ಮೊದಲ ನೋಟಕ್ಕೆ, ಪೆರುವೆಂಬ, ಚರ್ಮದ ಕಾರ್ಖಾನೆಯಂತೆ ಕಾಣುತ್ತದೆ. ಹಸು, ಎಮ್ಮೆ ಮತ್ತು ಮೇಕೆಯಂತಹ ಪ್ರಾಣಿಗಳ ಚರ್ಮಗಳನ್ನು ಹಳ್ಳಿಯ ಅಂಗಳದಲ್ಲಿ ಒಣಗಿಸಲಾಗುತ್ತಿದ್ದು, ಚರ್ಮವನ್ನು ಮಾರಾಟಕ್ಕಾಗಿ ಸಂಸ್ಕರಿಸಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಆದರೆ, ಅಂಗಳದಾಚೆ ಮತ್ತು ಮನೆಗಳ ಒಳಗೆ, ಕಚ್ಚಾ ಚರ್ಮಗಳನ್ನು ಕಡಚಿ ಕೊಲ್ಲನ್ ಸಮುದಾಯದ ಕುಶಲಕರ್ಮಿಗಳು ಉತ್ತಮ ಗುಣಮಟ್ಟದ ತಾಳವಾದ್ಯಗಳಾಗಿ ಪರಿವರ್ತಿಸುತ್ತಾರೆ.
ದಕ್ಷಿಣ ಭಾರತದಾದ್ಯಂತದ ತಾಳವಾದ್ಯಗಾರರು ಕೇರಳದ ಪಾಲಕ್ಕಾಡ್ ನಗರದಿಂದ 14 ಕಿಲೋಮೀಟರ್ ದೂರದ ಪೆರುವೆಂಬದಲ್ಲಿ ತಯಾರಿಸುವ ಚರ್ಮಾಧಾರಿತ ವಾದ್ಯಗಳನ್ನು ಬಯಸುತ್ತಾರೆ. “ನಾವು ವಾದ್ಯಗಳನ್ನು ನುಡಿಸಬಲ್ಲ ಸಂಗೀತಗಾರರಲ್ಲ, ಆದರೆ ಉತ್ತಮ-ಗುಣಮಟ್ಟದ ವಾದ್ಯಗಳನ್ನು ತಯಾರಿಸುವ ನಿಟ್ಟಿನ ಶೃತಿಗಳು (ಅರ್ಧಸ್ವರಕ್ಕಿಂತ ಕಡಮೆ ಅಂತರದ ಸ್ಥಾಯಿಭೇದದ ಘಟಕಗಳು) ತಿಳಿದಿವೆ. ಆರ್ಡರ್ಗಳನ್ನು ಪಡೆದ ನಂತರವಷ್ಟೇ ನಾವು ವಾದ್ಯಗಳನ್ನು ತಯಾರಿಸುತ್ತೇವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅವು ತಯಾರಿಸಲ್ಪಡುತ್ತವೆ. ಅಂಗಡಿಗಳು ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ಮಾರುವುದಿಲ್ಲ” ಎನ್ನುತ್ತಾರೆ ಕಡಚಿ ಕೊಲ್ಲನ್ ಮೃದಂಗ-ತಯಾರಕ 44ರ ಕೆ. ಮಣಿಕಂದನ್.
ಪೆರುವೆಂಬದ ಕಡಚಿ ಕೊಲ್ಲನ್ನರು ಬಹುತೇಕವಾಗಿ ದೇವಸ್ಥಾನದ ಸಂಗೀತ ಹಾಗೂ ಕರ್ನಾಟಕ ಸಂಗೀತದಲ್ಲಿ ಬಳಸುವ ಮೃದಂಗ, ಮದ್ದಳೆ, ಚಂಡೆ, ತಬಲ, ಢೋಲ್, ಕಂಜಿರ ಇತ್ಯಾದಿ ಡ್ರಮ್ಗಳನ್ನು ವಿನ್ಯಾಸಗೊಳಿಸಿ ಅವನ್ನು ತಯಾರಿಸುತ್ತಾರೆ. ಈ ಸಮುದಾಯವು ಇನ್ನೂರಕ್ಕೂ ಹೆಚ್ಚು ವರ್ಷಗಳಿಂದಲೂ ತಾಳವಾದ್ಯ ತಯಾರಿಸುತ್ತಿದೆ. ಮಣಿಕಂದನ್ ಹೇಳುವಂತೆ ಇದಕ್ಕೂ ಮೊದಲು, ಅವರು ಕೃಷಿ ವಾದ್ಯಗಳನ್ನು ತಯಾರಿಸುವ ಕಮ್ಮಾರರಾಗಿದ್ದರು. ಪಾಲಕ್ಕಾಡ್ ಜಿಲ್ಲೆಯ ಪೆರುವೆಂಬ ಗ್ರಾಮಪಂಚಾಯತಿಯ ಸುಪರ್ದಿನಲ್ಲಿರುವ ಕರ್ನಾಟಕ ಸಂಗೀತದ ಕೇಂದ್ರವೆನಿಸಿದ್ದ ಪಾಲಕ್ಕಾಡ್ನ ಸ್ಥಾನಮಾನವು ಪೆರುವೆಂಬ ಹಳ್ಳಿಯ ಕಡಚಿ ಕೊಲ್ಲನ್ನರಿಗೆ ಉತ್ತಮ ಆದಾಯವನ್ನು ಪಡೆತಯವ ನಿಟ್ಟಿನಲ್ಲಿ, ಸಂಗೀತ ವಾದ್ಯಗಳ ತಯಾರಿಗೆ ಪ್ರೇರೇಪಿಸಿತು.
ನಂತರದಲ್ಲಿ, ಪೆರುವೆಂಬದಲ್ಲಿ ತಯಾರಿಸಲ್ಪಟ್ಟ ಮೃದಂಗಕ್ಕೆ ಟಿ. ಎಸ್. ಮಣಿ ಅಯ್ಯರ್ (1912-1981) ಎಂಬ ಮೃದಂಗ ಪರಿಣಿತರು ನೀಡಿದ ಮಾನ್ಯತೆಯಿಂದಾಗಿ ಅದರ ಪ್ರಸಿದ್ಧಿಯು ಕೇರಳದಾಚೆಗಿನ ಕರ್ನಾಟಕ ಸಂಗೀತದ ವಲಯಗಳಲ್ಲಿ ಪಸರಿಸಿತು. ಈ ಹಳ್ಳಿಗೆ ಭೇಟಿ ನೀಡಲು ಮದ್ರಾಸಿನ (ಈಗಿನ ಚನ್ನೈ) ಸಂಗೀತಗಾರರನ್ನು ಅವರು ಆಹ್ವಾನಿಸಲಾಗಿ, ಅನೇಕರು ಕಡಚಿ ಕೊಲ್ಲನ್ನರ ಖಾಯಂ ಗ್ರಾಹಕರಾದರು. ಮಣಿಕಂದನ್ ಅವರ ತಂದೆ ಕೃಷ್ಣನ್ ಮರುತಲಪರಂಬು ಎಂಬುವವರೊಂದಿಗೆ ಅಯ್ಯರ್ ಅವರಿಗೆ ಗಾಢವಾದ ಸ್ನೇಹವಿತ್ತು. ಅಯ್ಯರ್ ಅವರ ಸ್ವಂತ ಮೃದಂಗಗಳನ್ನು ಇವರು ತಯಾರಿಸುತ್ತಿದ್ದರು.








