“ನನ್ನ ಹೆಸರು ತುಳಸಿಭಾಯಿ ನರನ್ಭಾಯಿ. ನನ್ನನ್ನು ಬೇಟಿಯಾಗಬೇಕೆಂದರೆ ʼಬಚ್ಚನ್ನನ್ನು ಕರೆಯಿರಿʼ ಎಂದು ಯಾರನ್ನಾದರೂ ಕೇಳಬೇಕು. ಎಲ್ಲರಿಗೂ ನನ್ನ ಪರಿಚಯ ಇರುವುದೇ ಆ ಹೆಸರಿನಿಂದ” ಎಂದು ಸಿನೇಮಾ ಸೂಪರ್ಸ್ಟಾರ್ನ ಹೆಸರಿನಿಂದ ಕರೆಸಿಕೊಳ್ಳುವುದರಲ್ಲಿ ತಮಗಿರುವ ಸಂತೋಷವನ್ನು ವ್ಯಕ್ತಪಡಿಸುತ್ತಾ ತುಳಸಿಭಾಯಿ ಹೇಳುತ್ತಾರೆ.
60 ವರ್ಷ ಪ್ರಾಯದ ಈ ಹಿರಿಯ ವ್ಯಕ್ತಿ ತನ್ನ ಮಗ ತನುಭಾಯಿ ಜೊತೆಗೆ ಅಹಮದಾಬಾದಿನ ಗುಲ್ಬಾಯಿ ಟೆಕ್ರಾ ಬಳಿ ರಸ್ತೆ ಬದಿಯಲ್ಲಿ ವಾಸಿಸುತ್ತಾರೆ. ಇವರ ಪತ್ನಿ ತನುಭಾಯಿಯವರಿಗೆ ಜನ್ಮ ನೀಡಿದ ತಕ್ಷಣವೇ ಮರಣ ಹೊಂದಿದರು. “ನನ್ನನ್ನು ನನ್ನ ಅಜ್ಜಿಯೇ ಸಾಕಿ ದೊಡ್ಡವನನ್ನಾಗಿ ಮಾಡಿದರು. ನೂರು ವರ್ಷ ದಾಟಿರುವ ಅವರು ಈಗಲೂ ಬದುಕಿದ್ದಾರೆ,” ಎಂದು ಮೂವತ್ತರ ಹರೆಯದ ತನುಭಾಯಿ ನಮಗೆ ಹೇಳುತ್ತಾರೆ.
ತಂದೆ ಮತ್ತು ಮಗ ಬೆಳಗ್ಗೆ ಒಂಬತ್ತರಿಂದ ರಾತ್ರಿ ಬಂಬತ್ತರ ವರೆಗೆ ಗುಜರಿ ಹೆಕ್ಕಿ, ಮೆಮ್ನಗರದ ಭಂಗಾರ್ವಾಲರಿಗೆ (ಗುಜರಿ ವ್ಯಾಪಾರಿಗಳು) ಮಾರುತ್ತಾರೆ. ಚಿಂದಿ ಆಯುವ ಎಲ್ಲರೂ ತಾಲೂಕಿನ ಈ ನಗರಕ್ಕೆ ಬಂದು ತಾವು ಸಂಗ್ರಹಿಸಿದ ಗುಜಿರಿಯನ್ನು ಕೆಜಿ ಲೆಕ್ಕದಲ್ಲಿ ಮಾರುತ್ತಾರೆ.
ಈ ವರದಿಗಾರರು ಅವರನ್ನು ಬೇಟಿ ಮಾಡುವಾಗ, ಮಧ್ಯಾಹ್ನ ಎರಡು ಗಂಟೆಯಿಂದ ಕೆಲಸ ಮಾಡಿ ಸುಮಾರು ನಾಲ್ಕು ಕೆಜಿಗಿಂತ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು ಮತ್ತು ರಟ್ಟಿನ ಹಾಳೆಗಳನ್ನು ಸಂಗ್ರಹಿಸಿದ್ದರು. ಅದನ್ನು ಗುಜರಿ ವ್ಯಾಪಾರಿಗೆ ಮಾರಿ 110 ರುಪಾಯಿ ಸಂಪಾದಿಸಿದ್ದರು. “ಬೇಸಿಗೆಯ ಈ ಸಮಯದಲ್ಲಿ ಬಿಸಿಲು ವಿಪರೀತ. ನಮ್ಮ ಆರೋಗ್ಯ ಕಡೆಬಹುದು. ನಾವು ಹೆಕ್ಕಿದ ರಟ್ಟಿನ ಹಾಳೆಗಳನ್ನೇ ಕೈಬೀಸಣಿಗೆ ಮಾಡಿಕೊಂಡು ಈ ಉರಿ ಬಿಸಿಲಿಗೆ ಗಾಳಿ ಹಾಕಿಕೊಳ್ಳುತ್ತೇವೆ,” ಎಂದು ತುಳಸಿಭಾಯಿ ಹೇಳುತ್ತಾರೆ.






