"ಅಬ್ರಿ ಜೋ ಆಯೇಗಾ ನಾ ವೋಟ್ ಲೇನೆ, ತಾ ಕಹೆಂಗೆ ಕಿ ಪಹಲೆ ಪೆನ್ಷನ್ ದೋ [ವೋಟು ಕೇಳಲಿ ಅವರು ಈ ಸಲ, ಮೊದಲು ಪೆನ್ಷನ್ ಕೊಡಿ] ' ಎನ್ನುತ್ತೇವೆ " ಎಂದು ಲಿಟಾಟಿ ಮುರ್ಮು ಹೇಳುತ್ತಾರೆ.
ಜಾರ್ಖಂಡ್ ರಾಜ್ಯದ ದುಮ್ಕಾ ಜಿಲ್ಲೆಯ ಕುಸುಮ್ ದಿಹ್ ಗ್ರಾಮದ ಬುರುಟೋಲಾ ಎಂಬ ಕುಗ್ರಾಮದಲ್ಲಿ ತನ್ನ ಮಣ್ಣಿನ ಮನೆಯ ಹೊರಗಿನ ದತ್ತಿ (ಜಗಲಿ) ಮೇಲೆ ಕುಳಿತು ಅವರು ಪರಿಯೊಂದಿಗೆ ಮಾತನಾಡುತ್ತಿದ್ದರು.
“ಈ ಬಾರಿ ಮನೆ ಮತ್ತು ಪಿಂಚಣಿ ಕೊಡುವಂತೆ ಕೇಳುತ್ತೇವೆ” ಎಂದು ಅವರೊಂದಿಗಿದ್ದ ಅವರ ಪಕ್ಕದ ಮನೆಯ ಸ್ನೇಹಿತೆ ಶರ್ಮಿಳಾ ಹೆಂಬ್ರಮ್ ಹೇಳಿದರು.
“ಅವರು ಬರುವುದು ಈ ಸಮಯದಲ್ಲಿ ಮಾತ್ರ” ಎಂದು ರಾಜಕೀಯ ನಾಯಕರನ್ನು ಉಲ್ಲೇಖಿಸಿ ತಮಾಷೆಯಾಗಿ ಹೇಳುತ್ತಾರೆ. ಚುನಾವಣೆಗೆ ಮೊದಲು ಕಾಣಿಸಿಕೊಳ್ಳುವ ಅವರು ಹಳ್ಳಿಯ ಜನರಿಗೆ ಹಣ ಕೊಡುತ್ತಾರೆ. “ಅವರು [ರಾಜಕೀಯ ಪಕ್ಷಗಳು] 1,000 ರೂಪಾಯಿಗಳನ್ನು, 500 ರೂಪಾಯಿಗಳನ್ನು ಗಂಡಸರಿಗೆ ಮತ್ತು 500 ರೂಪಾಯಿಗಳನ್ನು ನಮಗೆ ನೀಡುತ್ತಾರೆ" ಎಂದು ಶರ್ಮಿಳಾ ಹೇಳುತ್ತಾರೆ.
ಇಬ್ಬರೂ ಮಹಿಳೆಯರೂ ಸರಕಾರಿ ಯೋಜನೆಗಳಿಂದ ವಂಚಿತರಾಗಿರುವುದರಿಂದಾಗಿ ಹಣವೆನ್ನುವುದು ಇಬ್ಬರೂ ಮಹಿಳೆಯರಿಗೆ ಬಹಳ ಮುಖ್ಯ. ಲಿಟಾಟಿ ಅವರ ಪತಿ 2022 ರಲ್ಲಿ ಇದ್ದಕ್ಕಿದ್ದಂತೆ ನಿಧನರಾದರು ಮತ್ತು ಶರ್ಮಿಳಾ ಅವರ ಪತಿ ಒಂದು ತಿಂಗಳ ಅನಾರೋಗ್ಯದ ನಂತರ 2023ರಲ್ಲಿ ನಿಧನರಾದರು. ಸಮಾನ ದುಃಖಿಗಳಾದ ಈ ಮಹಿಳೆಯರು ಕೆಲಸಕ್ಕೆ ಹೋಗುವಾಗ ಜೊತೆಯಾಗಿ ಹೋಗುತ್ತಾರೆ. ಅದೊಂದು ಬಾಂಧವ್ಯ ಅವರಲ್ಲಿ ಮೂಡಿದೆ.
ಗಂಡನನ್ನು ಕಳೆದುಕೊಂಡ ಲಿಟಾಟಿ ಮತ್ತು ಶರ್ಮಿಳಾ ಇಬ್ಬರೂ ವಿಧವಾ ಪಿಂಚಣಿ ಪಡೆಯಲು ಪ್ರಯತ್ನಿಸಿದರು. ಸರ್ವಜನ್ ಪಿಂಚಣಿ ಯೋಜನೆ ಅಡಿಯಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಗೆ ಮಾಸಿಕ 1,000 ರೂ. ದೊರೆಯುತ್ತದೆ. ಪ್ರಯತ್ನಗಳಿಂದ ನಿರಾಶರಾದ ಲಿಟಾಟಿ ಹೇಳುತ್ತಾರೆ, “ನಾವು ಅರ್ಜಿಗಳನ್ನು ತುಂಬಿಸಿ ಮುಖಿಯಾ [ಗ್ರಾಮದ ಮುಖ್ಯಸ್ಥರ] ಬಳಿಗೆ ಹೋದೆವು, ಆದರೆ ಏನೂ ಸಿಗಲಿಲ್ಲ."












