ರಾಜು ಚೌಧರಿಯವರು ಓರ್ವ ಬಹುರೂಪಿ - ಹಲವು (ಬಹು) ರೂಪಗಳ (ರೂಪಿ) ವ್ಯಕ್ತಿತ್ವ. ಈಗ 40 ವರ್ಷ ವಯಸ್ಸಿನ ಚೌಧರಿ 14 ನೇ ವಯಸ್ಸಿನಿಂದಲೂ ಪ್ರದರ್ಶನ ನೀಡುತ್ತಿದ್ದಾರೆ. "ನಾನು ಇದನ್ನು ಬಹಳ ವರ್ಷಗಳಿಂದ ಮಾಡುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. "ನಮ್ಮ ಪೂರ್ವಜರು ಬಹುರೂಪಿಗಳಾಗಿದ್ದರು, ನನ್ನ ಮಕ್ಕಳು ಕೂಡ..."
ರಾಜು ಅವರು ಪಶ್ಚಿಮ ಬಂಗಾಳದ ಪರಿಶಿಷ್ಟ ಪಂಗಡದ ಬೇಡಿಯಾ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ಪಶ್ಚಿಮ ಬಂಗಾಳದ ಎಸ್ಟಿ ಜನಸಂಖ್ಯೆಯ ಸುಮಾರು ಶೇ. 5.8 ರಷ್ಟಿದೆ (ಜನಗಣತಿ 2011). ಬಿರ್ಭುಮ್ ಜಿಲ್ಲೆಯ ಲಬ್ಪುರ್ ಬ್ಲಾಕ್ನಲ್ಲಿರುವ ಅವರ ಗ್ರಾಮ ಬಿಶಯ್ಪುರದಲ್ಲಿ ಸುಮಾರು 40 ಬೇಡಿಯಾ ಕುಟುಂಬಗಳು ವಾಸಿಸುತ್ತಿವೆ, ಅವರೆಲ್ಲರೂ ಸಾಂಪ್ರದಾಯಿಕವಾಗಿ ಬಹುರೂಪಿ ಪ್ರದರ್ಶಕರು.
ಇಲ್ಲಿ ತೋರಿಸಿರುವ ವೀಡಿಯೊದಲ್ಲಿ, ರಾಜು ಕಾಲ್ಪನಿಕ ಪಾತ್ರವಾದ ತಾರಾ ಸುಂದರಿಯ ವೇಷ ಧರಿಸಿದ್ದಾರೆ. ಸ್ಥಳೀಯ ಪುರಾಣಗಳಲ್ಲಿ, ಅವಳು ಕಾಳಿ ದೇವಿಯ ಒಂದು ರೂಪ. ಈ ಪಾತ್ರದ ಮೂಲಕ, ಅವರು ಬುರ್ದ್ವಾನ್ ರಾಜನ ಕಥೆಯನ್ನು ನಿರೂಪಿಸುತ್ತಾರೆ - ಕಲ್ಪನೆ ಮತ್ತು ಪ್ರಾಸಪದಗಳಿಂದ ರಚಿತ ಈ ಪೂರ್ವಾಭಾವಿಯಾದ ಕಥೆಯಲ್ಲಿ ಬಂಗಾಲಿ ಭಾಷೆಯಲ್ಲಿ ಕೆಲವು ಸಾಲುಗಳೂ ಇವೆ. ಕಾಲಿಗೆ ಘುಂಗ್ರೂಗಳನ್ನು ಧರಿಸಿ, ಮರದ ಕೋಲಿನ ಸಹಾಯದಿಂದ ಲಯಬದ್ಧವಾಗಿ, ಮೇ ತಿಂಗಳ 40-ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ (ಅವರ ಹಳ್ಳಿಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದಾಗ ಇದ್ದ ತಾಪಮಾನ, 2017), ಆತ ಗಟ್ಟಿಯಾಗಿ ಹಾಡುತ್ತಾ ನರ್ತಿಸುತ್ತಾರೆ.




