳ್ಳುತ್ತೇನೆ. ಅಕ್ಟೋಬರ್ ತಿಂಗಳಿನಲ್ಲಿ ಗ್ರಾಮಸ್ಥರು ತಮ್ಮ ಸರದಿಯ ಪ್ರಕಾರ, ತಮ್ಮ ಸ್ವಂತ ಕುರಿ ಮಂದೆಯಿಂದ ಕುರಿಯೊಂದನ್ನು ಶಾಂಗ್ಡಾಂಗ್ನ ಒಳಗೆ ಇರಿಸುವುದು ಕಡ್ಡಾಯವಾಗಿತ್ತು. ಇದರಿಂದಾಗಿ ಮಾಂಸಾಹಾರಿ ಪ್ರಾಣಿಗಳು ಪ್ರಲೋಭನೆಗೆ ಒಳಗಾಗುತ್ತಿದ್ದವು. ತಮ್ಮ ಕರ್ತವ್ಯವವನ್ನು ನಿಭಾಯಿಸುವ ಸಲುವಾಗಿ, ಪ್ರತಿಯೊಬ್ಬರೂ ಸರದಿಯ ಪ್ರಕಾರ ಕುರಿ ಅಥವಾ ಮೇಕೆಗೆ ಜನವರಿ ತಿಂಗಳಿನವರೆಗೂ ಆಹಾರವನ್ನು ನೀಡುತ್ತಿದ್ದರು. ಯಾವುದೇ ಸ್ವಂತ ಜಾನುವಾರುಗಳಿಲ್ಲದಿದ್ದರೂ, ಸ್ವಲ್ಪ ಹುಲ್ಲು ಮತ್ತು ಒಂದು ತಪ್ಪಲೆ ನೀರನ್ನು ಅವರು ಕುರಿ ಅಥವಾ ಮೇಕೆಗೆ ಒದಗಿಸುತ್ತಿದ್ದರು. ಯಾವುದಾದರೂ ತೋಳವು ಸಿಕ್ಕಿಬಿದ್ದರೆ, ಕುರಿ ಅಥವಾ ಮೇಕೆಗೆ ಆಹಾರವನ್ನು ನೀಡುವ ಕರ್ತವ್ಯವನ್ನು ನಿಭಾಯಿಸುತ್ತಿದ್ದ ವ್ಯಕ್ತಿಯು ಅದನ್ನು ಕೊಲ್ಲಬೇಕಿತ್ತು.”


